ನಂಜನಗೂಡು, ಅ.02 www.bengaluruwire.com : ಭಾರತ ಐಕ್ಯತಾ ಯಾತ್ರೆಯಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಗಾಂಧಿ ಜಯಂತಿ ಹಿನ್ನಲೆಯಲ್ಲಿ ಭಾನುವಾರ ಇಲ್ಲಿನ ಬದನವಾಳು ಗ್ರಾಮದಲ್ಲಿನ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದರು.
ಭಾರತ್ ಜೋಡೋ ಪಾದಯಾತ್ರೆಗೆ ಗಾಂಧಿ ಜಯಂತಿ ಹಿನ್ನಲೆಯಲ್ಲಿ ಬೆಳಗ್ಗೆ 7:30 ರಿಂದ ಮಧ್ಯಾಹ್ನ 3ರವರೆಗೆ ವಿರಾಮ ನೀಡಿ ಬದನವಾಳುನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಗಾಂಧೀಜಿ ಪ್ರತಿಮೆಗೆ ಹಾರ ಹಾಕಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಮಹಾತ್ಮಾ ಗಾಂಧಿ ಅವರು ನಮ್ಮ ಸಂವಿಧಾನಿಕ ಹಕ್ಕಿಗಾಗಿ ತ್ಯಾಗ ಬಲಿದಾನ ನೀಡಿದ್ದು, ಇಂದು ಆ ಹಕ್ಕುಗಳು ಅಪಾಯಕ್ಕೆ ಸಿಲುಕಿವೆ ಎಂಬುದು ಬಹುತೇಕರಿಗೆ ಮನದಟ್ಟಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತ ಜೋಡೋ ಯಾತ್ರೆಯ 25ನೇ ದಿನವಾದ ಇಂದು ನಾವು ಗಾಂಧಿ ಅವರ ಸ್ಮರಣೆ ಮಾಡುತ್ತಿದ್ದು, ಈ ಯಾತ್ರೆ ಗಾಂಧಿ ಅವರ ಅಹಿಂಸೆ, ಏಕತೆ, ಸಮಾನತೆ ಹಾಗೂ ನ್ಯಾಯದ ಮಾರ್ಗದಲ್ಲಿ ಸಾಗುತ್ತಿದೆ. ಈ ಯಾತ್ರೆಯಲ್ಲಿ ಅಪಾರ ಪ್ರಮಾಣದಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದಾರೆ. ನಮ್ಮ ಯಾತ್ರೆ ಮೈಸೂರಿನಿಂದ ಕಾಶ್ಮೀರದವರೆಗೆ ಸಾಗುತ್ತಿದ್ದಂತೆ ಎಲ್ಲರೂ ಈ ಯಾತ್ರೆಯಲ್ಲಿ ಅಹಿಂಸಾ ಹಾಗೂ ಸದ್ಭಾವನ ಮನೋಭಾವದಿಂದ ನಮ್ಮೊಡನೆ ಹೆಜ್ಜೆ ಹಾಕಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಗಾಂಧೀಜಿ ಕೊಂದವರ ಸಿದ್ಧಾಂತದ ವಿರುದ್ಧ ಹೋರಾಟ :
ಮಹಾತ್ಮ ಗಾಂಧಿ ಅವರ 153ನೇ ಜಯಂತೋತ್ಸವ ಹಿನ್ನೆಲೆಯಲ್ಲಿ ಇಂದು ನಾವೆಲ್ಲರೂ ಬದನವಾಳುವಿನ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಸೇರಿದ್ದೇವೆ. ಮಹಾತ್ಮ ಗಾಂಧಿ ಅವರು 1927ರಲ್ಲಿ ಈ ಕೇಂದ್ರಕ್ಕೆ ಭೇಟಿ ನೀಡಿದ್ದು, ಈ ಕೇಂದ್ರದಲ್ಲಿ ಭಾರತ ಮಾತೆಯ ಶ್ರೇಷ್ಠ ಪುತ್ರನಿಗೆ ನಮನ ಸಲ್ಲಿಸುತ್ತಿದ್ದೇವೆ. ಬ್ರಿಟೀಷ್ ರಾಜ್ ವ್ಯವಸ್ಥೆ ವಿರುದ್ಧ ಗಾಂಧಿ ಅವರ ಹೋರಾಟದಂತೆ, ಗಾಂಧಿ ಅವರನ್ನು ಕೊಂದವರ ಸಿದ್ಧಾಂತದ ವಿರುದ್ಧ ನಾವು ಇಂದು ಹೋರಾಟ ಮಾಡುತ್ತಿದ್ದೇವೆ. ಈ ಸಿದ್ಧಾಂತದ ಪರಿಣಾಮ ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಅಸಮಾನತೆ, ಸಮಾಜ ವಿಭಜನೆ ಹಾಗೂ ಕಷ್ಟಪಟ್ಟು ಪಡೆದ ಸ್ವಾತಂತ್ರ್ಯದ ಹರಣವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಈ ಹಿಂಸಾತ್ಮಕ ರಾಜಕೀಯ, ಅಸತ್ಯದ ವಿರುದ್ಧ ಭಾರತ ಐಕ್ಯತಾ ಯಾತ್ರೆ ಮೂಲಕ ಅಹಿಂಸೆ ಮತ್ತು ಸ್ವರಾಜ್ಯದ ಸಂದೇಶವನ್ನು ಪಸರಿಸಲಾಗುತ್ತಿದೆ. ಸ್ವರಾಜ್ಯಕ್ಕೆ ಹಲವು ಅರ್ಥಗಳಿವೆ. ಅಂದರೆ ಭಯದಿಂದ ಮುಕ್ತಿಗೊಳ್ಳುವುದು. ನಮ್ಮ ರಾಜ್ಯಗಳು ತಮಗಿರುವ ಸಂವಿಧಾನಿಕ ಸ್ವಾಂತ್ರ್ಯವನ್ನು ಅನುಭವಿಸಿ, ನಮ್ಮ ಹಳ್ಳಿಗಳು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹೊಂದುವ ಸ್ವಾಂತ್ರ್ಯವಾಗಿದೆ. ನಮ್ಮ ರೈತರು, ಯುವಕರು, ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು ಇದನ್ನೇ ಬಯಸುತ್ತಿದ್ದಾರೆ.
ಅಷ್ಟೇ ಅಲ್ಲ ಈ ಯಾತ್ರೆಯಲ್ಲಿ 3600 ಕಿ.ಮೀ ಸಾಗುತ್ತಿರುವ ಯಾತ್ರಿಗಳು ಹಾಗೂ ಅಲ್ಪಾವಧಿಯಲ್ಲಿ ಸಾಗುತ್ತಿರುವ ಲಕ್ಷಾಂತರ ಜನರ ಗೆಲುವಾಗಿದೆ. ಈ ಯಾತ್ರೆಯು ಭಯ, ದ್ವೇಷ ಹಾಗೂ ವಿಭಜನೆ ರಾಜಕೀಯದ ವಿರುದ್ಧ ದೇಶದ ಜನರು ಗಟ್ಟಿ ಧ್ವನಿ ಎತ್ತುವ ಯಾತ್ರೆಯಾಗಿದೆ. ಅಧಿಕಾರದಲ್ಲಿರುವವರಿಗೆ ಗಾಂಧಿ ಅವರ ಪರಂಪರೆ ಬಗ್ಗೆ ಮಾತನಾಡುವುದು ಸುಲಭವಾಗಬಹುದು. ಆದರೆ ಅವರ ಹಾದಿಯಲ್ಲಿ ಸಾಗುವುದು ಬಹಳ ಕಷ್ಟವಾಗಲಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
ಬದನವಾಳು ಎರಡು ಸಮುದಾಯಗಳ ಜೊತೆ ರಾಹುಲ್ ಭೋಜನ :
ಗಾಂಧಿ ಜಯಂತಿ ಆಚರಣೆಯ ಹಿನ್ನಲೆಯಲ್ಲಿ ಬದನವಾಳಿನಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿ ಸಸಿ ನೆಟ್ಟರು. ಇದೇ ಸಂದರ್ಭದಲ್ಲಿ ಗ್ರಾಮದ ಯುವಕರೊಂದಿಗೆ ಸೇರಿ ಗ್ರಾಮದಲ್ಲಿ ಹೆಜ್ಜೆ ಹಾಕಿದರು. 1993ರಲ್ಲಿ ಬದನವಾಳು ಗ್ರಾಮದಲ್ಲಿ ದೇವಸ್ಥಾನ ಪ್ರವೇಶ ಸಂಬಂಧ ನಡೆದ ಹತ್ಯಾಕಾಂಡದ ನಂತರ ಎರಡೂ ಸಮುದಾಯಗಳು 29 ವರ್ಷಗಳಲ್ಲಿ ಎಂದೂ ಕೂಡ ಒಟ್ಟಿಗೆ ಕೂತು ಊಟ ಮಾಡಿರಲಿಲ್ಲ. ಆದರೆ ಬದನವಾಳು ಗ್ರಾಮದ ಎರಡೂ ಸಮುದಾಯಗಳ ಮಕ್ಕಳು ಸೇರಿದಂತೆ ಈ ಸಮುದಾಯಗಳ ಜೊತೆ ಕುಳಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಊಟ ಮಾಡಿದರು.
