ಬೆಂಗಳೂರು, ಅ.1 www.bengaluruwire.com : ಕೇಂದ್ರ ಸರ್ಕಾರವು ನೀಡುವ 2020ನೇ ಸಾಲಿನ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಈಗಾಗಲೇ ಘೋಷಿಸಿದ್ದು, ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ್ದ ‘ನಾದದ ನವನೀತ ಡಾ. ಪಂಡಿತ್ ವೆಂಕಟೇಶ್ ಕುಮಾರ್ʼ ಸಾಕ್ಷ್ಯಚಿತ್ರವು ರಜತ ಕಮಲ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲಾಖೆಯ ಸಾಧನೆಯನ್ನು ಕೊಂಡಾಡಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಧಾರವಾಡದ ಅದ್ವಿತೀಯ ಹಿಂದುಸ್ತಾನಿ ಗಾಯಕರಾದ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರ ಬಗ್ಗೆ 2020ರಲ್ಲಿ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿತ್ತು. ರಾಷ್ಟ್ರ ಕಂಡ ಸುಪ್ರಸಿದ್ಧ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರು ಈ ಸಾಕ್ಷ್ಯಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಾಕ್ಷ್ಯಾಚಿತ್ರವು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಚಲನಚಿತ್ರೇತರ ವಿಭಾಗದ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ರಜತ ಕಮಲ ಪ್ರಶಸ್ತಿಗೆ ಭಾಜನವಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಿರ್ಮಿಸಿದ ‘ನಾದದ ನವನೀತ ಡಾ. ಪಂಡಿತ್ ವೆಂಕಟೇಶ್ ಕುಮಾರ್ʼ ಸಾಕ್ಷ್ಯಚಿತ್ರವು ರಜತ ಕಮಲ ಪ್ರಶಸ್ತಿಗೆ ಸ್ವೀಕರಿಸಿರುವುದು ನಮ್ಮೆಲ್ಲರಿಗೂ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. ಇದರ ಹಿಂದೆ ಕೆಲಸ ಮಾಡಿದಂತಹ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು, ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ವರ್ಗದವರು, ನಿರ್ದೇಶಕರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇವತ್ತು ಈ ಪ್ರಶಸ್ತಿ ಮುಖಾಂತರ ಕರ್ನಾಟಕದ ಚಲನಚಿತ್ರ ರಂಗಕ್ಕೆ ಇನ್ನೊಂದು ಹಿರಿಮೆ ಸೇರಿದಂತಾಗಿದೆ.” ಎಂದು ಹೇಳಿದ್ದಾರೆ.
ಶುಕ್ರವಾರ (ಸೆ. 30) ಸಂಜೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ವರ್ಣರಂಜಿತ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಾರ್ತಾ ಇಲಾಖೆ ನಿರ್ಮಿಸಿದ ‘ನಾದದ ನವನೀತ ಡಾ. ಪಂಡಿತ್ ವೆಂಕಟೇಶ್ ಕುಮಾರ್ʼ ಸಾಕ್ಷ್ಯಚಿತ್ರ ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿಯ ಚಿತ್ರವಾಗಿ ರಜತ ಕಮಲ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅತ್ಯುತ್ತಮ ಕನ್ನಡ ಚಲನಚಿತ್ರ ಹಾಗೂ ಅತ್ಯುತ್ತಮ ಧ್ವನಿಹೊಂದಿದ ಚಿತ್ರದ ಪ್ರಶಸ್ತಿಯನ್ನು ʼಡೊಳ್ಳುʼ ಚಲನಚಿತ್ರ ತಂಡದವರು ಸ್ವೀಕರಿಸಿದರೆ, ಅತ್ಯುತ್ತಮ ಪರಿಸರ ಸಂರಕ್ಷಣೆ ವಿಭಾಗದಲ್ಲಿ ʼತಲೆದಂಡʼ ಚಲನಚಿತ್ರದ ತಂಡದವರು ಅತ್ಯುತ್ತಮ ಪ್ರಶಸ್ತಿಯನ್ನು ಸೆ.30 ರಂದು ನಡೆದ ಸಮಾರಂಭದಲ್ಲಿ ಪಡೆದರು. ಈ ಎಲ್ಲಾ ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳ ನಿರ್ಮಾಣ ತಂಡಗಳ ಸಾಧನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮಾನದಿಂದ ಹೊಗಳಿದ್ದಾರೆ.
ಇಲಾಖೆಯ ಸಂಗ್ರಹಗಾರದಲ್ಲಿದೆ ಇಂತಹ ಅಪರೂಪದ ಅನೇಕ ಸಾಕ್ಷ್ಯಚಿತ್ರಗಳು :
“ರಾಷ್ಟ್ರಮಟ್ಟದಲ್ಲಿ ರಜತ ಕಮಲ ಪ್ರಶಸ್ತಿಗಳ ಮೂಲಕ ಕನ್ನಡ ಚಿತ್ರರಂಗದ ಸಾಧನೆಯನ್ನು ಉನ್ನತ ಮಟ್ಟಕ್ಕೆ ಏರಿಸಿರುವ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳ ಎಲ್ಲಾ ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರತಂಡದ ಸಾಧನೆಯ ಶ್ಲಾಘನೀಯ. ಅದರಲ್ಲೂ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ವಾರ್ತಾ ಇಲಾಖೆಯು ಸದಾ ಮುಂಚೂಣಿಯಲ್ಲಿದೆ. ಇಲಾಖೆಯ ಸಂಗ್ರಹಗಾರದಲ್ಲಿ ಇಂತಹ ಅನೇಕ ಅಪರೂಪದ ಸಾಕ್ಷ್ಯಚಿತ್ರಗಳಿವೆ. 2020ರ ಸಾಲಿನದ್ದು ಶ್ರೇಷ್ಠ ಸಾಧನೆಯಾಗಿದೆ “ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ತಮ್ಮ ಇಲಾಖೆಯ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ಪ್ರಥಮ ಬಾರಿಗೆ ಇಲಾಖೆಗೆ ರಜತ ಕಮಲ ಪ್ರಶಸ್ತಿಯ ಗರಿ :
‘ಇದೇ ಪ್ರಪ್ರಥಮ ಬಾರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯು ನಿರ್ಮಿಸಿದ ಸಾಕ್ಷ್ಯಚಿತ್ರವು ರಾಷ್ಟ್ರೀಯ ಮಟ್ಟದಲ್ಲಿ ರಜತ ಕಮಲ ಪ್ರಶಸ್ತಿಗೆ ಭಾಜನವಾಗಿದೆ. ಹಾಗೆಯೇ, 2020ರಲ್ಲಿ ವಾರ್ತಾ ಇಲಾಖೆಯೊಂದೇ ದೇಶದಲ್ಲಿ ಈ ಬಗೆಯ ಸಾಧನೆಯನ್ನು ಮಾಡಿದೆ. ಇಲಾಖೆಗೆ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ರಜತ ಕಮಲ ಪ್ರಶಸ್ತಿ ಸಂದಿರುವುದು ಇಲಾಖೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದಕ್ಕಾಗಿ ಶ್ರಮಿಸಿದ ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ಮತ್ತು ವೈಯಕ್ತಿಕವಾಗಿ ಹಿರಿಯ ಹಾಗೂ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರನ್ನು ವೈಯಕ್ತಿಕವಾಗಿ ಅಭಿನಂದಿಸುವುದಾಗಿ’ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಆಯುಕ್ತರಾದ ಡಾ. ಹರ್ಷ ಪಿ. ಎಸ್ ಅವರು ತಿಳಿಸಿದ್ದಾರೆ.