ಮೈಸೂರು, ಸೆ.26 www.bengaluruwire.com : ನಾಡಹಬ್ಬ ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಚಾಲನೆ ನೀಡಿದ್ದಾರೆ. ಇದೇ ಪ್ರಥಮ ಬಾರಿಗೆ ದೇಶದ ಪ್ರಥಮ ಪ್ರಜೆ ನವದಿನಗಳ ದಸರಾ ಹಬ್ಬಕ್ಕೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾಮರ್ ಚೆಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.
ಸೋಮವಾರ ಬೆಳಗ್ಗೆ 9.45ರಿಂದ 10.05ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡುವ ಮೂಲಕ ನವದಿನಗಳ ದಸರಾ ಸಡಗರಕ್ಕೆ ಇಂಬು ನೀಡಿದಂತಾಗಿದೆ.
ಮೈಸೂರು ಅರಮನೆಯಲ್ಲೂ ಖಾಸಗಿ ದರ್ಬಾರ್ ಸಡಗರ:
ಖಾಸಗಿ ದಸರಾಕ್ಕೂ ಅರಮನೆ ಸಿದ್ಧವಾಗಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 9ನೇ ಬಾರಿಗೆ ಖಾಸಗಿ ದರ್ಬಾರ್ ಮುನ್ನಡೆಸುವರು. ಮೈಸೂರು ಒಡೆಯರ್ ಆಡಳಿತದ ಗತಕಾಲದ ವೈಭವವೂ ಗರಿಗೆದರಿದಂತಾಗಿದೆ.
ಈ ಮೂಲಕ ಸಾಂಸ್ಕೃತಿಕ ನಗರಿಯಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ಕಳೆದ ಎರಡು ವರ್ಷಗಳ ಕಾಲ ಸರಳವಾಗಿ ಆಚರಣೆ ಕಂಡಿದ್ದ ದಸರಾ ಹಬ್ಬಕ್ಕೆ ಈ ಬಾರಿ ವೈಭದ ಕಳೆ ಬಂದಿದೆ. ಇಡೀ ಮೈಸೂರು ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ರಾತ್ರಿಯಾದಂತೆ ಮೈಸೂರಿನ ಅರಮನೆ, ಪ್ರಮುಖ ಬೀದಿಗಳು ದೀಪಾಲಂಕಾರದಿಂದ ಸಿಂಗಾರಗೊಳ್ಳಲು ಮೈಸೂರು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಹೀಗಾಗಿ ಬೆಳಗಿಗಿಂತ ರಾತ್ರಿಯಲ್ಲಿ ಮೈಸೂರಿನ ಸೊಬಗನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ದೇಶ- ವಿದೇಶಗಳ ಪ್ರವಾಸಿಗರು ಮೈಸೂರು ಹಾಗೂ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ದಸರಾ ಹಬ್ಬದ ಆಚರಣೆಯಲ್ಲಿ ಯುವ ದಸರಾ, ರೈತ ದಸರಾ, ಮಕ್ಕಳ ದಸರಾ, ದಸರಾ ವಸ್ತುಪ್ರದರ್ಶನ,ಆಹಾರ ಮೇಳ, ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ಕ್ರೀಡಾಕೂಟ, ಕುಸ್ತಿ, ಫಲಪುಷ್ಪ ಪ್ರದರ್ಶನ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕ್ರಮಗಳು ಸೋಮವಾರದಿಂದಲೇ ಆರಂಭವಾಗಿದೆ. ಇದರಿಂದ ಮೈಸೂರಿನಲ್ಲಿ ಸಾಲು ಸಾಲು ದಸರಾ ಚಟುವಟಿಕೆಗಳು ಅನಾವರಣಗೊಂಡು, 10 ದಿನಗಳ ಕಾಲ ಹಬ್ಬದ ನವೋಲ್ಲಾಸ ಕಳೆಗಟ್ಟಿದಂತಾಗಿದೆ.
ನಾಡಹಬ್ಬ ಸಾಂಸ್ಕೃತಿಕ ಕಾರ್ಯಕ್ರಮ ಹಿರಿಮೆಯೇ ಹಾಗೆ: ದಸರಾದ ವೈಶಿಷ್ಟ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಕಲಾವಿದರುಗಳಿಂದ ಅರಮನೆ ಅಂಗಳದಲ್ಲಿ ನಿತ್ಯ ಸಂಜೆ ನಡೆಯಲಿದೆ. ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ, ಕಿರು ರಂಗಮಂದಿರ, ಚಿಕ್ಕಗಡಿಯಾರ ಹಾಗೂ ಪುರಭವನ ವೇದಿಕೆಯಲ್ಲೂ ಹಲವು ವಿವಿಧ ವಿಭಿನ್ನ ವಿಶಿಷ್ಟ ಕಾರ್ಯಕ್ರಮಗಳು ಜರುಗಲಿದೆ.
