ಬೆಂಗಳೂರು, ಅ.19 www.bengaluruwire.com : ಮುಂದಿನ ವರ್ಷ ಜನವರಿ 20ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜನೆ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಚಿವರು, 2018ರ ನಂತರ ಕೋವಿಡ್ ನಿಂದಾಗಿ ಸಿರಿಧಾನ್ಯ ಮೇಳ ಆಯೋಜನೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಮುಂದಿನ ವರ್ಷದ ಆರಂಭದಲ್ಲೇ ಆಯೋಜನೆ ಮಾಡಲಾಗುತ್ತಿದೆ. ಜನವರಿ 6,7,8ರಂದು ಸಿರಿಧಾನ್ಯ ಮೇಳ ಮಾಡಬೇಕಿತ್ತು. ಅಖಿಲ ಭಾರತ ಸಾಹಿತ್ಯ ಕನ್ನಡ ಸಮ್ಮೇಳನ ಇರುವ ಕಾರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು.
ರೈತರಿಗೆ ಸಿರಿ ಧಾನ್ಯದ ಬಗ್ಗೆ ಅರಿವು ಮೂಡಿಸಬೇಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿ ಧಾನ್ಯ ಬಗ್ಗೆ ಕಾಳಜಿ ಇದೆ.
ಪ್ರಧಾನಿಗಳು ಕೂಡ ಈ ಧಾನ್ಯದ ಮಹತ್ವವನ್ನು ತಿಳಿಸಿದ್ದಾರೆ.
ಸಿರಿಧಾನ್ಯ ಮೇಳದಲ್ಲಿ ವ್ಯಾಪಾರಸ್ಥರು, ರಫ್ತುದಾರರು ಸೇರಿದಂತೆ ಎಲ್ಲಾ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಲಕ ಪ್ರಧಾನಿಗೆ ಆಹ್ವಾನ ನೀಡುತ್ತೇವೆ. ಮೋದಿಯವರು ಆಗಮಿಸಿದಲ್ಲಿ ಕಾರ್ಯಕ್ರಮಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ.
ಕೃಷಿ ಇಲಾಖೆಗೆ ಪ್ರಶಸ್ತಿಗಳ ಸುರಿಮಳೆ :
2020-21 ರಿಂದ 2021-22ರ ಅವಧಿಯಲ್ಲಿ ರಾಜ್ಯವು ಕೃಷಿ ಅಭಿವೃದ್ಧಿಯಲ್ಲಿ ನೂತನ ಅವಿಷ್ಕಾರ, ತಂತ್ರಜ್ಞಾನ ಬಳಕೆ, ಆಹಾರ ಉತ್ಪಾದನೆ ಹೆಚ್ಚಳಕ್ಕಾಗಿ 2022ನೇ ಸಾಲಿನ ಔಟ್ ಲುಕ್ ಅಗ್ರಿ ಶೃಂಗಸಭೆಯ ಅತ್ಯುತ್ತಮ ರಾಜ್ಯ ಪ್ರಶಸ್ತಿ, ಸಿರಿಧಾನ್ಯಗಳ ಉತ್ತೇಜನಕ್ಕಾಗಿ ಪೋಷಕ್ ಅನಾಜ್ ಪ್ರಶಸ್ತಿ, ಭಾರತ ಸರ್ಕಾರದ ಕೃಷಿ ಮೂಲ ಸೌಕರ್ಯ ಪ್ರಶಸ್ತಿ, ಐಸಿಸಿಒಎ (ICCOA) ಜೈವಿಕ್ ಅವಾರ್ಡ್ ಪ್ರಶಸ್ತಿ ಲಭಿಸಿದೆ.
ಕೃಷಿ ಮೂಲಸೌಕರ್ಯ ನಿಧಿ ಬಳಕೆಯಲ್ಲಿ ದ್ವಿತೀಯ ಅತ್ಯುತ್ತಮ ರಾಜ್ಯ ಪ್ರಶಸ್ತಿ, ಸಿರಿಧಾನ್ಯ ಬೆಳೆ ಉತ್ಪಾದನೆಯಲ್ಲಿ ದೇಶದಲ್ಲೆ ಉತ್ತಮ ಸಾಧನೆ ಮಾಡಿದ ರಾಜ್ಯವೆಂದು ಐಸಿಸಿಒಎನಿಂದ ಜೈವಿಕ ಇಂಡಿಯಾ ಪ್ರಶಸ್ತಿ ಲಭಿಸಿದೆ. ರೈತರಿಂದ ಡಿಜಿಟಲ್ ಕ್ರಾಪ್ ಸರ್ವೆ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಡಿ ‘ನನ್ನ ಬೆಳೆ ನನ್ನ ಹಕ್ಕು’ ಘೋಷವಾಕ್ಯದ ಅಡಿಯಲ್ಲಿ ಉತ್ತಮ ಬೆಳೆ ಸಮೀಕ್ಷೆ ಮಾಡಿರುವುದರಿಂದ ರಾಜ್ಯದ ಕೃಷಿ ಇಲಾಖೆಗೆ ಪ್ರವೃತ್ತಿ ಸಂಯೋಜನಾ ಪ್ರಶಂಸನಾ ಪ್ರಶಸ್ತಿ ಬಂದಿದೆ ಎಂದು ಇಲಾಖೆಯ ಸಾಧನೆಯ ಬಗ್ಗೆ ಹೆಮ್ಮೆಯಿಂದ ಹೇಳಿದರು.
