ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಾಮಾನ್ಯ ಜನರಿಗಾಗಿ ಸಾಕಷ್ಟು ಯೋಜನೆಗಳಿವೆ. ಆದರೆ ಎಷ್ಟೋ ಜನರಿಗೆ ಅವುಗಳ ಬಗ್ಗೆ ಅರಿವಿರುವುದಿಲ್ಲ. ಬಹಳ ಕಾಲದಿಂದ ರಾಜ್ಯ ಕಾರ್ಮಿಕ ಇಲಾಖೆಯಡಿ ಬರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಟ್ಟಡ ಕಟ್ಟುವ ಕೆಲಸದಲ್ಲಿ ಅಥವಾ ಇತರ ನಿರ್ಮಾಣ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇದುವರೆಗೆ ಬಹಳಷ್ಟು ಕಾರ್ಮಿಕರಿಗೆ ಸರ್ಕಾರದ ಈ ಸೌಕರ್ಯಗಳ ಬಗ್ಗೆ ಮಾಹಿತಿಯೇ ಇಲ್ಲ.
ಬದುಕು ಕಟ್ಟಿಕೊಳ್ಳಲು ತಮ್ಮ ತವರು ನೆಲವನ್ನು ತೊರೆದು ಒಂದೂರಿಂದ ಒಂದೂರಿಗೆ ವಲಸೆ ಬಂದು ಮನೆ, ಕಟ್ಟಡ, ಇನ್ನಿತರೆ ನಿರ್ಮಾಣ ಕೆಲಸದಲ್ಲಿ ತೊಡಗಿರುವವರಿಗೆ ಅನುಕೂಲವಾಗಲೆಂದು ಬೆಂಗಳೂರು ವೈರ್ ಕನ್ನಡ ಡಿಜಿಟಲ್ ವೆಬ್ ನ್ಯೂಸ್ ಪೋರ್ಟಲ್ ಈ ಮಾಹಿತಿಯನ್ನು ನಿಮಗಾಗಿ ನೀಡಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ.
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾದರೆ ಅಂತಹ ಫಲಾನುಭವಿಗಳಿಗೆ ಮಂಡಳಿಯಿಂದ ವಿವಿಧ ರೀತಿಯ ಪಿಂಚಣಿ ಸೌಲಭ್ಯ, ವಸತಿ ಸೌಲಭ್ಯ, ಹೆರಿಗೆ ಸೌಲಭ್ಯ, ನೋಂದಾಯಿತ ಫಲಾನುಭವಿಗ ಮಕ್ಕಳಿಗೆ ಸ್ಫರ್ಧಾತ್ಮಕ ಪರೀಕ್ಷಾ ಸೌಲಭ್ಯ, ಶೈಕ್ಷಣಿಕ ಸಹಾಯಧನ ಸೇರಿದಂತೆ 19 ರೀತಿಯ ವಿವಿಧ ಸೌಲಭ್ಯಗಳು ಸಿಗುತ್ತದೆ. ಈವರೆಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸೆಪ್ಟೆಂಬರ್ 30ರ ತನಕ ಒಟ್ಟು 22.50 ಲಕ್ಷ ಕಟ್ಟಡ ಕಾರ್ಮಿಕರು ರಿಜಿಸ್ಟರ್ ಮಾಡಿಸಿದ್ದಾರೆ.
ಫಲಾನುಭವಿ ನೋಂದಣಿ ಅರ್ಹತೆ ಮತ್ತು ವಿಧಾನ :
ಅಂದಹಾಗೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಲು ಇರಬೇಕಾದ ಅರ್ಹತೆ ಮತ್ತು ವಿಧಾನಗಳೆಂದರೆ, ಕನಿಷ್ಠ 18 ರಿಂದ ಗರಿಷ್ಠ 60 ವರ್ಷದ ಒಳಗಿನವರಾಗಬೇಕು. ಕಳೆದ 12 ತಿಂಗಳಲ್ಲಿ ಕಟ್ಟಡ ಅಥವಾ ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. ನಮೂನೆ V-1 ರಲ್ಲಿ ಮೊದಲಿಗೆ ಅರ್ಜಿ ಸಲ್ಲಿಸಬೇಕು. ಉದ್ಯೋಗ ದೃಢೀಕರಣ ಪತ್ರ ಅಥವಾ ಸ್ವಯಂ ದೃಢೀಕರಣ ಪತ್ರವನ್ನು ಜೊತೆಗೆ ಸಲ್ಲಿಸಬೇಕು.
