ಚಿಕ್ಕಬಳ್ಳಾಪುರ, ಅ.16 www.bengaluruwire.com : ಇಶಾ ಫೌಂಡೇಶನ್‌ನ ಸಂಸ್ಥಾಪಕ, ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಶನಿವಾರ ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೆರೆ ಹಾವನ್ನು ಬಲೆಗೆ ಬೀಳಿಸಿ, ಸಾಗಿಸಿ ಅದನ್ನು ಕಾರ್ಯಕ್ರಮವೊಂದರಲ್ಲಿ ಪ್ರದರ್ಶಿಸಿದ ಆರೋಪದ ಮೇಲೆ ದೂರು ದಾಖಲಾಗಿದೆ. ವನ್ಯಜೀವಿಗಳ ಹಾಗೂ ಪರಿಸರವನ್ನು ನಾಶಪಡಿಸಿದ ಆರೋಪದ ಮೇಲೆ ಸದ್ಗುರುಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಈ ಮಧ್ಯೆ ಭಾನುವಾರ ಇಶಾ ಫೌಂಡೇಷನ್ ಈ ಕುರಿತಂತೆ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದೆ.
ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಸೊಸೈಟಿ(SPCA)ಯ ಸದಸ್ಯ ಪೃಥ್ವಿರಾಜ್ ಅವರು ಚಿಕ್ಕಬಳ್ಳಾಪುರ ತಾಲೂಕಿನ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) ಅವರಿಗೆ ಶನಿವಾರ ಸಲ್ಲಿಸಿರುವ ದೂರಿನಲ್ಲಿ, ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಹಾವನ್ನು ಅರಣ್ಯ ಇಲಾಖೆಗೆ ಇದುವರೆಗೂ ಹಸ್ತಾಂತರಿಸಿಲ್ಲ ಎಂದು ಎಂದು ಉಲ್ಲೇಖಿಸಿದ್ದಾರೆ.
“ವನ್ಯಜೀವಿ ಸಂರಕ್ಷಣಾ ಕಾಯಿದೆ (WPLPA) 1972ರ ಉಲ್ಲಂಘನೆಗೆ ಸಂಬಂಧಿಸಿದಂತೆ ISHA ಫೌಂಡೇಶನ್ ಸಂಸ್ಥಾಪಕರಾದ ಸದ್ಗುರುಗಳಿಗೆ ಸಂಬಂಧಿಸಿದಂತೆ ಈ ದೂರು ನೀಡಲಾಗಿದೆ. ಗೌರವಾನ್ವಿತ ಸದ್ಗುರುಗಳು ಅಕ್ರಮವಾಗಿ ಸೆರೆಹಿಡಿಯಲಾದ, ಅನುಚಿತವಾಗಿ ಸಂಗ್ರಹಿಸಲಾದ ಕೆರೆ ಹಾವನ್ನು ಬಹಳ ದಿನಗಳವರೆಗೆ ಪ್ರದರ್ಶಿಸುತ್ತಿದ್ದರು, ಇದನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆಯ ಶೆಡ್ಯೂಲ್ 2 ರ ಅಡಿಯಲ್ಲಿ ರಕ್ಷಿಸಲ್ಪಡುವ ಜೀವಿಯಾಗಿದೆ. ಸದ್ಗುರು ಜಗ್ಗಿ ವಾಸುದೇವ್ ಅವರು ಅಕ್ಟೋಬರ್ 9 ರಿಂದ 10ರ ನಡುವೆ ನಡೆದ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮುಂದೆ ವೇದಿಕೆಯಲ್ಲಿ ಪ್ರಜ್ವಲಿಸುವ ದೀಪಗಳ ಅಡಿಯಲ್ಲಿ ಹಾವನ್ನು ಪ್ರದರ್ಶಿಸಿದ್ದರು. ಇಲ್ಲಿಯವರೆಗೆ ಹಾವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿಲ್ಲ ”ಎಂದು ದೂರಿನ ಪತ್ರದಲ್ಲಿ ತಿಳಿಸಿದ್ದಾರೆ.
ಇಶಾ ಫೌಂಡೇಶನ್ ಬಗ್ಗೆ ಪೃಥ್ವಿರಾಜ್ ಮಾಡಿರುವ ಇತರ ಆರೋಪಗಳು :
ಇಶಾ ಫೌಂಡೇಶನ್ ತಮಿಳುನಾಡಿನ ಅರಣ್ಯ ಭೂಮಿಯನ್ನು ಒತ್ತುವರಿ ಮಾಡುವ ಮೂಲಕ ಅರಣ್ಯ ನಾಶಕ್ಕೆ ಹಲವು ಪ್ರಯತ್ನಗಳನ್ನು ಮಾಡಿದೆ. ಕಳೆದ ತಿಂಗಳು ಇಶಾ ಫೌಂಡೇಶನ್ ಪ್ರತಿನಿಧಿಗಳ ವಿರುದ್ಧ ರಸ್ತೆ ಅಗಲೀಕರಣ ಹಾಗೂ ಅರಣ್ಯ ನಾಶಪಡಿಸುತ್ತಿರುವ ಆರೋಪದ ಮೇಲೆ ದೂರು ದಾಖಲಾಗಿತ್ತು. ಸ್ಥಳೀಯ ಪ್ರಬೇಧದ ಸಸಿಗಳನ್ನು ಬೆಳೆಸುವುದಕ್ಕೆ ತಡೆಯೊಡ್ಡಿ ಇತರೆ ಸಸಿಗಳನ್ನು ನೆಡುವುದಕ್ಕೆ ಒತ್ತು ನೀಡಲಾಗಿತ್ತು ಎಂದು ಪೃಥ್ವಿರಾಜ್ ಆರೋಪಿಸಿದ್ದಾರೆ. ಅಕ್ಟೋಬರ್ 9 ರಂದು, ರಾಜ್ಯದಲ್ಲಿ ಇಶಾ ಫೌಂಡೇಶನ್‌ನ ಹೊಸ ಕೇಂದ್ರವನ್ನು ಘೋಷಿಸಲು ಸದ್ಗುರುಗಳು ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೊಸ ಕೇಂದ್ರದಲ್ಲಿ 112 ಅಡಿ ಎತ್ತರದ ಶಿವನ ಪ್ರತಿಮೆಯೂ ನಿರ್ಮಾಣ ಹಂತದಲ್ಲಿದೆ.
