ಬೆಂಗಳೂರು, ಸೆ.26 www.bengaluruwire.com : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಿರುವ ದಸರಾ ಹಬ್ಬ-2022ರ ಉದ್ಘಾಟನಾ ಕಾರ್ಯಕ್ರಮ ನಡೆದ ಚಾಮುಂಡಿಬೆಟ್ಟದಲ್ಲಿನ ವೇದಿಕೆಯಲ್ಲಿ ಇಂಗ್ಲಿಷ್ ಭಾಷೆಗಷ್ಟೆ ಮಣೆಹಾಕಿ, ಕನ್ನಡ ಭಾಷೆಯನ್ನು ಬಳಸದೆ ನಿರ್ಲಕ್ಷ್ಯ ಮಾಡಿರುವ ಬಗ್ಗೆ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಅರುಣ್ ಜಾವಗಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ “ಎರಡು ದಿನದ ಹಿಂದೆ ಕನ್ನಡಕ್ಕಾಗಿ ಹೊಸ ಕಾನೂನು ಮಾಡ್ತೀವಿ ಅಂತ ಹೇಳಿ, ನಾಡ ಹಬ್ಬದಲ್ಲೇ ಕನ್ನಡವನ್ನು ಕೈಬಿಟ್ರಲ್ಲಾ.? @CMofKarnataka ಸ್ವಾಭಿಮಾನ ಅನ್ನೋದೇನಾದ್ರೂ ಉಳಿದಿದೆಯೇ?” ಎಂದು ಪ್ರಶ್ನಿಸಿದ್ದಾರೆ.
“ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ… ಕನ್ನಡ ವಿಧೇಯಕ ಮಂಡನೆ” ಎಂದು ಬಿಜೆಪಿ ಪೋಸ್ಟರ್ ಅನ್ನು ಪೋಸ್ಟ್ ಮಾಡಿ ಏನಿದು ನಿಮ್ಮ ಕ್ರಮ? ಎಂದು ರಾಜಶೇಖರ್ ಎಂಬುವರು ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.






