ಈ ಮುಂಗಾರು ಹಂಗಾಮಿನಲ್ಲಿ 80.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ :
ಈ ಬಾರಿ ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ 82.67 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿಯನ್ನು ಹೊಂದಲಾಗಿತ್ತು. ಆದರೆ 80.40 ಲಕ್ಷ ಹೆಕ್ಟೇರ್ ನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ 26.68 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಅ.10ರ ತನಕ ರಾಜ್ಯದಲ್ಲಿ 2.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಬಾರಿ ಮೊದಲನೇ ಜೂನ್ ನಿಂದ 30 ಸೆಪ್ಟೆಂಬರ್ ತನಕ ವಾಡಿಕೆ ಮಳೆ 852 ಮಿ.ಮೀ ಬದಲಿಗೆ ವಾಸ್ತವದಲ್ಲಿ 1019 ಮಿ.ಮೀ ಅಂದರೆ ಶೇ.20ರಷ್ಟು ಹೆಚ್ಚುವರಿ ಮಳೆಯಾಗಿದೆ.
ಇದರಿಂದಾಗಿ ರಾಜ್ಯದಲ್ಲಿ ನೆರೆ- ಮಳೆಹಾನಿಯಿಂದ 10ಲಕ್ಷ 29ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಇದುವರೆಗೆ ಸರ್ಕಾರದಿಂದ 1,020 ಕೋಟಿ ರೂ. ಪರಿಹಾರ ಕೊಡಲಾಗಿದೆ.
ಮುಂಗಾರು ಹಂಗಾಮಿನಲ್ಲಿ 26.26 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆ :
ಮುಂಗಾರು ಹಂಗಾಮಿನಲ್ಲಿ ರಾಜ್ಯವ್ಯಾಪಿ 26.76 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿತ್ತು. ಆ ಪೈಕಿ 26.26 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆ ಮಾಡಲಾಗಿದೆ. ಹಿಂಗಾರು ಹಂಗಾಮಿನಲ್ಲಿ 17 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿತ್ತು. ಆ ಪೈಕಿ ಈವರೆಗೆ 1.69 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆ ಮಾಡಲಾಗಿದೆ. 6.35 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ ಎಂದು ಸಚಿವರು ಹೇಳಿದರು.
ಎನ್ ಡಿಆರ್ ಎಫ್ (NDRF) ಪ್ರಕಾರ ಹೆಕ್ಟೇರ್‌ಗೆ 6,800ರೂ. ಇತ್ತು, ಸಿಎಂ ಜೊತೆ ಮಾತನಾಡಿ ಆ ಪರಿಹಾರದ ಮೊತ್ತವನ್ನು ಪ್ರತಿ ಹೆಕ್ಟೇರ್‌ಗೆ 13,500ರೂ. ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
164 ಕೃಷಿ ಸಂಜೀವಿನಿ ವಾಹನ ಬಿಡುಗಡೆ ಯೋಜನೆಯಡಿ ಈಗಾಗಲೇ ನೂರು ವಾಹನ ಬಿಡುಗಡೆಯಾಗಿದೆ. ಲ್ಯಾಂಡ್ ಟು ಲ್ಯಾಬ್ ಕಾರ್ಯಕ್ರಮ ಮಾಡುತ್ತೇವೆ. ರೈತ ಬೆಳೆದಿರೋ ಬೆಳೆ ಸಮಸ್ಯೆ ಇದ್ದಲ್ಲಿ, ಸಮಸ್ಯೆ ಪರಿಹಾರ ಕೊಡಲಾಗುವುದು ಎಂದು ಸಚಿವರು ತಿಳಿಸಿದರು.
ಕೃಷಿ ಇಲಾಖೆ ಜಾಗೃತ ಕೋಶ ವರದಿ ಏನು ಹೇಳುತ್ತೆ?
ಕಳೆದ ಮೂರು ವರ್ಷದಲ್ಲಿ 28.57 ಕೋಟಿ ಕೃಷಿ ಪರಿಕರ ಜಪ್ತಿ ಮಾಡಲಾಗಿದೆ. 315 ಪ್ರಕರಣ ನ್ಯಾಯಾಲಯದಲ್ಲಿ ಮೊಕದ್ದಮೆ ಇದೆ. ಜೈವಿಕ ಉತ್ಪನ್ನದ ಹೆಸರಲ್ಲಿ ಕೀಟನಾಶಕ ಮಾರಾಟ ಮಾಡುತ್ತಿದ್ದು, 295 ಪ್ರಕರಣ ನ್ಯಾಯಾಲಯದಲ್ಲಿ ಮೊಕದ್ದಮೆ ಇದೆ. 248 ಪರವಾನಗಿ ಅಮಾನತ್ತು ಮಾಡಿ, 35 ಪರವಾನಗಿ ರದ್ದು ಮಾಡಲಾಗಿದೆ. 34 ಪ್ರಕರಣದಲ್ಲಿ 17.20 ಲಕ್ಷ ರೂ. ದಂಡ ಸರ್ಕಾರಕ್ಕೆ ಭರಿಸಲಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೆಳಿದರು.
