ಬೆಂಗಳೂರು, ಅ.14 www.bengaluruwire.com : ರಾಜ್ಯ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರು ಸ್ವ ಇಚ್ಛೆಯಿಂದ ದೇಣಿಗೆ ನೀಡಲು ನಿರ್ಧರಿಸಿದ್ದಾರೆ.
ಈ ಕುರಿತಂತೆ ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ,ಕಾಮಧೇನು ಸಂತತಿ ರಕ್ಷಣೆಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಇತರ ಸಂಸ್ಥೆಗಳ ನೌಕರರು ಸಹಕಾರ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋರಿದ್ದರು. ಈ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ನೌಕರರು ಸ್ವಇಚ್ಛೆಯಿಂದ ದೇಣಿಗೆ ನೀಡಲು ನಿರ್ಧರಿಸಿದ್ದೇವೆ.
ಎ ವೃಂದದ ಅಧಿಕಾರಿಗಳಿಂದ 11 ಸಾವಿರ ರೂ., ಬಿ ವೃಂದದ ಅಧಿಕಾರಿಗಳ ವೇತನದಿಂದ 4 ಸಾವಿರ ಹಾಗೂ ಡಿ ವೃಂದದ ನೌಕರರಿಂದ 400 ರೂ. ಹಣವನ್ನು ವೇತನದಲ್ಲಿಒಂದು ಬಾರಿಗೆ ಹಣ ಪಾವತಿಸಲು ಸಂಘದ ಸೆ.9 ಹಾಗೂ 29ನೇ ತಾರೀಖು ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಈ ಕುರಿತಂತೆ ಮುಖ್ಯಮಂತ್ರಿಗಳಿಗೆ ನೌಕರರ ಸಂಘದಿಂದ ವೇತನ ಕಡಿತ ಮಾಡುವಂತೆ ಪತ್ರ ನೀಡಿದ್ದೇವೆ.
ಅದರಂತೆ 80 ರಿಂದ 100 ಕೋಟಿ ರೂ. ಹಣ ಸರ್ಕಾರಕ್ಕೆ ಸಂದಾಯವಾಗಲಿದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ವೇತನ ಕಡಿತವಾಗಲಿದೆ ಎಂದು ಷಡಾಕ್ಷರಿ ಹೇಳಿದ್ದಾರೆ.
ಇದರಿಂದಾಗಿ ರಾಜ್ಯದಲ್ಲಿನ ನಿರ್ಗತಿಕ, ಅನಾರೋಗ್ಯ, ಅಶಕ್ತ ಹಾಗೂ ವಯಸ್ಸಾದ 60-70 ಸಾವವುರ ಜಾನುವಾರುಗಳಿವೆ. ಅದೇ ರೀತಿ ಹಲವು ರೈತರು ಸಾಕಲಾಗದ ಹಸು-ಕರುಗಳಿವೆ. ಇವುಗಳೆಲ್ಲವನ್ನು ಪೋಷಿಸಲು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪುಣ್ಯಕೋಟಿ ದತ್ತು ಯೋಜನೆಗೆ ಸಾಕಷ್ಟು ಸಹಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆಯೂ ಕೂಡ ರಾಜ್ಯ ಸರ್ಕಾರಿ ನೌಕರರು ಕಾರ್ಗಿಲ್ ಯುದ್ಧದಲ್ಲಿ ನಡಿದ ವೀರ ಯೋಧರ ಕುಟುಂಬಗಳಿಗೆ ಪರಿಹಾರ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ, ರಾಷ್ಟ್ರದ ವಿವಿದೆಡೆ ಪಾಕೃತಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ವೇತನವನ್ನು ನೀಡಿದ್ದಾರೆ ಎಂದ ಅವರು ರಾಜ್ಯ ಸರ್ಕಾರ ಏಳನೇ ವೇತನ ಆಯೋಗ ರಚಿಸುತ್ತಿರುವುದು ಸಂತಸದ ವಿಷಯ ಎಂದರು.