ನವದೆಹಲಿ, ಸೆ.28 www.bengaluruwire.com : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಹಾಗೂ ಅದರ ಸಂಯೋಜಿತ 8 ಸಂಘಟನೆಗಳಿಗೆ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧ ಹೇರಿದೆ.ಕಾನೂನುಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮಕ್ಕೆ ಕೈಗೊಂಡಿದೆ.
ಕೇಂದ್ರ ಗೃಹಸಚಿವಾಲಯ ಈ ಕುರಿತಂತೆ ಸೆ.27ರಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ದೇಶಾದ್ಯಂತ ಪಿಎಫ್ಐ ಸಂಘಟನೆ ಹಾಗೂ ಅದರ ಸಹ ಸಂಘಟನೆಗಳ ಮೇಲೆ ಕೇಂದ್ರ ತನಿಖಾ ತಂಡಗಳು ದಾಳಿ ನಡೆಸಿ ಪಿಎಫ್ ಐ ಸಂಘಟನೆ ಸಂಬಂಧಿತ ನೂರಾರು ಜನರನ್ನು ಬಂಧಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಸಮಾಜದಲ್ಲಿ ಶಾಂತಿಗೆ ಭಂಗ, ಕಾನೂನು ಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ, ಅಕ್ರಮವಾಗಿ ಹವಾಲಾ ಮೂಲಕ ಹಣ ವರ್ಗಾವಣೆ ನಡೆಸಿದ ಆರೋಪಗಳು ಈ ಸಂಘಟನೆಗಳ ಮೇಲಿದೆ.
ದೇಶಾದ್ಯಂತ ಅನೇಕ ದಾಳಿಗಳು ಮತ್ತು ಕೇಂದ್ರ ಏಜೆನ್ಸಿಗಳಿಂದ ಸರಣಿ ಬಂಧನಗಳ ನಂತರ, ಭಯೋತ್ಪಾದಕ ನಿಧಿಗೆ ಸಂಬಂಧಿಸಿದ ಆರೋಪ ಸಂಬಂಧ ಗೃಹ ವ್ಯವಹಾರಗಳ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ. ಇದರ ಜೊತೆಗೆ, PFI ಯ ಸಹವರ್ತಿ ಸಂಸ್ಥೆಗಳು – ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ಕೇರಳದ ರಿಹ್ಯಾಬ್ ಫೌಂಡೇಶನ್ ಗಳನ್ನು ಸಹ ನಿಷೇಧಿಸಲಾಗಿದೆ.
ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 27 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಜಾರಿ ನಿರ್ದೇಶನಾಲಯ (ED) ಮತ್ತು ರಾಜ್ಯ ಪೊಲೀಸರು PFI ಮೇಲೆ ದಾಳಿ ನಡೆಸಿದ್ದರು. ಈ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಈ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದವು. ಅಲ್ಲದೆ ಈ ತನಿಖಾ ಸಂಸ್ಥೆಗಳ ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮೊದಲ ಸುತ್ತಿನ ದಾಳಿಯಲ್ಲಿ ಪಿಎಫ್‌ಐಗೆ ಸೇರಿದ 106 ಮಂದಿಯನ್ನು ಬಂಧಿಸಲಾಗಿತ್ತು. ಏತನ್ಮಧ್ಯೆ, ಎರಡನೇ ಸುತ್ತಿನ ದಾಳಿಯಲ್ಲಿ, PFI ಗೆ ಸೇರಿದ 247 ಜನರನ್ನು ಬಂಧಿಸಲಾಗಿದೆ. ತನಿಖಾ ಸಂಸ್ಥೆಗಳು ಪಿಎಫ್ ಐ ಹಾಗೂ ಸಂಸ್ಥೆಗಳ ವಿರುದ್ಧ ಸಾಕಷ್ಟು ಪುರಾವೆಗಳನ್ನು ಪಡೆದಿವೆ, ಅದರ ಆಧಾರದ ಮೇಲೆ ಇವುಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕೇಂದ್ರ ಸರ್ಕಾರವು PFI ಮತ್ತು ಅದರ ಸಹವರ್ತಿ ಸಂಸ್ಥೆಗಳನ್ನು ಕಾನೂನುಬಾಹಿರ ಸಂಘ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಘೋಷಿಸುತ್ತಿದ್ದಂತೆ, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಟ್ವೀಟ್‌ನಲ್ಲಿ “PFI ಅನ್ನು ನಿಷೇಧಿಸುವುದು ಇಸ್ಲಾಮಿಕ್ ಜಿಹಾದ್ ವಿರುದ್ಧದ ನಿರ್ಣಾಯಕ ಹೆಜ್ಜೆ” ಎಂದು ಹೇಳಿದ್ದಾರೆ.