ಬಾಗಲಕೋಟೆ, ಅ.16 : ಬೀಳಗಿ ಕ್ಷೇತ್ರ ಬಿಟ್ಟು ನಾನು ಎಲ್ಲೂ ಹೋಗಲ್ಲ. ನೂರಕ್ಕೆ ನೂರು ತಾವು ಬೀಳಗಿಯಿಂದಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಬಾಗಲಕೋಟೆಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರು ಸ್ಪಷ್ಟಪಡಿಸಿದರು.
ತಮ್ಮನ್ನು ಶಾಸಕರಾಗಿ ಮಾಡಿದವರು ಬೀಳಗಿ ಕ್ಷೇತ್ರದ ಜನ. ತಾವು ಮಂತ್ರಿ ಆಗಿದ್ದು ಬೀಳಗಿ ಮತ ಕ್ಷೇತ್ರದಿಂದ. ಕೊನೆವರೆಗೂ ಬೀಳಗಿಯಲ್ಲೆ ಇರುತ್ತೇನೆ. ಯಾವುದೇ ಸಂಶಯ ಬೇಡ ಎಂದು ಸಚಿವರು ಹೇಳಿದರು. ನಿರಾಣಿ ಅವರು ಜಮಖಂಡಿ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ ಎನ್ನುವ ಸುದ್ದಿಗೆ ಸ್ಪಷ್ಟನೆ ನೀಡಿದ ಸಚಿವರು ನಾನು ಬೀಳಗಿ ಮತ ಕ್ಷೇತ್ರ ಬಿಟ್ಟು ಬೇರೆ ಎಲ್ಲೂ ಹೋಗಲ್ಲ ಎಂದರು.
ನಿರಾಣಿ ಕುಟುಂಬದಿಂದ ಸಂಗಮೇಶ್ ನಿರಾಣಿ ಸ್ಪರ್ಧೆ :
ನಮ್ಮ ಕುಟುಂಬದಲ್ಲಿ ಒಬ್ಬರೆ ಸ್ಪರ್ಧೆ ಮಾಡುತ್ತಾರೆ. ನೂರಕ್ಕೆ ನೂರರಷ್ಟು ಹೇಳುತ್ತೇನೆ ಕುಟುಂಬದಿಂದ ಒಬ್ಬರು ಮಾತ್ರ ಸ್ಪರ್ಧೆ ಮಾಡುತ್ತಾರೆ ಎಂದರು. ಒಂದು ವೇಳೆ ಮುಂದಿನ ಸಲ ನಮ್ಮ ಕುಟುಂಬದಿಂದ ಬೇರೆ ಯಾರಾದ್ರೂ ಸ್ಪರ್ಧೆ ಮಾಡಿದ್ರೆ ನಾನು ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಕುಟುಂಬದಲ್ಲಿ ಎಂದು ಮತ್ತೊಬ್ಬ ತಯಾರು ಆಗುತ್ತಾನೋ ಅಂದು ರಾಜಕೀಯದಿಂದ ದೂರ ಉಳಿಯುತ್ತೇನೆ. ನಾನು ಸ್ಪರ್ಧೆ ಮಾಡಲ್ಲ ಎಂದು ಹೇಳಿದರು. ಕಳೆದ ಚುನಾವಣೆಯಲ್ಲಿ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ಜಮಖಂಡಿಯಲ್ಲಿ ಬಂಡಾಯ ಅಭ್ಯರ್ಥಿ ಆಗಿದ್ದರು. ಈ ಸಲ ತೇರದಾಳ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎನ್ನುವ ಸುದ್ದಿ ಹಿನ್ನಲೆಯಲ್ಲಿ ಸಹೋದರ ಸ್ಪರ್ಧೆ ಕುರಿತು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಅವರು ಸ್ಪಷ್ಟಪಡಿಸಿದರು.
ವಿಪಕ್ಷದಲ್ಲಿದ್ದಾಗ ಕಾಂಗ್ರೆಸ್ ಪಾದಯಾತ್ರೆ :
ಕಾಂಗ್ರೆಸ್ ನವರು ಹಿಂದೆ ಕೂಡ ಹಲವು ಪಾದಯಾತ್ರೆ ಮಾಡಿದ್ದಾರೆ, ಇವತ್ತು ಕೂಡ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ವಿಪಕ್ಷದಲ್ಲಿದ್ದಾಗ ಇಂತವುಗಳು ಮಾಡೋದು ಸಾಮಾನ್ಯ ಎಂದು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದರು.
ಈ ಹಿಂದೆ ಕೃಷ್ಣೆಯ ಕಣ್ಣೀರು ಅಂತಾ ಯಾತ್ರೆ ಮಾಡಿದ್ದರು. ಅದರ ಕುರಿತು ಪುಸ್ತಕ ಕೂಡಾ ಬರೆದಿದ್ದರು. ಆದ್ರೆ ಅಧಿಕಾರಕ್ಕೆ ಬಂದಾಗ ಕೃಷ್ಣೆಗೆ ಎಷ್ಟು ದುಡ್ಡು ಕೊಟ್ಟರು? ಅಹಿಂದ, ಅಹಿಂದ ಅಂತಾ ದೊಡ್ಡ ದೊಡ್ಡ ಮಾತುಗಳನ್ನ ಆಡುತ್ತಾರೆ. ಅವುಗಳಿಗೆ ಎಷ್ಟು ಮೀಸಲಾತಿ ಕೊಟ್ಟಿದ್ದಾರೆ? ಶೇ. 3ರಿಂದ 7%, 15% ಯಿಂದ 17% ಯಾಕೆ ವಿಸ್ತರಿಸಲಿಲ್ಲ. ಹೋರಾಟ ಮಾಡುತ್ತಾರೆ. ಅದು ಅವರಿಗೆ ನೆನಪಿರಬೇಕಲ್ಲ ಎಂದು ಅವರು ಟೀಕಿಸಿದರು.
ಹಿಂದುಳಿದವರಿಗೆ ಕಾಂಗ್ರೆಸ್ ಗಿಂತ ಹೆಚ್ಚಾಗಿ, ಹೆಚ್ಚು ಅನುಕೂಲವಾಗಿರುವುದು ಬಿಜೆಪಿ ಸರ್ಕಾರದಿಂದ. ಇನ್ನೂ, ಹಿಂದುಳಿದವರು ಅತೀ ಹೆಚ್ಚು ಆಯ್ಕೆಯಾಗಿ ಬರುವುದು ಬಿಜೆಪಿಯಿಂದಲೇ. ನೀವು ಬೇಕಾದ್ರೆ ಅಂಕಿ-ಸಂಖ್ಯೆ ತಗೊಳ್ಳಿ. ಎಸ್ಸಿ, ಎಸ್ಟಿ, ಹಿಂದುಳಿದವರು ಹೆಚ್ಚು ಇರುವುದೇ ಬಿಜೆಪಿ ಪಕ್ಷದಲ್ಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದರು.