ಬೆಂಗಳೂರು, ಅ.15 www.bengaluruwire.com : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ) ಪತ್ರಕರ್ತರ ಮಕ್ಕಳಿಗೆ ಶನಿವಾರ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಮಕ್ಕಳಿಗೆ ಬೆಂಗಳೂರು ಪ್ರೆಸ್‌ಕ್ಲಬ್ ಆವರಣದಲ್ಲಿ ಪ್ರತಿಭಾ ಪುರಸ್ಕಾರ-2022 ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಇದೇ ಮೊದಲ ಬಾರಿಗೆ ಕೆಯುಡಬ್ಲ್ಯೂಜೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ನೀಡಲಾಯಿತು.
ಪ್ರೆಸ್‌ಕ್ಲಬ್ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ವಸತಿ ಸಚಿವ ವಿ.ಸೋಮಣ್ಣ, ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಗಿಡಕ್ಕೆ ನೀರೆರದು ಉದ್ಘಾಟಿಸಿದರು.
ರಾಜ್ಯದಲ್ಲಿ ವಸತಿಹೀನ ಪತ್ರಕರ್ತರಿಗೆ ಸೂರು ಕಲ್ಪಿಸುವಂತೆ ಕೆಯುಡಬ್ಲ್ಯೂಜೆ ಅಧ್ಯಕ್ಷರು ಮಾಡಿದ ಮನವಿಗೆ ಸೂರ್ಯನಗರದಲ್ಲಿ 30 ಸಾವಿರ ನಿವೇಶನ ಮೂರು-ನಾಲ್ಕು ಸಾವಿರ ಎಕರೆ ಜಾಗದಲ್ಲಿ ಬರುತ್ತಿದೆ. ಅದೊಂದು ಪ್ರತಿಷ್ಠಿತ ಬಡಾವಣೆಯಾಗಿದೆ. ಸಂಘದ ವತಿಯಿಂದ ನಾಳೆ -ನಾಡಿದ್ದರಲ್ಲಿ ಬಂದರೆ ಅಧಿಕಾರಿಗಳೊಂದಿಗೆ ಹೋಗಿ ನೀವು ನಿವೇಶನ ನೋಡಿಕೊಂಡು ಬನ್ನಿ. ನೈಜ ವಸತಿಹೀನ ಪತ್ರಕರ್ತರ ಪಟ್ಟಿ ಕೊಟ್ಟರೆ, ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಐನೂರು ಪತ್ರಕರ್ತರಿಗೆ ಪ್ರತ್ಯೇಕ ನಿವೇಶನವಿರುವ ಕಾಲೋನಿ ಮಾಡೋಣ ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಇನ್ನು ಮುಂದೆ ಪ್ರತಿವರ್ಷ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ 2.5 ಲಕ್ಷ ರೂ. ಚೆಕ್ ನೀಡುತ್ತೇನೆ. ಆ ದತ್ತಿ ನಿಧಿಯಿಂದ ಬರುವ ಬಡ್ಡಿಯನ್ನು ಪ್ರತಿಭಾ ಪುರಸ್ಕಾರಕ್ಕೆ ಬಳಸಿಕೊಳ್ಳಿ ಎಂದರು.
ಗಡಿ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಪತ್ರಕರ್ತರು ತಮ್ಮ ಮಕ್ಕಳನ್ನು ವೈದ್ಯರು, ಎಂಜಿನಯರ್ ಗಳಾಗಿ ಮಾಡದೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಓದಿ ಅದರಲ್ಲಿ ತೇರ್ಗಡೆಯಾಗಿ ಭಾರತೀಯ ಆಡಳಿತ ಸೇವೆಯಲ್ಲಿ ತೊಡಗಲು ಸಾಕಷ್ಟು ಅವಕಾಶಗಳಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ, ಖ್ಯಾತ ನಟಿ ತಾರಾ ಅನುರಾಧ, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು.
ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವಹಿಸಿದ್ದರು. ಕೆಯುಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಸೇರಿದಂತೆ ರಾಜ್ಯ ಘಟಕದ ಪದಾಧಿಕಾರಿಗಳೂ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.