ಬೆಂಗಳೂರು, ಅ.21 www.bengaluruwire.com : ಚೈನಾ ಲೋನ್ ಆಪ್ ತನಿಖೆಗೆ ಸಂಬಂಧಿಸಿದಂತೆ ಅ.19 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002 ರ ನಿಬಂಧನೆಗಳ ಅಡಿಯಲ್ಲಿ ಬೆಂಗಳೂರಿನ ಐದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದ ಜಾರಿ ನಿರ್ದೇಶನಾಲಯವು (ED)ಚೈನಾ ಪ್ರಜೆಗಳ ನಿಯಂತ್ರಿತ ಸಂಸ್ಥೆಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿದ್ದ 78 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ.
ಇಲ್ಲಿಯವರೆಗೆ ಚೈನಾ ರಾಷ್ಟ್ರದ ವ್ಯಕ್ತಿಗಳು ನಿರ್ವಹಿಸುತ್ತಿರುವ ನಕಲಿ ವ್ಯಾಪಾರಿ ಐಡಿ ಮತ್ತು ಬ್ಯಾಂಕ್ ಖಾತೆಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 95 ಕೋಟಿರೂ.ಗಳನ್ನು ಇಡಿ ಸಂಸ್ಥೆಯು ವಶಪಡಿಸಿಕೊಂಡಂತಾಗಿದೆ.
ಈ ಚೀನಾ ವ್ಯಕ್ತಿಗಳ ಬೆಂಬಲಿತ ಸಂಸ್ಥೆಗಳು ನಡೆಸುತ್ತಿರುವ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಣ್ಣ ಮೊತ್ತದ ಸಾಲವನ್ನು ಪಡೆದ ಸಾರ್ವಜನಿಕರಿಗೆ ಸುಲಿಗೆ ಮತ್ತು ಕಿರುಕುಳದಲ್ಲಿ ತೊಡಗಿರುವ ಸಂಬಂಧ ಹಲವಾರು ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 18 ಎಫ್‌ಐಆರ್‌ಗಳನ್ನು ದಾಖಲಾಗಿದೆ. ಈ ಪ್ರಕರಣವನ್ನು ಆಧರಿಸಿ ಇಡಿ ಈ ದಾಳಿಯನ್ನು ನಡೆಸಿ ತನಿಖೆ ಕೈಗೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
PMLA ತನಿಖೆಯ ಸಮಯದಲ್ಲಿ, ಈ ಪೇಮೆಂಟ್ ಗೇಟ್ ವೇ ಅಥವಾ ನಕಲಿ ದಾಖಲೆ ಸಲ್ಲಿಸಿ ವ್ಯಾಪಾರಿ ಐಡಿಯನ್ನು ಬಳಸಿ ಚೀನೀ ಪ್ರಜೆಗಳು ನಿಯಂತ್ರಿಸಿ ನಿರ್ವಹಿಸುತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ. ಈ ಘಟಕಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದವು ಎಂದರೆ ಭಾರತೀಯರ ನಕಲಿ ದಾಖಲೆಗಳನ್ನು ಬಳಸಿ ಮತ್ತು ಇಲ್ಲಿನ ವ್ಯಾಪಾರಿ ಘಟಕಗಳಿಗೆ ಡಮ್ಮಿ ನಿರ್ದೇಶಕರನ್ನಾಗಿ ಮಾಡುತ್ತಿದೆ. ಆ ಮೂಲಕ ಅಕ್ರಮವಾಗಿಆದಾಯವನ್ನು ಸೃಷ್ಟಿಸುತ್ತಿದೆ.
ಪೇಮೆಂಟ್ ಗೇಟ್‌ವೇ ಅಥವಾ ಬ್ಯಾಂಕ್‌ಗಳಲ್ಲಿ ಹೊಂದಿರುವ ವಿವಿಧ ಮರ್ಚೆಂಟ್ ಐಡಿಗಳು ಹಾಗೂ ಖಾತೆಗಳ ಮೂಲಕ ಹೇಳಲಾದ ಘಟಕಗಳು ತಮ್ಮ ಶಂಕಿತ ಮತ್ತು ಅಕ್ರಮ ವ್ಯವಹಾರವನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನಡೆಸಿದ ತನಿಖೆ ಮತ್ತು ಮಾಹಿತಿಯ ಆಧಾರದ ಮೇಲೆ ಈ ಪ್ರಕರಣದಲ್ಲಿ ಇಡಿ, ಶೋಧ ಕಾರ್ಯಾಚರಣೆ ನಡೆಸಿದೆ.
ರೇಜರ್‌ಪೇ ಪ್ರೈವೇಟ್ ಲಿಮಿಟೆಡ್‌ನ ಆವರಣಗಳು ಮತ್ತು ಈ ಘಟಕಗಳಿಗೆ ಸಂಬಂಧಿಸಿದ ಬ್ಯಾಂಕ್‌ನ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಹೇಳಲಾದ ಘಟಕಗಳು ವಿವಿಧ ಮರ್ಚೆಂಟ್ ಐಡಿಗಳು/ಪೇಮೆಂಟ್ ಗೇಟ್‌ವೇಗಳು ಅಥವಾ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳ ಮೂಲಕ ಅಕ್ರಮವಾಗಿ ಆದಾಯವನ್ನು ಗಳಿಸುತ್ತಿರುವುದು ಗಮನಕ್ಕೆ ಬಂದಿದೆ. ಮತ್ತು ಅವರು ಕೆವೈಸಿ (KYC) ದಾಖಲೆಗಳಿಗಾಗಿ ನಕಲಿ ವಿಳಾಸಗಳನ್ನು ಸಲ್ಲಿಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.
ಪಿಎಂಎಲ್ ಎ ಕಾಯ್ದೆಯ ಸೆಕ್ಷನ್ 17(1) ಅಡಿಯಲ್ಲಿ ಒಟ್ಟು 78 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ಈ ತನಿಖೆಗೆ ಸಂಬಂಧಿಸಿದಂತೆ ಒಟ್ಟು 95 ಕೋಟಿ ರೂ.ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.