ಸಾಮಾನ್ಯವಾಗಿ ಉದ್ಯೋಗ ದೃಢೀಕರಣ ಪತ್ರವು ಕಾಮಗಾರಿ ನಡೆಯುವ ಕಟ್ಟಡದ ಮಾಲೀಕರು/ ಗುತ್ತಿಗೆದಾರರು, ಕ್ರೆಡಾಯ್ (Confederation of Real Estate Developers Association Of India), ಬಿಎಐ (Builders Association Of India) ಅಥವಾ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ ರವರು ನಮೂನೆ-V(A)ರಲ್ಲಿ ನೀಡುವಂತಹ ‘ಉದ್ಯೋಗದ ದೃಢೀಕರಣ ಪತ್ರ’ ಅಥವಾ ನೋಂದಾಯಿತ ಕಾರ್ಮಿಕ ಸಂಘಗಳು ನಮೂನೆ V(B)ರಲ್ಲಿ ಅಥವಾ ಕಾರ್ಮಿಕ ಅಧಿಕಾರಿ/ ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರು ನಮೂನೆ- V(C) ರಲ್ಲಿ ಅಥವಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO)/ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ನಮೂನೆ- V(D)ರಲ್ಲಿ ‘ಉದ್ಯೋಗದ ದೃಢೀಕರಣ ಪತ್ರ’ ನೀಡಬಹುದು.
ಇದಲ್ಲದೆ ಈ ದಾಖಲೆಗಳು ನೋಂದಣಿಗೆ ಬೇಕು :
ನೋಂದಣಿ ಮಾಡುವ ಅರ್ಜಿದಾರನ ಮೂರು ಪಾಸ್ ಪೋರ್ಟ್ ಅಳತೆಯ ಫೊಟೋ, ವಯಸ್ಸಿನ ದಾಖಲೆಯ ಪತ್ರ, ಅರ್ಜಿದಾರ ಹಾಗೂ ಅವರ ಅವಲಂಬಿತರ ಆಧಾರ್ ಕಾರ್ಡ್ ಪ್ರತಿಯನ್ನು ಸ್ವಯಂ ದೃಢೀಕರಣ ಮಾಡಿ ಅರ್ಜಿಯೊಂದಿಗೆ ಸಲ್ಲಿಸಬೇಕು.
ಯಾವೆಲ್ಲ ಕಚೇರಿಗಳಲ್ಲಿ ಕಾರ್ಮಿಕರ ನೋಂದಣಿಯಾಗುತ್ತೆ? :
ಕಾರ್ಮಿಕ ಅಧಿಕಾರಿಗಳು/ ಹಿರಿಯ ಕಾರ್ಮಿಕ ನಿರೀಕ್ಷಕರು ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿ ಅಥವಾ ಬೆಂಗಳೂರು ಮೆಟ್ರೋ ರೈಲು ನಿಗಮದ ಮುಖ್ಯ ಅಭಿಯಂತರ ಕಚೇರಿಯಲ್ಲಿ ಕಾರ್ಮಿಕರ ನೋಂದಣಿ ಮಾಡಲಾಗುತ್ತದೆ.
ಫಲಾನುಭವಿಗಳಿಗೆ ಮಂಡಳಿಯಿಂದ ಸಿಗುವ ಸೌಲಭ್ಯಗಳೇನು? :
- ಪಿಂಚಣಿ ಸೌಲಭ್ಯ : ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ 3,000 ರೂ. ಪಿಂಚಿಣಿ
- ಕುಟುಂಬ ಪಿಂಚಣಿ ಸೌಲಭ್ಯ : ಮೃತ ಪಿಂಚಣಿದಾರರ ಪತಿ/ಪತ್ನಿಗೆ ಮಾಸಿಕ 1000 ರೂ.
- ದುರ್ಬಲತೆಯ ಪಿಂಚಣಿ : ನೋಂದಾಯುಗ್ರಹ ರಾಶಿ ಸಹಾಯಧನ
- ಟ್ರೈನಿಂಗ್ ಕಮ್ ಟೂಲ್ ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : 20,000 ರೂ. ತನಕ
- ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ : ನೋಂದಾಯಿತ ಫಲಾನುಭವಿಯ ಅವಲಂಬಿತರಿಗೆ
- ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ) : 2,00,000 ರೂ. ವರೆಗೆ ಮುಂಗಡ ಸಾಲ ಸೌಲಭ್ಯ
- ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್) : ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ 50,000 ರೂ.
- ಶಿಶುಪಾಲನಾ ಸೌಲಭ್ಯ : ಕಾರ್ಮಿಕರ ಮಕ್ಕಳ ಪಾಲನೆಗಾಗಿ ರಾಜ್ಯದಾದ್ಯಂತ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶುಪಾಲನಾ ಕೇಂದ್ರಗಳ ಪ್ರಾರಂಭ
- ಅಂತ್ಯಕ್ರಿಯೆ ವೆಚ್ಚ : 4,000 ರೂ. ಹಾಗೂ ಅನುಗ್ರಹ ರಾಶಿ 71,000ರೂ. ಸಹಾಯಧನ
- ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ : ನೋಂದಾಯಿತ ಫಲಾನುಭವಿಯ ಮಕ್ಕಳಿಗೆ ಯುಪಿಎಸ್ ಸಿ/ಕೆಪಿಎಸ್ ಸಿ (UPSC/KPSC) ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸೌಲಭ್ಯ.
