ಬೆಂಗಳೂರು, ಅ.19 www.bengaluruwire.com : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAL)ದಲ್ಲಿ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಚಿವ ಮತ್ತು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಅಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ರಾಜ್ಯದ ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ. ಎಲ್ಲಾ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ. ಶಿಷ್ಟಾಚಾರದ ಪ್ರಕಾರ ಯಾರನ್ನೆಲ್ಲಾ ಕರೆಯಬೇಕೋ ಎಲ್ಲರನ್ನೂ ಕರೆಯುತ್ತೇವೆ.
ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ‘ಪ್ರಗತಿಯ ಪ್ರತಿಮೆ’ (Statue Of Prosperity) ಮತ್ತು ಕೆಂಪೇಗೌಡ ಥೀಮ್ ಪಾರ್ಕಿನ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಧಾನಿಗಳು ನೆರವೇರಿಸಲಿದ್ದು, ಈ ಕಾರ್ಯಕ್ರಮದ ಅಂಗವಾಗಿ ರಾಜ್ಯದ ಎಲ್ಲೆಡೆಯಿಂದ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನವನ್ನು ನಾಡಿನಾದ್ಯಂತ ಅಕ್ಟೋಬರ್ 21 ರಂದು ವಿಧಾನಸೌಧದಲ್ಲಿ 20 ಕೆಂಪೇಗೌಡರ ರಥಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುತ್ತಾರೆ.
ರಥಗಳು ನವೆಂಬರ್ 7 ರವರೆಗೆ ಸಂಚಾರ ಮಾಡಲಿವೆ. ಇದಕ್ಕಾಗಿ ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಸಂಗ್ರಹ ಮಾಡಿದ ಮಣ್ಣನ್ನು ಕೆಂಪೇಗೌಡ ಥೀಮ್ ಪಾರ್ಕ್ ನಲ್ಲಿ ಬಳಸಲಾಗುತ್ತದೆ ಎಂದ ಅವರು, ಕೆಂಪೇಗೌಡರ ಕೆಲಸಕ್ಕೂ ಚುನಾವಣೆಗೂ ಸಂಬಂಧ ಇಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚುನಾವಣೆ ಹತ್ತಿರವಾಗ್ತಿರೋದ್ರಿಂದ ಒಕ್ಕಲಿಗ ಮತಗಳ ಕ್ರೋಡಿಕರಣಕ್ಕೆ ಪ್ರತಿಮೆ ನಿರ್ಮಾಣವಾಗ್ತಿದೆಯಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರತಿಮೆ ನಿರ್ಮಾಣ ಕಾರ್ಯ ಶುರುವಾಗಿರೋದು. ಕೆಂಪೇಗೌಡರ ಪ್ರತಿಮೆ ಚುನಾವಣಾ ಕಾರಣಕ್ಕೆ ಮಾಡಿರೋದಲ್ಲ. ಕೆಂಪೇಗೌಡರಿಗೆ ಗೌರವ ಕೊಡುವುದು ನಮ್ಮ ಜವಾಬ್ದಾರಿ. ಹಾಗಾಗಿ ಪ್ರತಿಮೆ ನಿರ್ಮಾಣ ನಡೆಯುತ್ತಿದೆ ಎಂದು ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿದರು.
ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶದಲ್ಲಿ ಜಿಲ್ಲಾ ಮಟ್ಟದ ಸಮಿತಿಯ ಮಾರ್ಗಸೂಚಿಯಂತೆ ಅಭಿಯಾನ ನಡೆಯಲಿದೆ ಎಂದು ಸಚಿವರು ಹೇಳಿದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಕೂಡ ಅಂದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಬೆಂಗಳೂರು ರಸ್ತೆ ಗುಂಡಿ ವಿಚಾರ :
ಬೆಂಗಳೂರು ನಿಮ್ಮ ನಾಡು, ನಮ್ಮ ನಾಡು. ಪ್ರತಿಯೊಂದು ರಸ್ತೆಯಲ್ಲಿ ಬೆಸ್ಕಾಂ, ಜಲಮಂಡಳಿ, ಟೆಲಿಕಾಂ ಎಲ್ಲ ಪೈಪುಗಳು ಹೋಗಿದೆ. ಕೋವಿಡ್ ಸಂದರ್ಭದಲ್ಲಿ ಕೆಲಸ ಆಗಿಲ್ಲ ನಿಮಗೂ ಗೊತ್ತಿದೆ. ಪಾಟ್ ಹೋಲ್ ಇವತ್ತಿನ ಸಮಸ್ಯೆ ಅಲ್ಲ. ಹಿಂದಿನಿಂದಲೂ ಪಾಟ್ ಹೋಲ್ ಸಮಸ್ಯೆ ಇದೆ.ಆದರೆ ರಸ್ತೆಗುಂಡಿಯನ್ನು ಮುಚ್ಚುವ ಕೆಲಸ ಆಗುತ್ತಿದೆ. ಯಾರೋ ಮಾಡುತ್ತಿರುವ ಕ್ಯಾಂಪೇನ್ ನೋಡಬೇಡಿ. ಬೇರೆ ಕಡೆ ಎಷ್ಟೆಲ್ಲಾ ಸಮಸ್ಯೆ ಇದೆ ನೋಡಿ.
