ಬೆಂಗಳೂರು, ಸೆ.24 www.bengaluruwire.com : ನಾಡಹಬ್ಬ ದಸರಾ ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಕರೆಂಟ್ ದರ ಏರಿಕೆ ಬರೆಯನ್ನು ಹಾಕಿದೆ. ಅಕ್ಟೋಬರ್ ಒಂದರಿಂದಲೇ ಪ್ರತಿ ಯೂನಿಟ್ ವಿದ್ಯುತ್ ದರ ಕನಿಷ್ಠ 24 ಪೈಸೆಯಿಂದ ಗರಿಷ್ಠ 43 ಪೈಸೆ ಏರಿಕೆಯಾಗಲಿದೆ.
ಕೇವಲ 5 ತಿಂಗಳ ಅಂತರದಲ್ಲಿ ಕೆಇಆರ್ ಸಿ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದು ಸಾಮಾನ್ಯ ಜನರು ಹಾಗೂ ಉದ್ದಿಮೆದಾರರಿಗೂ ನೂತನ ದರ ಏರಿಕೆ ಚಡಿಯೇಟು ನೀಡಿದಂತಾಗಿದೆ. ‘ಇಂಧನ ಹೊಂದಾಣಿಕೆ ಶುಲ್ಕ’ದ ಕಾರಣ ನೀಡಿ ಅ.1 ರಿಂದ ಮುಂದಿನ ಮಾರ್ಚ್ ಅನ್ವಯವಾಗುವಂತೆ ಈ ದರ ಪರಿಷ್ಕರಣೆ ಮಾಡಲಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಜನಸಾಮಾನ್ಯರು, ಸಂಘ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಸಾಮಾನ್ಯವಾಗಿ ರಾಜ್ಯದ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳು ವಿವಿಧ ವಿದ್ಯುತ್ ಉತ್ಪಾದನಾ ಕಂಪನಿಗಳಿಂದ ವಿದ್ಯುತ್ ಖರೀದಿಸುತ್ತದೆ. ಇದಕ್ಕೆ ತಗಲಿದ ವೆಚ್ಚವನ್ನು ಹೊಂದಾಣಿಕೆ ಶುಲ್ಕದ ರೂಪದಲ್ಲಿ ಗ್ರಾಹಕರಿಂದ ವಸೂಲಿ ಮಾಡಲು ಅವಕಾಶವಿದೆ. ಕಲ್ಲಿದ್ದಲು ಖರೀದಿ ದರಲ್ಲಾದ ಹೆಚ್ಚಳ ಸರಿದೂಗಿಸಲು 3 ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ.
ಪದೇ ಪದೇ ದರ ಏರಿಸುವುದನ್ನು ತಪ್ಪಿಸಲು ಎಲ್ಲಾ 5 ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಇಂಧನ ಹೊಂದಾಣಿಕೆ ಶುಲ್ಕ’ವನ್ನು ಪ್ರತಿ ಯೂನಿಟ್ ಗೆ ಮುಂದಿನ ಮೂರು ತಿಂಗಳಿಗೆ ಅನ್ವಯವಾಗುವಂತೆ 75 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಕೆಇಆರ್ ಸಿ ಯೂನಿಟ್ ಗೆ ಸರಾಸರಿ ಅಂದಾಜು 37.41 ಪೈಸೆ ಏರಿಕೆ ಮಾಡಲು ತನ್ನ ಸಮ್ಮತಿ ನೀಡಿದೆ.
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯ ಬಿಸಿ ಆಗಾಗ ಅನ್ನುವಂತೆ ಒಂದೇ ಸಮನೆ ಹೆಚ್ಚಳವಾಗುತ್ತಲೇ ಇದೆ. 2021ರ ನವೆಂಬರ್ ನಲ್ಲಿ ಪ್ರತಿ ಯೂನಿಟ್ ಗೆ 31ಪೈಸೆ ಹೆಚ್ಚಳ ಮಾಡಿ, 2021ರ ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗುವಂತೆ ಆದೇಶಿಸಲಾಗಿತ್ತು. ಇದಾದ ಬಳಿಕ ಈ ವರ್ಷದ ಏಪ್ರಿಲ್ ನಲ್ಲಿ ಪ್ರತಿ ಯೂನಿಟ್ ವಿದ್ಯುತ್ ಗೆ ಸರಾಸರಿಯಾಗಿ 35 ಪೈಸೆಯಷ್ಟು ಕೆಇಆರ್ ಸಿ ಹೆಚ್ಚಿಸಿ ಆದೇಶಿಸಿತ್ತು.
