ಬೆಂಗಳೂರು, ಅ.20 www.bengaluruwire.com : ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ನಗರದ ರಸ್ತೆಗಳೆಲ್ಲಾ ಗುಂಡಿಮಯವಾಗಿದೆ. ಈ ಪ್ರಖಂಡ, ಆಳವಾದ, ತೀಕ್ಷ್ಣವಾದ ಹಾಗೂ ಅಪಾಯಕಾರಿಯಾದ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಸ್ಥಳೀಯಾಡಳಿತ ಬಿಬಿಎಂಪಿಯಾಗಲಿ, ರಾಜ್ಯ ಸರ್ಕಾರವಾಗಲೀ, ಬೆಂಗಳೂರಿನ ಸಚಿವರು, ಸಂಸದರು, ಶಾಸಕರು ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಗುರುವಾರ ವಿಭಿನ್ನ ಬಗೆಯ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ನಗರದಲ್ಲಿ ಆಯಾ ಕ್ಷೇತ್ರದ ಶಾಸಕರು, ಸಂಸದರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಆಯಾ ಶಾಸಕರು, ಸಂಸದರು, ಸಚಿವರ ಭಾವಚಿತ್ರಗಳನ್ನು ಇಟ್ಟು ಸರ್ಕಾರದ ನಡೆಯನ್ನು ಖಂಡಿಸಿ ವಿನೂತನ ಪ್ರತಿಭಟನೆಯನ್ನು ನಡೆಸಲಾಯಿತು. ಅಧಿಕಾರದಲ್ಲಿರುವ ಬಿಜೆಪಿ ಜನಪ್ರತಿನಿಧಿಗಳ ನಿರ್ಲಕ್ಷ್ಯತನವನ್ನು ಜನರಿಗೆ ತೋರಿಸುವ ಉದ್ದೇಶದಿಂದ ಅವರ ಭಾವಚಿತ್ರವನ್ನು ಗುಂಡಿಬಿದ್ದ ರಸ್ತೆಗಳಲ್ಲಿಟ್ಟು ಸರ್ಕಾರದ ನಡೆಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಖಂಡಿಸಿದರು.
ಬೆಂಗಳೂರು ನಗರದ ರಸ್ತೆಗಳು ನಿರಂತರವಾಗಿ ಹಾಳಾಗುತ್ತಿದೆ. ಈ ರಸ್ತೆಗಳನ್ನು ಸರಿಪಡಿಸಲು ಆಸಕ್ತಿ ವಹಿಸದೆ, ಈ ಅಪಾಯಕಾರಿ ಗುಂಡಿಗಳಿಂದ ಅಮಾಯಕರು ಮೃತಪಟ್ಟಿದ್ದರು ಕಣ್ಣಿಗೆ ಕಾಣದ ರೀತಿಯಲ್ಲಿ ಬೆಂಗಳೂರು ಉಸ್ತುವಾರಿಯನ್ನು ಹೊತ್ತಿರುವ ಮುಖ್ಯಮಂತ್ರಿಗಳು ಹಾಗೂ ಸಚಿವರು ಹಾಗೂ ಬಿಜೆಪಿಯ ಸಂಸದರು ಓಡಾಡುತ್ತಿದ್ದಾರೆ. ಹೀಗಾಗಿ ಪ್ರಮುಖವಾಗಿ ಬೆಂಗಳೂರು ಅಭಿವೃದ್ಧಿ ಸಚಿವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಸಂಸದರಾದ ಸದಾನಂದಗೌಡ, ಪಿ.ಸಿ.ಮೋಹನ್ ಹಾಗೂ ತೇಜಸ್ವಿ ಸೂರ್ಯ ಅವರ ಫೊಟೋಗಳನ್ನು ಗುಂಡಿಯಲ್ಲಿಟ್ಟು ಪ್ರತಿಭಟನೆ ನಡೆಸಲಾಯಿತು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಮನೋಹರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲೇ ಇಷ್ಟೊಂದು ರಸ್ತೆಗುಂಡಿಗಳಿವೆ ಎಂದಾದಲ್ಲಿ, ರಾಜ್ಯದ ಉಳಿದ ನಗರಗಳ ರಸ್ತೆಗಳ ಪರಿಸ್ಥಿತಿ ಇನ್ಯಾವ ಮಟ್ಟಿಗೆ ಹದಗೆಟ್ಟಿರಬಹುದು. ಈ ಗುಂಡಿಗಳಿಂದಾಗಿ ರಸ್ತೆ ಅಪಘಾತವಾಗಿ ಪ್ರಾಣಹಾನಿ ಆಗುತ್ತಿದ್ದರೂ, ಮಂತ್ರಿಗಳು, ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಸೂಕ್ತ ಕ್ರಮ ವಹಿಸುತ್ತಿಲ್ಲ. ಹಾಗಾಗಿ ಈ ರೀತಿ ರಸ್ತೆಗುಂಡಿಗಳಲ್ಲಿ ಅಧಿಕಾರದಲ್ಲಿರುವ ಜನಪ್ರತಿನಿಧಿಗಳ ಫೊಟೊಗಳನ್ನಿಟ್ಟು ಪ್ರತಿಭಟನೆ ನಡೆಸಬೇಕಾಯಿತು. ಸಿಲಿಕಾನ್ ಸಿಟಿಯ ಸುಮಾರು 20 ಕಡೆಗಳಲ್ಲಿನ ರಸ್ತೆ ಗುಂಡಿಗಳಲ್ಲಿ ಇಂತಹ ಫೊಟೋಗಳನ್ನಿಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಮಂಜುನಾಥ್, ಪ್ರಶಾಂತ್ ಸೇರಿದಂತೆ ಮೊದಲಾದವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.