ತಿರುಮಲ, ಅ.7 www.bengaluruwire.com : ಆಶ್ವಜಯುಜ ಮಾಸದ ಮೂರನೇ ಶನಿವಾರ ಹಾಗೂ ನಿರಂತರವಾಗಿ ರಜೆಗಳು ಇರುವ ಹಿನ್ನಲೆಯಲ್ಲಿ ತಿರುಪತಿ ದೇವಸ್ಥಾನದ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಆಗಸಿಸುವವರ ಸಂಖ್ಯೆ ಹೆಚ್ಚಾಗಿದ್ದು, ಬಾಲಾಜಿ ದರ್ಶನಕ್ಕೆ ಕನಿಷ್ಠ 30-40 ಗಂಟೆ ಸಮಯ ಹಿಡಿಯುತ್ತಿದೆ.
ತಿರುಪತಿಯಲ್ಲಿ ದೇವರ ದರ್ಶನಕ್ಕಾಗಿ ಭಕ್ತರ ಸಾಲು ಸಾಕಷ್ಟು ಉದ್ದವಾಗಿದೆ. ಅಕ್ಟೋಬರ್ 4ರ ತನಕ ತಿರುಪತಿಗೆ ಆಗಮಿಸುವ ಭಕ್ತರ ಸಂಖ್ಯೆ ಸಾಮಾನ್ಯವಾಗಿತ್ತು. ಆದರೆ ಅ.5ರ ಮಧ್ಯಾಹ್ನದಿಂದ ಶ್ರೀವಾರಿ ದರ್ಶನಕ್ಕೆ ಆಗಮಿಸುವವರ ಭಕ್ತಾದಿಗಳ ಪ್ರಮಾಣ ಹೆಚ್ಚಾಗಿದೆ. ಸದ್ಯ ಭಕ್ತರ ಸಾಲು ದೇವಸ್ಥಾನದಿಂದ 2.3 ಕಿ.ಮೀ ದೂರವಿರುವ ಶಿಲಾ ತೋರಣದ ತನಕ ಮುಟ್ಟಿದೆ ಎಂದು ಸ್ಥಳೀಯರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ವಿಶೇಷ ದರ್ಶನಕ್ಕೆ ಬೆಳಗ್ಗೆ 10.30ರ ನಂತರ ಅವಕಾಶ ಕಲ್ಪಿಸಿದ್ದು, ಅದಕ್ಕೂ ಮುನ್ನ ಉಚಿತ ದರ್ಶನಕ್ಕೆ ಸಾಲಿನಲ್ಲಿ ನಿಂತವರಿಗೆ ಆದ್ಯತೆ ಮೇಲೆ ದರ್ಶನ ನೀಡಲು ಇತ್ತೀಚೆಗೆ ನಡೆದ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ (TTD Board) ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ನವರಾತ್ರಿ ಸಂದರ್ಭದಲ್ಲಿ ಬ್ರಹ್ಮರಥೋತ್ಸವ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದ ಕಾರಣ ಶ್ರೀವಾರಿಯ ದರ್ಶನಕ್ಕೆ 30 ಗಂಟೆಗಳು ಆಗುತ್ತಿತ್ತು. ಆದರೆ ಈಗ ಆ ಅವಧಿ ಕಡಿತವಾಗಿದೆ. ಏಳೆಂಟು ಗಂಟೆಗೆಲ್ಲಾ ಸಾಮಾನ್ಯ ದರ್ಶನ ಲಭ್ಯವಾಗುತ್ತಿದೆ ಎಂದು ಹೇಳಿದ್ದಾರೆ ಟಿಟಿಡಿ ಸದಸ್ಯ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್.
ತಮಿಳುನಾಡಿನವರಿಗೆ ಕರ್ನಾಟಕದಲ್ಲಿ ಶ್ರಾವಣ ಮಾಸವಿದ್ದಂತೆ ಈಗ ಪರ್ಟಾಸಿ ಮಾಸದ ಮೂರನೇ ಶನಿವಾರ ವಿಶೇಷವಿರುವ ಕಾರಣದಿಂದ ಹೆಚ್ಚಾಗಿ ಅಲ್ಲಿನ ಭಕ್ತರು ತಿರುಮಲ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಬ್ರಹ್ಮರಥೋತ್ಸವದಲ್ಲಿ ಸಾಕಷ್ಟು ಜನಜಂಗುಳಿಯಿರುತ್ತದೆ ಎಂಬ ಕಾರಣಕ್ಕೆ ಅದು ಮುಗಿದ ಬಳಿಕ ದೇವಸ್ಥಾನಕ್ಕೆ ಬರುವ ಯೋಜನೆ ಹಾಕಿಕೊಂಡವರು ಈಗ ಆಗಮಿಸುತ್ತಿದ್ದಾರೆ. ಜೊತೆಗೆ ಸಾಲು ಸಾಲು ರಜೆ, ವಾರಾಂತ್ಯದ ಕಾರಣ ಭಕ್ತರ ದಂಡು ಹೆಚ್ಚಾಗಿದೆ.
ವೈಕುಂಠಮ್ ಕ್ಯೂ ಕಾಂಪ್ಲೆಕ್ಸ್-2 ಹಾಗೂ ನಾರಾಯಣಗಿರಿ ಪಾರ್ಕ್ ನ ಎಲ್ಲಾ ಶೆಡ್ ಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದು, ಭಕ್ತರು ಶ್ರೀ ವೆಂಕಟೇಶ್ವರ ದರ್ಶನಕ್ಕೆ ಕನಿಷ್ಠ 30 ಗಂಟೆಗಳ ಕಾಲ ಕಾಯಬೇಕಾಗಿದೆ. ಹಾಗಾಗಿ ದೇವಸ್ಥಾನಕ್ಕೆ ಬರಲು ಉದ್ದೇಶಿಸಿರುವ ಭಕ್ತರು ಈ ವಿಷಯ ತಿಳಿದು, ಅದರಂತೆ ತಿರುಮಲಕ್ಕೆ ಭೇಟಿ ನೀಡುವ ಬಗ್ಗೆ ಯೋಜನೆ ರೂಪಿಸಿಕೊಂಡರೆ ಉತ್ತಮ ಎಂದು ಟಿಟಿಡಿ ದೇವಸ್ಥಾನ ಮಂಡಳಿ ತಿಳಿಸಿದೆ.