ಇದು ಬೆಂಗಳೂರು ಬೆಳೆಯುತ್ತಿರೋದನ್ನ ತುಳಿಯುವ ಷಡ್ಯಂತ್ರ. ಈ ರೀತಿ ಕ್ಯಾಂಪೇನ್ ಮಾಡ್ತಿರೋದ್ರ ಹಿಂದೆ ಯಾರೋ ಇದ್ದಾರೆ. ಇದು ಟಾರ್ಗೆಟೆಡ್ ಕ್ಯಾಂಪೇನ್. ಇದನ್ನು ಬೆಂಗಳೂರಿಗರು ಒಟ್ಟಾಗಿ ಎದುರಿಸಬೇಕು. ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ನಿಗಧಿತ ಅವಧಿಯಲ್ಲಿ ರಸ್ತೆಗುಂಡಿ ಮುಚ್ಚುವ ಕೆಲಸ ಮಾಡುತ್ತೇವೆ. ಆದರೆ ನಿರಂತರ ಮಳೆಯಿಂದಾಗಿ ಸಮಸ್ಯೆ ಎದುರಾಗಿದೆ. ಒಟ್ಟಾಗಿ ಈ ಸಮಸ್ಯೆ ಎದುರಿಸೋಣ.
ಕಾಂಗ್ರೆಸ್ ವಿರುದ್ಧ ಸಚಿವ ಅಶ್ವಥ್ ನಾರಾಯಣ್ ಗುಡುಗು :
ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಸೇ ಸಿಮ್ (Say CM) ಕ್ಯಾಂಪೇನ್ ವಿಚಾರದ ಬಗ್ಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ನಂತರ ಕೋವಿಡ್ ಸೋಂಕು ಆವರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಕೂಲಿಕಾರ್ಮಿಕರು, ಬಡವರ ಪರವಾಗಿ ಕೆಲಸ ಮಾಡಿದೆವು. ಆರೋಗ್ಯ ಕ್ಷೇತ್ರದ ಸುಧಾರಣೆಯಿಂದ ಜನರ ರಕ್ಷಣೆ ಮಾಡಿದೆವು. ನಿರಂತರ ನೆರೆಯಿಂದ ರಾಜ್ಯದಲ್ಲಿ ಸಂತ್ರಸ್ತರಿಗೆ ಎರಡು ಪಟ್ಟು ಪರಿಹಾರ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ನೀಡಿದ್ದೇವೆ.
ಕೈಗಾರಿಕೆ ಸುಧಾರಣೆ, ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೆ ತರಲಾಗಿದೆ. ನಾವು ಕಾಂಗ್ರೆಸ್ ನಂತೆ ಸ್ವಯಂ ಪುಷ್ಟೀಕರಣದ ರಾಜಕಾರಣ ಮಾಡಲ್ಲ. ಸ್ವಂತ ಅಭಿವೃದ್ಧಿಗಾಗಿ ಕಾಂಗ್ರೆಸ್ ರೀತಿ ಎಂದೂ ಮಾಡಿಲ್ಲ. ಕಾಂಗ್ರೆಸ್ ನೈತಿಕತೆ ಇಲ್ಲದೆ ನಿರಾಧಾರವಾಗಿ, ಆಧಾರ ರಹಿತ ಆಪಾದನೆ ಮಾಡುತ್ತಿದ್ದು, ಅದನ್ನು ನಾನು ಖಂಡಿಸುತ್ತೇನೆ ಎಂದರು.