ಮೂರು ದಶಕಗಳಲ್ಲಿ ಪ್ರಪ್ರಥಮ ಬಾರಿಗೆ ಈ ಎರಡೂ ಸಮುದಾಯಗಳು ಒಟ್ಟಿಗೆ ಸೌಹಾರ್ದಯುತವಾಗಿ ಸಮಾನವಾಗಿ ಕುಳಿತು ಊಟ ಮಾಡಿದ್ದು ಅಭೂತಪೂರ್ವ ಘಟನೆಗೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಕೆ ಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಹಲವಾರು ಮುಖಂಡರು ಈ ಸೌಹಾರ್ದಯುತ ಸಂದರ್ಭದಲ್ಲಿ ಜೊತೆಯಾಗಿದ್ದರು.
ಬದನವಾಳು ಗ್ರಾಮದ ವಿಶೇಷತೆ :
ಬದನವಾಳು ಖಾದಿ ಕೇಂದ್ರದ ಆವರಣದಲ್ಲಿ 1927 ಇಸವಿಯಲ್ಲಿ ಭೇಟಿ ನೀಡಿದ್ದ ಮಹಾತ್ಮಗಾಂಧಿಜಿ ಅವರು ‘ಬದನವಾಳು ನೂಲುವ ಪ್ರಾಂತ್ಯ’ ಎಂಬ ಕಲ್ಲನ್ನು ಶಿಲಾನ್ಯಾಸ ಮಾಡಿರುವ ಕುರುಹು ಈಗಲೂ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಖಾದಿ ಕೇಂದ್ರದಲ್ಲಿ ಬಟ್ಟೆ, ಅವಲಕ್ಕಿ, ಎಣ್ಣೆ, ಬೆಂಕಿಪಟ್ಟಣ, ಕಾಗದ ಸೇರಿದಂತೆ ಇತರೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಹೀಗಾಗಿ 1932ರಲ್ಲಿ ಗಾಂಧೀಜಿ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಚಟುವಟಿಕೆಗಳನ್ನು ಪರಿಶೀಲಿಸಿದ್ದರು. ಇಂದಿಗೂ ಈ ಗ್ರಾಮದಲ್ಲಿ ನೂಲು ಉತ್ಪಾದನೆ ಮತ್ತು ಖಾದಿ ಬಟ್ಟೆ ತಯಾರಿಕೆ ನಡೆಯುತ್ತಿದ್ದು, 80ಕ್ಕೂ ಹೆಚ್ಚು ಜನ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಇಲ್ಲಿನ ಖಾದಿ ಗ್ರಾಮೋದ್ಯೋಗ ಕೇಂದ್ರದ ಪುನಶ್ವೇತನಕ್ಕೆ ಬಹು ಹಿಂದಿನಿಂದಲೂ ಸ್ಥಳೀಯರು ಒತ್ತಡ ಹೇರುತ್ತಾ ಬಂದಿದ್ದಾರೆ.