- ಶೈಕ್ಷಣಿಕ ಸಹಾಯಧನ (ಕಲಿಕಾ ಭಾಗ್ಯ) : ಫಲಾನುಭವಿಯ ಇಬ್ಬರು ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಶಿಶುವಿಹಾರ/ನರ್ಸರಿಯಿಂದ ಹಿಡಿದು ಪ್ರಾಥಮಿಕ, ಪ್ರೌಢಶಿಕ್ಷಣ, ಡಿಪ್ಲೊಮೊ, ಐಟಿಐ, ಪಾಲಿಟೆಕ್ನಿಕ್, ಪದವಿಪೂರ್ವ, ಪದವಿ ನೋಂದಾಯಿತ ಕಾರ್ಮಿಕರ ಮಕ್ಕಳ ಪಿಎಚ್ ಡಿ/ಎಂಫಿಲ್/ಐಐಟಿ/ಐಐಎಂ/ಎನ್ಐಟಿ ಹಾಗೂ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ಶಿಕ್ಷಣದ ತನಕ ವಾರ್ಷಿಕ ಸಹಾಯ ಸಹಾಯ ಧನವನ್ನು ಕಾರ್ಮಿಕ ಕಲ್ಯಾಣ ಮಂಡಳಿ ನೀಡಲಿದೆ.
- ವೈದ್ಯಕೀಯ ಸಹಾಯಕ ಧನ (ಕಾರ್ಮಿಕ ಆರೋಗ್ಯ ಭಾಗ್ಯ) : ನೋಂದಾಯಿತ ಫಲಾನುಭವಿ ಹಾಗೂ ಅವಲಂಬಿತರಿಗೆ 300 ರೂ.ನಿಂದ 20,000ರೂ. ತನಕ ಸಹಾಯಧನ
- ಅಪಘಾತ ಪರಿಹಾರ : ಮರಣ ಹೊಂದಿದ್ದಲ್ಲಿ 5,00,00 ರೂ. ಹಾಗೂ ಸಂಪೂರ್ಣ ಶಾಶ್ವತ ದರ್ಬಲತೆಯಾದಲ್ಲಿ 2,00,00ರೂ. ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ 1,00,000ರೂ.
- ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ) : ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮಾ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯುಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ/ ಡಿಸ್ ಲೊಕೇಶನ್ ಚಿಕಿತ್ಸೆ, ಕೋವಿಡ್ -19 ಚಿಕಿತ್ಸೆ ಹಾಗೂ ಇತರೆ ಔದ್ಯೋಗಿಕ ಚಿಕಿತ್ಸೆಗಳಿಗೆ 2,00,000ರೂ.ವರೆಗೆ ವೈದ್ಯಕೀಯ ವೆಚ್ಚ ಸಹಾಯಧನ ದೊರೆಯಲಿದೆ.
- ಮದುವೆ ಸಹಾಯಧ (ಗೃಹ ಲಕ್ಷ್ಮೀ ಬಾಂಡ್) : ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ 60,000ರೂ.
- ಬಿಎಂಟಿಸಿ ಬಸ್ ಪಾಸ್ ಸೌಲಭ್ಯ : ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಅಥವಾ ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ
- ತಾಯಿ ಮಗು ಸಹಾಯ ಹಸ್ತ : ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವ ತನಕ ವಾರ್ಷಿಕ 6,000ರೂ. ಸಹಾಯಧನ
- ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ : ಮರುಪಾವತಿ ಸೌಲಭ್ಯ
- ಕೆಎಸ್ ಆರ್ ಟಿಸಿ ಬಸ್ ಪಾಸ್ ನ ಸೌಲಭ್ಯ : ನೋಂದಾಯಿತ ಕಾರ್ಮಿಕರಿಗೆ
ಇಷ್ಟೆಲ್ಲಾ ಸೌಲಭ್ಯಗಳು ಸಿಗುವಾಗ ಕಟ್ಟಡ ಕಾರ್ಮಿಕರು ಅಥವಾ ಇತರೆ ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುವ ಕಾರ್ಮಿಕರು ತಡ ಮಾಡದೆ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಿ. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕ ಸಹಾಯವಾಣಿ 155214 (ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಹೆಲ್ಪ್ ಲೈನ್) ಅನ್ನು ಸ್ಥಿರ ದೂರವಾಣಿ ಅಥವಾ ಮೊಬೈಲ್ ಮೂಲಕ ನೇರವಾಗಿ ಸಂಪರ್ಕಿಸಬಹುದು.