ವಾಯು ಮಾಲೀನ್ಯವು ಮನುಷ್ಯನ ಶ್ವಾಸಕೋಶದ ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಇದು ವಿಶ್ವದಲ್ಲೇ ಅತಿಹೆಚ್ಚು ವಾಯು ಮಾಲಿನ್ಯವಿರುವ ಭಾರತ ದೇಶಕ್ಕೆ ಅದಲ್ಲೂ ಅತಿಹೆಚ್ಚು ವಾಯುಮಾಲಿನ್ಯ ಪ್ರಮಾಣವಿರುವ ಬೆಂಗಳೂರಿಗೆ ಒಂದು ದೊಡ್ಡ ಅಲಾರಾಮ್ ಅಂತಲೇ ಹೇಳಬಹುದು.
ಐಕ್ಯೂಏರ್.ಕಾಮ್ ಎಂಬ ಸಂಸ್ಥೆಯು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದಂತೆ 2021ರಲ್ಲಿ ವಿಶ್ವದಲ್ಲೇ 118 ರಾಷ್ಟ್ರಗಳ ಪೈಕಿ ಅತಿಹೆಚ್ಚು ಕಳಪೆ ಗುಣಮಟ್ಟದ ಗಾಳಿಯಿರುವ ರಾಷ್ಟ್ರಗಳ ಪೈಕಿ ಭಾರತ 5ನೇ ಸ್ಥಾನ ಪಡೆದಿತ್ತು. ವಿಶ್ವ ಆರೋಗ್ಯ ಸಂಸ್ಥೆ ವಾರ್ಷಿಕವಾಗಿ ನಿಗಧಿಪಡಿಸಿರುವ ಮೌಲ್ಯಕ್ಕಿಂತ 11.5 ಪಟ್ಟು ಹೆಚ್ಚು ವಾಯು ಮಾಲಿನ್ಯ ಭಾರತದಲ್ಲಿದೆ ಕಂಡು ಬಂದಿತ್ತು ಎಂದು ತಿಳಿಸಿದೆ.
ಪರಿಸ್ಥಿತಿ ಹೀಗಿರುವಾಗ, ವಾಯು ಮಾಲಿನ್ಯದ ಕುರಿತು ಇತ್ತೀಚೆಗೆ ದಿ ಲ್ಯಾನ್ಸೆಟ್ ಜರ್ನಲ್ (The Lancet) ನಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವು ಗ್ರಂಥಿ ವಿಜ್ಞಾನ (Oncology) ಕ್ಷೇತ್ರಕ್ಕೆ ಉತ್ತಮ ಭರವಸೆಯನ್ನು ನೀಡಿದೆ. ಫ್ರಾನ್ಸಿಸ್ ಕ್ರಿಕ್ ಇನ್ಸ್ಟಿಟ್ಯೂಟ್ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ ಸಂಶೋಧಕರು ಶ್ವಾಸಕೋಶದ ಕ್ಯಾನ್ಸರ್ ವಿಕಸನವನ್ನು ಕಾಲಾನಂತರದಲ್ಲಿ ಅಧ್ಯಯನ ಮಾಡಿದರು. ಈ ಅಧ್ಯಯನ ಮಾಡಿದಾಗ, ಧೂಮಪಾನಿಗಳಲ್ಲದ ಅಂದಾಜು 6,000 ಮಂದಿ ಪ್ರತಿ ವರ್ಷ ಬ್ರಿಟನ್ ನಲ್ಲಿ ಶ್ವಾಸಕೋಶದ ಕ್ಯಾನ್ಸರ್ ನಿಂದ ಸಾಯುತ್ತಿದ್ದಾರೆ. ಈ ಕ್ಯಾನ್ಸರ್ ರೋಗದ ಪ್ರತಿ ಹತ್ತು ಪ್ರಕರಣಗಳಲ್ಲಿ ಒಂದು ಪ್ರಕರಣ, ಗಾಳಿಯಿಂದ ಸಂಭವಿಸಿದ ರೋಗವಾಗಿದೆ.
ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಕ್ಯಾನ್ಸರ್ ಉಂಟುಮಾಡುವ ರೂಪಾಂತರಗೊಂಡ ಜೀವಕೋಶಗಳು ಸ್ವಾಭಾವಿಕವಾಗಿ ದೇಹದಲ್ಲಿ ಸಂಗ್ರಹಗೊಳ್ಳುತ್ತವೆ. ಆದರೆ ಇವು ಸಾಮಾನ್ಯವಾಗಿ ನಿಷ್ಕ್ರಿಯವಾಗಿರುತ್ತವೆ. ವಾಯು ಮಾಲಿನ್ಯವು ಶ್ವಾಸಕೋಶದಲ್ಲಿ ಈ ಕೋಶಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಅವುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಇವುಗಳು ಗಡ್ಡೆಗಳ ರೂಪದಲ್ಲಿ ಹರಡುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.