ಯುವ ದಸರಾದಲ್ಲಿ ಮಂಗ್ಲಿ ಮಿಂಚು: ಯುವ ಮನಸ್ಸುಗಳನ್ನು ಹುಚ್ಚೆದ್ದು ಕುಣಿಸುವ ‘ಯುವ ದಸರಾ’ ಸೆ.27ರಿಂದ ಏಳು ದಿನಗಳ ಕಾಲ ವರ್ಣರಂಜಿತವಾಗಿ ನಡೆಯಲಿದೆ. ತೆಲುಗಿನ ಜನಪ್ರಿಯ ಗಾಯಕಿ ಮಂಗ್ಲಿ, ಬಾಲಿವುಡ್ ಗಾಯಕರಾದ ಕನ್ನಿಕಾ ಕಪೂರ್, ಅಮಿತ್ ತ್ರಿವೇದಿ ಮತ್ತು ಸುನಿಧಿ ಚೌಹಾಣ್ ಸಂಗೀತದ ಹೊನಲು ಹರಿಸಲಿದ್ದಾರೆ. ಗಾಯಕರಾದ ರಘು ದೀಕ್ಷಿತ್, ಡಾ.ಶಮಿತಾ ಮಲ್ನಾಡ್ ಸಹ ತಮ್ಮ ಸಂಗೀತ ಸ್ವಾದ ಉಣಬಡಿಸಲಿದ್ದಾರೆ.
ಕುಸ್ತಿ ಅಖಾಡದಲ್ಲಿ ಸಾಕ್ಷಿ ಮಲ್ಲಿಕ್ : ಕುಸ್ತಿ ಕಾಳಗಕ್ಕೆ ಈ ಬಾರಿ ಖ್ಯಾತ ಕುಸ್ತಿಪಟು ಸಾಕ್ಷಿ ಮಲ್ಲಿಕ್ ವಿಶೇಷ ಆಹ್ವಾನಿತರಾಗಿದ್ದು, ಪಂಜಕುಸ್ತಿ ಟೂರ್ನಿಯೂ ಇದೆ.
ದಸರಾಗೆ ಖಾಕಿ ಭದ್ರತೆ: ದಸರಾಗೆ 5,485 ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಜತೆಗೆ, ಸಿಸಿಟಿವಿ ಕ್ಯಾಮರಾ, ಡ್ರೋನ್ ಕ್ಯಾಮರಾ, ಬಾಡಿ ವೋರ್ನ್ ಕ್ಯಾಮರಾ ಮೂಲಕ ಕಣ್ಗಾವಲು ಇಟ್ಟಿದ್ದು, ಮೈಸೂರಿನೆಲ್ಲಡೆ ಭಿಗಿಭದ್ರತೆ ಒದಗಿಸಲಾಗಿದೆ.
ದಸರೆಯಲ್ಲೂ ಯುವರತ್ನ ಪುನೀತ್ ನೆನಪು : ದಿವಂಗತ ಪುನೀತ್ ರಾಜ್ಕುಮಾರ್ ನೆನಪಿನಲ್ಲಿ ದಸರಾದಲ್ಲಿ ಈ ಬಾರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಲನಚಿತ್ರೋತ್ಸವದಲ್ಲೂ ‘ಅಪ್ಪು ದಿನ’ ಏರ್ಪಡಿಸಲಾಗಿದೆ. ನಟ ಪುನೀತ್ ರಾಜ್ ಕುಮಾರ್ ಅವರ ಆರು ಸಿನಿಮಾಗಳನ್ನು ತೋರಿಸಲಾಗುತ್ತಿದೆ. ದೀಪಾಲಂಕಾರದಲ್ಲಿ ಪವರ್ಸ್ಟಾರ್ಗೆ ಬೆಳಕಿನ ರೂಪಕ ನೀಡಿದ್ದರೆ, ಫಲಪುಷ್ಪ ಪ್ರದರ್ಶನದಲ್ಲೂ ‘ಯುವರತ್ನ’ನಿಗೆ ಹೂವಿನ ಸಿಂಗಾರ ಮಾಡಲಾಗಿದೆ.