ಕಾಂಗ್ರೆಸ್ ಸೇಸಿಮ್ ಅಭಿಯಾನ ಟೀಕಿಸಿದ ಸಚಿವರು :
ಸೇ ಸಿಮ್ ಕಾಂಗ್ರೆಸ್ ಪಕ್ಷದಲ್ಲಿ ನಮ್ಮೆಲ್ಲರ ಚಿತ್ರ ಹಾಕಿಕೊಂಡಿದ್ದಾರೆ. ಯಾವ ಆಧಾರದ ಮೇಲೆ ನಮ್ಮ ಫೋಟೋವನ್ನು ಅವರ ವೆಬ್ ಸೈಟಿನಲ್ಲಿ ಹಾಕಿಕೊಂಡಿದ್ದಾರೆ? ಎಂದು ಪ್ರಶ್ನಿಸಿದ ಅವರು, ಇವತ್ತು ಅವರೆಲ್ಲಾ ಬೇಲ್ ಮೇಲೆ ಹೊರಗಿದ್ದಾರೆ. ತಮ್ಮ ಹೆಸರಿಗೂ ಮಸಿ ಬಳಿಯುವಂತೆ ಮಾಡಿದ್ದು, ತಾವು ಮತಹ ತಪ್ಪು ಏನು ಮಾಡಿದ್ದೇನೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಆಲೂಗಡ್ಡೆಯಲ್ಲೇ ಬಂಗಾರ ಬೆಳೆಯುವರು…!
ಇವರು ಭ್ರಷ್ಟಾಚಾರಿಗಳು, ಕುಟುಂಬ ರಾಜಕಾರಣಿಗಳು. ಭ್ರಷ್ಟಾಚಾರಿಗಳೇ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಜನ ನಂಬಲ್ಲ. ಭ್ರಷ್ಟಾಚಾರಿ ಕಾಂಗ್ರೆಸ್ ನಾಯಕರನ್ನ ಜನ ನಂಬಲ್ಲ. ಅದ್ದೂರಿ ಜೀವನ, ವಾಚ್, ಹೀಗೆ ಶೋಕಿ ಜೀವನ ಕಾಂಗ್ರೆಸ್ ನವರದ್ದಾಗಿದೆ. ಇವರ ನಾಯಕರು ಆಲೂಗಡ್ಡೆ, ತೆಂಗಿನಕಾಯಿ, ಅಡಿಕೆ, ಭತ್ತ ಬೆಳೆದರೆ ಅದು ಚಿನ್ನ, ವಜ್ರ ಆಗುತ್ತೆ ಎಂದು ಸಚಿವರು ಲೇವಡಿ ಮಾಡಿದರು.
ಬಿಜೆಪಿ ಪ್ರಣಾಳಿಕೆಯ ಭರವಸೆ ಈಡೇರಿಸುತ್ತೇವೆ :
ಬಿಜೆಪಿ ಚುನಾವಣಾ ಪ್ರಣಾಳಿಕೆ ಈಡೇರಿಸಿಲ್ಲ ಅನ್ನೋ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಆಶ್ವತ್ಥನಾರಾಯಣ, ನಾವು ನಮ್ಮ ಪ್ರಣಾಳಿಕೆ ಬಹುತೇಕ ಈಡೇರಿಸಲು ಪ್ರಯತ್ನ ಪಟ್ಟೆವು. ಆದರೆ ಕೋವಿಡ್ ಬಂದು ಏನಾಯ್ತು ಅನ್ನೋದು ನೋಡಿದ್ದೀರ. ಯಾವುದೇ ಸಾಕ್ಷಿಯಿಲ್ಲದೆ ವೃತಾ ಕಾಂಗ್ರೆಸ್ ಬಿಜೆಪಿ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡುವುದು ಸರಿಯಲ್ಲ. ನಮ್ಮ ಪ್ರಣಾಳಿಕೆಯನ್ನ ಬಿಜೆಪಿ ಆಡಳಿತಾವಧಿಯಲ್ಲೇ ಖಂಡಿತ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಇತಿಹಾಸಕಾರರಾದ ಡಾ.ತಲಕಾಡು ಚಿಕ್ಕರಂಗೇಗೌಡ ಸೇರಿದಂತೆ ಮೊದಲಾದವರಿದ್ದರು.