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಬಗ್ಗೆ ಭಕ್ತರ ಸಭೆ ಅಗತ್ಯವಿದೆ :
ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರದ ಕುರಿತಂತೆ ಚಿತ್ರದುರ್ಗ ಉಸ್ತುವಾರಿ ಸಚಿವ ಬಿ. ಸಿ ಪಾಟೀಲ್, ಮುರುಘಾ ಮಠ, ಸಮುದಾಯ ಹಾಗೂ ಸ್ವಾಮೀಜಿ ಮಧ್ಯೆ ಇರುವ ವಿಷಯ ಇದು. ಸ್ವಾಮೀಜಿ ಅವರ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಪ್ರಕರಣ ದಾಖಲಾಗಿದೆ. ಆ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಠದ ದೈನಂದಿನ ಕಾರ್ಯಚಟುವಟಿಕೆಗಳಿಗೆ ಆಡಳಿತಾಧಿಕಾರಿ ನೇಮಕದ ಬಗ್ಗೆ ಮಠದ ಭಕ್ತರ ಸಭೆ ಮಾಡಿ ನಿರ್ಣಯ ಮಾಡಬೇಕು. ಆ ಮೇಲೆ ಸರ್ಕಾರ ಪ್ರವೇಶಿಸಲು ಸಾಧ್ಯ. ಮೊದಲು ಮಠದ ಭಕ್ತಾದಿಗಳ ಅಭಿಪ್ರಾಯ ಮುಖ್ಯ. ಬಳಿಕ ಆಡಳಿತ ಅಧಿಕಾರಿ ನೇಮಕ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತೆ ಎಂದರು.
ಕಾಂಗ್ರೆಸ್ SAY CM ಆರೋಪ ವಿಚಾರ :
ಭೂತದ ಬಾಯಲ್ಲಿ ಭಗವದ್ಗೀತೆ ಅಂತಾರಲ್ಲ ಹಾಗೆ ಕಾಂಗ್ರೆಸ್ ಕಥೆ. ಅವರಿಗೆ ಮಾಡಲು ಕೆಲಸ ಇಲ್ಲ.ಬಿಜೆಪಿ ಅಭಿವೃದ್ಧಿ ಕಾರ್ಯ ನೋಡಿ ಸಹಿಸಲಾಗುತ್ತಿಲ್ಲ. ಮುಂದೆ ಚುನಾವಣೆಯಲ್ಲಿ ಅವರಿಗೆ ನೆಲೆ ಇಲ್ಲದಂತಾಗಲಿದೆ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಪಕ್ಷದ ಪ್ರಣಾಳಿಕೆ ಈಡೇರಿಕೆ ಮಾಡುತ್ತಿದ್ದೇವೆ :
ಬಿಜೆಪಿಯ ಚುನಾವಣಾ ಪ್ರಣಾಳಿಕೆ ಈಡೇರಿಕೆ ಕುರಿಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಸಿ.ಪಾಟೀಲ್, ನಾವು ಏನು ಮಾಡಿದ್ದೇವೆ ಅಂತ ದಾಖಲೆ ಸಹಿತ ಹೇಳುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ರೈತರಿಗೆ 12 ಕಂತಿನ ಹಣ ಬಿಡುಗಡೆ ಮಾಡಿದ್ದೇವೆ. ರೈತ ವಿದ್ಯಾನಿಧಿ ಅಡಿಯಲ್ಲಿ ಹಣ ನೀಡಿದ್ದೇವೆ. ಬರೀ ಅಹಿಂದ ಅಂತ ಹೇಳಿದರು. ಇಂದು ಪರಿಶಿಷ್ಟರಿಗೆ ಮೀಸಲಾತಿ ನೀಡಿದ್ದೇವೆ. ಅವರು ಬರೀ ಹೇಳಿಕೊಂಡು ಹೋಗಿದ್ದು ಮಾತ್ರ. ರೈತರಿಗೆ ಡೀಸೆಲ್ ಕೊಡುವ ಯೋಜನೆ ನೀಡಿದ್ದೇವೆ. ರೈತರಿಗೆ ಮಾತ್ರವಲ್ಲದೆ, ಕೃಷಿ, ಕಾರ್ಮಿಕರ ಮಕ್ಕಳಿಗೂ ವುದ್ಯಾನಿಧಿ ಬಿಡುಗಡೆ ಮಾಡಿದ್ದೇವೆ. ಕಾಂಗ್ರೆಸ್ ಬೇಡ ಅಂತಲೇ ಆ ಪಕ್ಷಕ್ಕೆ ಡೈವರ್ಸ್ ನೀಡಿ ಹೊರ ಬಂದಿದ್ದೇನೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ಇಲಾಖೆ ಆಯುಕ್ತ ಬಿ.ಶರತ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.