ವಾತಾವರಣದಲ್ಲಿ ತೇಲಲ್ಪಡುವ ಸಣ್ಣ ಧೂಳಿನ ಕಣಗಳು (PM2•5) ಉಸಿರಾಟದ ಮೂಲಕ ಶ್ವಾಸಕೋಶದಲ್ಲಿ ಎಚ್ಚರಿಕೆಯ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಅಲ್ಲದೆ ಕ್ಯಾನ್ಸರ್ ಉಂಟುಮಾಡುವ ರೂಪಾಂತರಗಳನ್ನು ಹೊಂದಿರುವ ಸುಪ್ತ ಕೋಶಗಳನ್ನು ಉರಿಯೂತಗೊಳಿಸುತ್ತದೆ ಮತ್ತು ಸಕ್ರಿಯಗೊಳಿಸುತ್ತದೆ. ಈ ಊಹೆಯನ್ನು ಪರೀಕ್ಷಿಸಲು, ಸಂಶೋಧಕರು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಕಂಡುಬರುವ ವಾಯು ಮಾಲಿನ್ಯದ ಸಾಂದ್ರತೆಗಳ ರೀತಿಯ EGFR (ಕ್ಯಾನ್ಸರ್ ಕಾರಕ ಪ್ರೊಟಿನ್) ರೂಪಾಂತರಿತ ಕೋಶಗಳೊಂದಿಗೆ ಇಲಿಗಳನ್ನು ಪರೀಕ್ಷೆಗೆ ಒಳಪಡಿಸಿದರು.
ಈ ವಾಯುಮಾಲಿನ್ಯದ ಪರಿಸ್ಥಿತಿಗೆ ಒಳಪಡಿಸದ ಇಲಿಗಳಿಗಿಂತ, ಮಾಲಿನ್ಯಕ್ಕೆ ತೆರೆದುಕೊಂಡ ಇಲಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎಂದು ಅವರ ಸಂಶೋಧನೆಗಳು ತಿಳಿಯಪಡಿಸಿತು. ಈ ಸಂಶೋಧನೆಯು ಸಾರ್ವತ್ರಿಕ ಪ್ರಸ್ತುತತೆಯನ್ನು ಹೊಂದಿದೆ. ಏಕೆಂದರೆ ಪ್ರಪಂಚದ ಹೆಚ್ಚಿನ ಜನಸಂಖ್ಯೆಯು PM2•5 ಗಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಯ ವಾರ್ಷಿಕ ಮಿತಿಗಳನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಇದಲ್ಲದೆ, ತಮ್ಮ ಸಂಶೋಧನಾ ಫಲಿತಾಂಶಗಳು ಇತರ ರೀತಿಯ ಕ್ಯಾನ್ಸರ್‌ಗಳಿಗೂ ಅನ್ವಯಿಸಬಹುದು ಎಂದು ತಂಡವು ವಾದಿಸಿದೆ. ಒಂದು ಪಿಎಂ2.5 ಧೂಳಿನ ಕಣವು 40 ಕೋವಿಡ್ ವೈರಸ್ ಗಳಿಗೆ ಸಮ ಎಂದು ಹೇಳುತ್ತಾರೆ ಕ್ಯಾನ್ಸರ್ ತಜ್ಞರು. ಈ ಮಹತ್ವದ ಸಂಶೋಧನಾ ಅಧ್ಯಯನವು ಧೂಮಪಾನಿಗಳಲ್ಲದವರ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ವಿಧಾನಗಳಿಗೆ ದಾರಿ ಮಾಡಿಕೊಟ್ಟಿದೆ. ಮಾತ್ರವಲ್ಲದೆ ಜಗತ್ತಿನಾದ್ಯಂತ ವಾಯುಮಾಲಿನ್ಯದ ಗಂಭೀರ ಏರಿಕೆಯನ್ನು ತಡೆಯುವ ತೀವ್ರ ಅಗತ್ಯವನ್ನು ಎತ್ತಿ ತೋರಿಸಿದೆ.
“ಫ್ರಾನ್ಸಿಸ್ ಕ್ರಿಕ್ ಇನ್ಸಿಟ್ಯೂಟ್ ಹಾಗೂ ಯೂನಿರ್ವಸಿಟಿ ಕಾಲೇಜ್ ಲಂಡನ್ ಸಂಶೋಧಕರು ವಾಯುಮಾಲಿನ್ಯ ಶ್ವಾಸಕೋಶ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಹೀಗಾಗಿ ಬಂಡವಾಳಶಾಹಿ ಹಾಗೂ ಕೈಗಾರಿಕರಣದಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವಿವಿಧ ರೀತಿಯ ಮಾಲಿನ್ಯಗಳು ಹೆಚ್ಚಾಗಿ ಮನುಷ್ಯನ ಆರೋಗ್ಯವು ಹದಗೆಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ಸಂಸ್ಥೆಗಳು ಬೇರೆ ಬೇರೆ ಸಂದರ್ಭದಲ್ಲಿ ಹೇಳಿರುವಂತೆ ವಾತಾವರಣದಲ್ಲಿ ಮಾಲಿನ್ಯವನ್ನು ನಿಯಂತ್ರಣ ಮಾಡದೇ ಹೋದರೆ ಮೂವರಲ್ಲಿ ಒಬ್ಬರಿಗೆ ಕ್ಯಾನ್ಸರ್ ರೋಗ ಬರಬಹುದು. ಹಾಗಾಗಿ ಎಲ್ಲಾ ರೀತಿಯ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಿದೆ. ಬೆಂಗಳೂರಿನ ವಾಯುಮಾಲಿನ್ಯ ಪರಿಸ್ಥಿತಿಯೂ ಗಂಭೀರವಾಗಿದೆ.”
- ಡಾ.ವಿಶಾಲ್ ರಾವ್, ಡೀನ್, ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