ಬೆಂಗಳೂರು, ಅ.20 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಮಾರುತಿ ಮಂದಿರ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರ ಸೇವೆಗೆ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಗುರುವಾರ ಚಾಲನೆ ನೀಡಿದರು.
ಈ ಹಿಂದೆ ಮಾರುತಿ ಮಂದಿರ ವಾರ್ಡ್ ನಲ್ಲಿ ಡಯಾಲಿಸಿಸ್ ಕೇಂದ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು. ಅ ಸಂದರ್ಭದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗಿದ್ದ ಕಾರಣ ಈ ಕೇಂದ್ರವನ್ನು ತಾತ್ಕಾಲಿಕವಾಗಿ ಕೋವಿಡ್-19 ಆಸ್ಪತ್ರೆಯಾಗಿ ಬಳಸಿಕೊಳ್ಳಲಾಗಿತ್ತು. ಈಗ ಕೋವಿಡ್ ಸೋಂಕು ಗಣನೀಯವಾಗಿ ಕಡಿಮೆಯಾದ ಹಿನ್ನಲೆಯಲ್ಲಿ ಈ ಆಸ್ಪತ್ರೆಯ ನಿರ್ವಹಣೆಯನ್ನು ಐದು ವರ್ಷಗಳ ಅವಧಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಯಾಗಿರುವ ಇನ್ಸ್ಟಿಟ್ಯೂಟ್ ಆಫ್ ನೆಫ್ರೊ ಯೂರಾಲಜಿ (Institute Of Nephro Urology) ಗೆ ಹಸ್ತಾಂತರಿಸಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಇದೇ ವರ್ಷದ ಮಾರ್ಚ್ ನಿಂದ 12 ಡಯಾಲಿಸಿಸ್ ಯಂತ್ರಗಳೊಂದಿಗೆ ಸಾರ್ವಜನಿಕರಿಗೆ ಡಯಾಲಿಸಿಸ್ ಸೇವೆ ನೀಡುತ್ತಿದ್ದು, ಇದುವರೆಗೂ ಅಂದಾಜು 5,606 ಮಂದಿ ಡಯಾಲಿಸಿಸ್ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ವಲಯ ಆಯುಕ್ತರಾದ ಡಾ. ಆರ್.ಎಲ್.ದೀಪಕ್, ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತರಾದ ಯೋಗೇಶ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.