ಬೆಂಗಳೂರು, ಅ.13 www.bengaluruwire.com : ರೈತರು ಮಳೆ ಬಂದಾಗ ಹೇಗೆ ಭೂಮಿಯನ್ನು ಹದ ಮಾಡಿ ಭಿತ್ತನೆ ಮಾಡಿ ಬೆಳೆ ಬೆಳೆಯುತ್ತಾರೊ ಹಾಗೆಯೇ ವಿದ್ಯಾರ್ಥಿಗಳು ತಮ್ಮ ಮುಂದಿನ ಗುರಿಯನ್ನಿಟ್ಟುಕೊಂಡು ಅವಿರತ ಪರಿಶ್ರಮ ಹಾಕಿ ಉನ್ನತ ಮಟ್ಟದ ಹುದ್ದೆಗಳಿಗೆ ಸೇರಿ ಕನಸು ಬಿತ್ತುವ ಕೆಲಸ, ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕು ಎಂದು ಕೇಂದ್ರ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿಗಳಾದ ಸಿ.ವಿ. ಗೋಪಿನಾಥ್ ಅವರು ಅಭ್ಯರ್ಥಿಗಳಿಗೆ ಕರೆ ನೀಡಿದರು.
2017-18 ನೇ ಸಾಲಿನ ಕೆಎಎಸ್ ಪರೀಕ್ಷೆಯಲ್ಲಿ ಆಯ್ಕೆಯಾದ 25 ವಿದ್ಯಾರ್ಥಿಗಳಿಗೆ ಜ್ಞಾನಗಂಗೋತ್ರಿ ಅಕಾಡೆಮಿ ವತಿಯಿಂದ ಇತ್ತೀಚೆಗೆ ವಿಜಯನಗರದ ಜ್ಞಾನಗಂಗೋತ್ರಿ ಸಂಸ್ಥೆಯಲ್ಲಿ ಏರ್ಪಡಿಸಿದ ಅಭಿನಂದನೆ ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಜ್ಞಾನಗಂಗೋತ್ರಿ ಸಂಸ್ಥೆಯಲ್ಲಿ ಮಾರ್ಗದರ್ಶನ ಪಡೆದ ಸಾವಿರಾರು ಅಭ್ಯರ್ಥಿಗಳು ಇಂದು ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಯ ಕೀರ್ತಿ ದುಪ್ಪಟ್ಟಾಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೆಎಎಸ್ ಪರೀಕ್ಷೆಯಲ್ಲಿ ಸಂಸ್ಥೆಯಿಂದ ಯಶಸ್ಸು ಕಂಡ ಸಿದ್ದರೂಢ ಬನ್ನಿಕೊಪ್ಪ ಅವರು ಮಾತನಾಡಿ, ಉನ್ನತ ಹುದ್ದೆಗೇರಿ ಸೇವೆ ಮಾಡೋ ಕನಸು ಕಟ್ಟಿದವರಿಗೆ ರೆಕ್ಕೆ ಕಟ್ಟಿ, ಮಾರ್ಗದರ್ಶನ ನೀಡಿ ವಿಜಯದ ಹಾದಿಯಲ್ಲಿ ಮುನ್ನಡೆಸುತ್ತಿರುವ ಜ್ಞಾನಗಂಗೋತ್ರಿ ಸಂಸ್ಥೆಗೆ ನಾನು ಸದಾ ಅಬಾರಿಯಾಗಿರುತ್ತೇನೆ ಎಂದು ತಿಳಿಸಿದರು.
ಈ ವೇಳೆ ಐಎಎಸ್ ಅಧಿಕಾರಿಗಳಾದ ಹ್ಯಾರಿಸ್ ಸುಮೈರ್ ಅವರು ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾರ್ಗದರ್ಶನ ನೀಡಿದರು. ಹಾಗೂ 2017-18 ನೇ ಸಾಲಿನ ಕೆಎಎಸ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಸಿಇಇ ಮಾಜಿ ನಿರ್ದೇಶಕ ಸಂತೋಷ್ ಸುತಾರ್, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ರಫಿ ಪಾಷಾ ಪಾಲ್ಗೊಂಡಿದ್ದರು. ಸಂಸ್ಥೆಯ ನಿರ್ದೇಶಕರುಗಳಾದ ಮೋಹನ್ ಬಿ.ಆರ್, ಸುರೇಶ್ ಬಿ.ಎನ್, ಗಾಯತ್ರಿ ವೈ.ವಿ ಉಪಸ್ಥಿತರಿದ್ದರು. ಹಾಗೂ ಸಂಸ್ಥೆಯ ತರಬೇತುದಾರರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.