ಬೆಂಗಳೂರು, ಅ.18 www.bengaluruwire.com :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ರವರು ಮಂಗಳವಾರ ಬೆಳಗ್ಗೆ 6.30 ರಿಂದ 9.30 ಗಂಟೆಯವರೆಗೆ ಕಾಲ್ನಡಿಗೆಯ ಮೂಲಕ ವಿವಿಧೆಡೆ ಅಧಿಕಾರಿಗಳೊಂದಿಗೆ ತೆರಳಿ ನಾಗರೀಕ ಸಮಸ್ಯೆಗಳನ್ನು ಖುದ್ದು ಕಣ್ಣಾರೆ ಕಂಡು, ಸಾರ್ವಜನಿಕರಿಂದ ಅಹವಾಲು ಆಲಿಸಿ ಶೀಘ್ರವೇ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳ ಜೊತೆಗೆ ಸುಮಾರು 6 ಕಿ.ಮೀ ರಸ್ತೆಯನ್ನು ಕಾಲ್ನಡಿಗೆಯ ಮೂಲಕ ವಾಟಾಳ್ ನಾಗರಾಜ್ ರಸ್ತೆ(ಸುಜಾತ ಟಾಕೀಸ್ ಬಳಿಯಿಂದ), ಡಾ. ರಾಜ್ ಕುಮಾರ್ ರಸ್ತೆ, ರಾಜಾಜಿನಗರ 6ನೇ ಬ್ಲಾಕ್ ವೃತ್ತ, ಮಾಗಡಿ ಜಂಕ್ಷನ್ ನಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆ(ಟೋಲ್ ಗೇಡ್ ಕಡೆಗೆ), ಟೋಲ್ ಗೇಟ್ ಜಂಕ್ಷನ್, ಜೈ ಮುನಿರಾವ್ ವೃತ್ತ ಹಾಗೂ ಹೌಸಿಂಗ್ ಬೋರ್ಡ್ ಜಂಕ್ಷನ್ ವರೆಗೆ ಪರಿಶೀಲನೆ ನಡೆಸಿದರು.
ಪಾದಚಾರಿ ಮಾರ್ಗ ಒತ್ತುವರಿ ತೆರವು, ಪಾದಚಾರಿ ಮಾರ್ಗದ ದುರಸ್ತಿ ಹಾಗೂ ಚರಂಡಿ ಸಮಸ್ಯೆ, ವಿದ್ಯುತ್ ದೀಪಗಳನ್ನು ಅಳವಡಿಕೆ, ಗೋಡೆಯ ಮೇಲೆ ಅಂಟಿಸಿರುವ ಪೋಸ್ಟರ್ ತೆರವು, ರಸ್ತೆ ಬದಿಯ ಮರದ ಕೊಂಬೆಗಳನ್ನು ಕಟಾವು, ಕಟ್ಟಡ ಭಗ್ನಾವಶೇಷಗಳನ್ನು ಸ್ಥಳದಲ್ಲೇ ತೆರವು, ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಅಂಗಡಿಗಳಿಗೆ ದಂಡ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲಾಖೆಗಳ ಜೊತೆ ಸಮನ್ವಯ ಮಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಿ :
ಆಯಾ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕಾಲ್ನಡಿಗೆಯ ಮೂಲಕ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಪರಿಶೀಲನೆ ನಡೆಸುವ ವೇಳೆ ಜಲಮಂಡಳಿ ಹಾಗೂ ಬೆಸ್ಕಾಂ ಅಧಿಕಾರಿಗಳು ಕೂಡಾ ಹಾಜರಿರಬೇಕು. ಇದರಿಂದ ಸಮನ್ವಯ ಮಾಡಿಕೊಂಡು ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಸಾಧ್ಯವಾಗುತ್ತದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆಯ ವೇಳೆ ಯಂತ್ರೋಪಕರಣಗಳ ಬಳಕೆ :
ಪರಿಶೀಲನೆಯ ವೇಳೆ ಜೆಸಿಬಿ, ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಗಳು ಹಾಗೂ ಗ್ಯಾಂಗ್ ಮ್ಯಾನ್, ಆಟೋ ಟಿಪ್ಪರ್ ಗಳು, ಮರದ ಕೊಂಬೆ ಕಟಾವು ಮಾಡುವ ಯಂತ್ರ, ಪೌರಕಾರ್ಮಿಕರ ತಂಡವು ಸ್ವಚ್ಛತಾ ಕಾರ್ಯದಲ್ಲಿ ನಿರತವಾಗಿದ್ದವು.
ಈ ವೇಳೆ ಸ್ಥಳೀಯ ಶಾಸಕರಾದ ಸುರೇಶ್ ಕುಮಾರ್, ವಲಯ ಆಯುಕ್ತರಾದ ಡಾ. ಆರ್.ಎಲ್.ದೀಪಕ್, ವಲಯ ಜಂಟಿ ಆಯುಕ್ತರಾದ ಯೋಗೇಶ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರರಾದ ದೊಡ್ಡಯ್ಯ, ವಿದ್ಯುತ್, ಅರಣ್ಯ, ಘನತ್ಯಾಜ್ಯ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.