ಇಶಾ ಫೌಂಡೇಷನ್ ನಿಂದ ಸ್ಪಷ್ಟನೆ – ದೂರು ತಳ್ಳಿಹಾಕಿದ ಸಂಸ್ಥೆ :
ಈ ಮಧ್ಯೆ, ಅಕ್ಟೋಬರ್ 9ರಂದು ಚಿಕ್ಕಬಳ್ಳಾಪುರದ ಇಶಾ ಯೋಗ ಕೇಂದ್ರದಲ್ಲಿ ಹಾವನ್ನು ಹಿಡಿದು ತಂದಿರಲಿಲ್ಲ ಅಥವಾ ಕಾರ್ಯಕ್ರಮ ಸ್ಥಳಕ್ಕೆ ಸಾಗಿಸಲಾಗಿರಲಿಲ್ಲ ಎಂದು ಇಶಾ ಫೌಂಡೇಶನ್ ತಂಡ ಸ್ಪಷ್ಟಪಡಿಸಿದೆ. ಇಶಾ ಫೌಂಡೇಶನ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿರುವ ಇಶಾ ಫೌಂಡೇಶನ್ ಸಂಸ್ಥೆಯು, “ನಾಗಪ್ರತಿಷ್ಠೆಯ ಸಮಯದಲ್ಲಿ ಅಚಾನಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ಹಾವೊಂದು ಸ್ಥಳಕ್ಕೆ ಬಂದಿತ್ತು. ಹಾವಿನ ಮತ್ತು ಜನರ ಸುರಕ್ಷತೆಗಾಗಿ, ಸದ್ಗುರುಗಳು ಅದನ್ನು ಮೃದುವಾಗಿ ನಿರ್ವಹಿಸಿದರು ಮತ್ತು ಅದನ್ನು ಹತ್ತಿರದ ಕಾಡಿನಲ್ಲಿ ಸುರಕ್ಷಿತವಾಗಿ ಬಿಡುವಂತೆ ಸೂಚಿಸಿದರು. ಈ ಹಾವನ್ನು ದೂರಿನಲ್ಲಿ ತಿಳಿಸಿರುವಂತೆ ಯಾವುದೇ ರೀತಿಯಲ್ಲಿ ಹಿಡಿದು ತಂದಿರಲಿಲ್ಲ ಅಥವಾ ಇಲ್ಲಿಗೆ ಸಾಗಿಸಿರಲಿಲ್ಲ ಅಥವಾ ಈ ಹಾವಿಗೆ ಯಾವುದೇ ರೀತಿಯಲ್ಲಿ ಹಾನಿಯಾಯಾಗಿಲ್ಲ. ಈ ಘಟನೆಯ ಬಗ್ಗೆ ಸ್ಥಳದಲ್ಲಿದ್ದ ಪೊಲೀಸರಿಗೆ ವಿಷಯ ತಿಳಿದಿತ್ತು. ಈ ಬಗ್ಗೆ ಸುಳ್ಳು ದೂರು ನೀಡಲಾಗಿದೆ” ಎಂದು ಸ್ಪಷ್ಟನೆ ನೀಡಿದೆ.
ಸದ್ಗುರುಗಳು ಕಾರ್ಯಕ್ರಮದಲ್ಲಿ ಹಾವುಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳ ಬಗ್ಗೆ ತಿಳಿಸಿದ್ದರು. ಅಲ್ಲದೆ ಮಾನವರು ಹಾವಿನ ಮೇಲೆ ದಾಳಿ ಮಾಡದ ಹೊರತು ಅವುಗಳು ತೊಂದರೆ ಕೊಡುವುದಿಲ್ಲ. ಯಾಕೆಂದರೆ ಹಾವುಗಳಿಗೆ ಮನುಷ್ಯ ಆಹಾರವಲ್ಲ. ರಸ್ತೆ ಅಪಘಾತ ಸೇರಿದಂತೆ ಹಲವು ರೀತಿಯಲ್ಲಿ ಸಾಯುತ್ತಿರುವವ ಸಂಖ್ಯೆಗೆ ಹೋಲಿಸಿದರೆ ಹಾವು ಕಡಿತದಿಂದ ಸಾಯುವವರ ಪ್ರಮಾಣ ಕಡಿಮೆ. ಆದರೂ ಜನರು ಹಾವಿನ ಬಗ್ಗೆ ಅನಗತ್ಯ ಭಯ ಹೊಂದಿದ್ದಾರೆ. ಎಂಬುದಾಗಿ ಸದ್ಗುರುಗಳು ಕಾರ್ಯಕ್ರಮದಲ್ಲಿ ತಿಳಿಸಿದ್ದರು” ಎಂದು ಈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.