ಬೆಂಗಳೂರು, ಅ.17 www.bengaluruwire.com : ಭಾರತೀಯ ಸೇನೆಯ ಆರ್ಮಿ ಸರ್ವೀಸ್ ಕಾರ್ಪ್ಸ್ (ASC) 11ನೇ ಪುನರ್ಮಿಲನ, 262ನೇ ಕಾರ್ಪ್ಸ್ ದಿನ ಹಾಗೂ 75 ನೇ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಎಎಸ್ ಸಿಯ ಟೋರ್ನಡೋಸ್ (Tornadoes) ತಂಡವು ಅ.1ರಿಂದ ರಾಯಲ್ ಎನ್ ಫೀಲ್ಡ್ ಮೋಟಾರ್ ಸೈಕಲ್ ನಲ್ಲಿ ಈಶಾನ್ಯ ರಾಜ್ಯಗಳಲ್ಲಿ 2600 ಕಿ.ಮೀ ದೂರವನ್ನು ಯಶಸ್ವಿಯಾಗಿ ಕ್ರಮಿಸಿ ಬೆಂಗಳೂರಿಗೆ ಆಗಮಿಸಿದೆ.
ಆರ್ಮಿ ಸರ್ವಿಸ್ ಕಾರ್ಪ್ಸ್ ಮೋಟಾರ್ ಸೈಕಲ್ ಡಿಸ್ಪ್ಲೇ ಟೀಮ್ ಆಗಿರುವ ಟೊರ್ನಾಡೋಸ್, ಕ್ಯಾಪ್ಟನ್ ಅಭಿಜೀತ್ ಸಿಂಗ್ ಗ್ರೆವಾಲ್ ನೇತೃತ್ವದಲ್ಲಿ 15 ಸವಾರರನ್ನು ಒಳಗೊಂಡ ತಂಡವು ಜೋರ್ಹತ್‌ನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು. ಕೇವಲ 16 ದಿನಗಳಲ್ಲಿ ಯುದ್ಧ ಸ್ಮಾರಕ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ 2,600 ಕಿಮೀ ದೂರವನ್ನು ಕ್ರಮಿಸಿತು.
1967 ರಲ್ಲಿ ಟೋರ್ನಡೋಸ್ ತಂಡವು ಪ್ರಾರಂಭವಾದಾಗಿನಿಂದ, ತನ್ನ ಅಸ್ತಿತ್ವದ ಐವತ್ತೈದು ವರ್ಷಗಳಲ್ಲಿ, ಮೈ ರೋಮಾಂಚನವೆನಿಸುವ ಮೋಟಾರ್ ಸೈಕಲ್ ಸಾಹಸ ಪ್ರದರ್ಶನಗಳನ್ನು ನೀಡಿ 32 ವಿಶ್ವ ದಾಖಲೆಗಳನ್ನು ದಾಖಲಿಸಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಯುನಿಕ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ದಾಖಲೆಗಳನ್ನು ಹೊಂದಿದೆ.