ಬೆಂಗಳೂರು, ಸೆ.26 www.bengaluruwire.com :
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಿರುವ ದಸರಾ ಹಬ್ಬ-2022ರ ಉದ್ಘಾಟನಾ ಕಾರ್ಯಕ್ರಮ ನಡೆದ ಚಾಮುಂಡಿಬೆಟ್ಟದಲ್ಲಿನ ವೇದಿಕೆಯಲ್ಲಿ ಇಂಗ್ಲಿಷ್ ಭಾಷೆಗಷ್ಟೆ ಮಣೆಹಾಕಿ, ಕನ್ನಡ ಭಾಷೆಯನ್ನು ಬಳಸದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಬೆಂಗಳೂರು ವೈರ್ ವರದಿ ಮಾಡಿದ ಕೆಲವೇ ಕ್ಷಣದಲ್ಲಿ ಕಾರ್ಯಕ್ರಮ ಆಯೋಜಕರು ಡಿಜಿಟಲ್ ಕನ್ನಡ ನಾಮಫಲಕವನ್ನು ಹಾಕಿಸಿ ತಮ್ಮ ತಪ್ಪನ್ನು ಸರಿಪಡಿಸಿದ್ದಾರೆ.
ಇದು “ಬೆಂಗಳೂರು ವೈರ್” (Bengaluru Wire Impact) ವರದಿ ಪರಿಣಾಮವಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಭಾಗವಹಿಸಿದ್ದ ಅಧಿಕೃತ ಕಾರ್ಯಕ್ರಮದಲ್ಲಿ ಕರ್ನಾಟಕದ ಆಡಳಿತ ಭಾಷೆಯಲ್ಲಿ ಕನ್ನಡವನ್ನೆ ನಿರ್ಲಕ್ಷಿಸಿರುವ ವಿಷಯ ದೊಡ್ಡದ ಪ್ರಚಾರವಾಗಿ ಬಿಜೆಪಿ ನೇತೃತ್ವದ ಸರ್ಕಾರದ ಇಮೇಜಿಗೆ ಬಹುದೊಡ್ಡ ತೊಡಕಾಗುತ್ತಿತ್ತು. ಇದನ್ನು ಅರಿತು ಬೆಂಗಳೂರು ವೈರ್ ಸುದ್ದಿ ವರದಿಯಿಂದ ಎಚ್ಚೆತ್ತುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭಾಷಣವಾಗುವ ತನಕದ 15 ನಿಮಿಷದವರೆಗೆ ವೇದಿಕೆ ಹಿಂಭಾಗದ ಡಿಜಿಟಲ್ ನಾಮಫಲಕದಲ್ಲಿ ಕೇವಲ ಇಂಗ್ಲಿಷ್ ನಲ್ಲಿ ಮಾತ್ರ ನಾಡಹಬ್ಬ ದಸರಾ-2022 ಹಾಗೂ ರಾಷ್ಟ್ರಪತಿಗಳಿಂದ ಕಾರ್ಯಕ್ರಮ ಉದ್ಘಾಟನೆಯ ಮಾಹಿತಿಯಿತ್ತು.
ಇದನ್ನು ಅರಿತ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ ಅರುಣ್ ಜಾವಗಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ “ಎರಡು ದಿನದ ಹಿಂದೆ ಕನ್ನಡಕ್ಕಾಗಿ ಹೊಸ ಕಾನೂನು ಮಾಡ್ತೀವಿ ಅಂತ ಹೇಳಿ, ನಾಡ ಹಬ್ಬದಲ್ಲೇ ಕನ್ನಡವನ್ನು ಕೈಬಿಟ್ರಲ್ಲಾ.? @CMofKarnataka ಸ್ವಾಭಿಮಾನ ಅನ್ನೋದೇನಾದ್ರೂ ಉಳಿದಿದೆಯೇ?” ಎಂದು ಪ್ರಶ್ನಿಸಿದ್ದರು.
“ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ… ಕನ್ನಡ ವಿಧೇಯಕ ಮಂಡನೆ” ಎಂದು ಬಿಜೆಪಿ ಪೋಸ್ಟರ್ ಅನ್ನು ಪೋಸ್ಟ್ ಮಾಡಿ ಏನಿದು ನಿಮ್ಮ ಕ್ರಮ? ಎಂದು ರಾಜಶೇಖರ್ ಎಂಬುವರು ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು. ಇದನ್ನು ಗಮನಿಸಿದ ಬೆಂಗಳೂರು ವೈರ್ ಈ ಟ್ವಿಟ್ ಗಳನ್ನು ಆಧರಿಸಿ bengaluruwire ವೆಬ್ ಸೈಟ್ ನಲ್ಲಿ ‘ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸಿಗದ ಮನ್ನಣೆ – ವ್ಯಾಪಕ ಆಕ್ರೋಶ’ ಸುದ್ದಿ ಪ್ರಸಾರ ಮಾಡಿತ್ತು. ಇದನ್ನು ಕಂಡು ಆದ ತಪ್ಪನ್ನು ಎಚ್ಚೆತ್ತುಕೊಂಡ ಆಯೋಜಕರು ಕೂಡಲೇ ಸರಿಪಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭಾಷಣದ ಸಂದರ್ಭದಲ್ಲಿ ಇಂಗ್ಲೀಷ್ ನಿಂದ ಕನ್ನಡದಲ್ಲಿ ನಾಮಫಲಕ ಬದಲಾಯಿಸಿದರು.