ಈ ಕರೆಂಟ್ ಶಾಕ್ ಹೊರೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಧನ ಹೊಂದಾಣಿಕೆ ಶುಲ್ಕದ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಸಿದೆ. ಕಳೆದ ಜುಲೈನಲ್ಲಿ ಬರೆ ಎಳೆದಿತ್ತು. ಈಗ ಮತ್ತೆ ದರ ಹೆಚ್ಚಿಸಿದೆ. ಕಲ್ಲಿದ್ದಲು ಬೆಲೆ ಹೆಚ್ಚಳದಿಂದ ವಿದ್ಯುತ್ ದರವನ್ನೂ ಏರಿಸಲಾಗುತ್ತಿದೆ ಎಂದು ಇಂಧನ ಸಚಿವರು ಹೇಳುವ ಮಾತು ಒಪ್ಪುವ ರೀತಿ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಮಂಡಲ ಅಧಿವೇಶನ ಮುಂದೂಡಿಕೆಯಾದ ಕೂಡಲೇ ವಿದ್ಯುತ್ ದರ ಏರಿಕೆ ಆಗಿದೆ! ಏನೀ ಹುನ್ನಾರ? ನವರಾತ್ರಿಗೆ ಹಬ್ಬದ ಶುಭಾಶಯ ಹೇಳಬೇಕಿದ್ದ ಸರ್ಕಾರ, ಕರೆಂಟ್ ಶಾಕ್ ಕೊಟ್ಟು ಜನರು ಕಂಗೆಡುವಂತೆ ಮಾಡಿದೆ. ಪ್ರತಿ ಯೂನಿಟ್ʼಗೆ 24ರಿಂದ 43 ಪೈಸೆ ಹೆಚ್ಚಿಸಿರುವುದು ಅವೈಜ್ಞಾನಿಕ, ಅನಪೇಕ್ಷಿತ ಹಾಗೂ ಖಂಡನೀಯ ಎಂದಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ವಿದ್ಯುತ್ ಉತ್ಪಾದನೆ ಉತ್ತಮವಾಗಿದೆ. ಆದರೂ ಖರೀದಿ ವೆಚ್ಚದಲ್ಲಿ 1,244 ಕೋಟಿ ರೂ. ಹೆಚ್ಚಳ ಆಗಿದೆ ಎನ್ನುವ ಲೆಕ್ಕವನ್ನು ನಂಬುವ ರೀತಿಯಲ್ಲಿ ಇಲ್ಲ. ಇಂಧನ ವಲಯದ ಕೆಲ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಎಸ್ಕಾಂಗಳ ಭುಜದ ಮೇಲೆ ಗುಂಡಿಟ್ಟು, ಜನರಿಗೆ ಹೊಡೆಯುವ ಕೆಲಸ ಆಗುತ್ತಿದೆ.
ರಾಜ್ಯ ಬಿಜೆಪಿ ಸರ್ಕಾರ ಜನರ ಪರ ಇಲ್ಲ ಎನ್ನುವುದು ಸತ್ಯ. ಜಾಗತಿಕ ಪೇಟೆಯಲ್ಲಿ ಕಚ್ಛಾತೈಲದ ಬೆಲೆ ನಿರಂತರ ಇಳಿದರೂ ದೇಶದಲ್ಲಿ ತೈಲಬೆಲೆ ಇಳಿಸದ ಕೇಂದ್ರದ ಸರ್ಕಾರದ ಹಾದಿಯಲ್ಲೇ ರಾಜ್ಯ ಬಿಜೆಪಿ ಸರ್ಕಾರವೂ ಸಾಗಿದೆ. ವಿದ್ಯುತ್ ದರದ ನಿರಂತರ ಏರಿಕೆ ಬಗ್ಗೆ ಗಂಭೀರ ಅನುಮಾನಗಳಿವೆ.
ವಿದ್ಯುತ್ ಸೋರಿಕೆ, ಕಳವು ತಡೆಲಾಗದ, ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳದ ಬಿಜೆಪಿ ಸರ್ಕಾರ ಅದಕ್ಷತೆಯ ಆಡಂಬೋಲ. ʼಬಡವರನ್ನು ಸುಲಿದು ಬಿಸ್ನೆಸ್ ಕ್ಲಾಸಿನ ಜನರ ಜೇಬು ತುಂಬುʼ ಎನ್ನುವುದು ಬಿಜೆಪಿ ತತ್ತ್ವ. ಅದನ್ನೇ ಕರ್ನಾಟಕದಲ್ಲೂ ಎಗ್ಗಿಲ್ಲದೆ ಮಾಡುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ವಿದ್ಯುತ್ ದರ ಏರಿಕೆ ಅವಶ್ಯಕತೆಯಿರಲಿಲ್ಲ ; ಎಫ್ ಕೆಸಿಸಿಐ
“ಕೆಇಆರ್ ಸಿಗೆ ಎಫ್ ಕೆಸಿಸಿಐ ನಿಂದ ಕರೋನಾ ಸೋಂಕಿನಿಂದ ಜರ್ಜರಿತವಾಗಿರುವ ಕೈಗಾರಿಕೆಗಳಿಗೆ ದರ ಏರಿಕೆ ಮಾಡದಂತೆ ಮನವಿ ಮಾಡಿತ್ತು. ಆದತೂ ಏಪ್ರಿಲ್ ನಲ್ಲಷ್ಟೆ ಪ್ರತಿ ಯೂನಿಟ್ ವಿದ್ಯುತ್ ಗೆ ಸರಾಸರಿ 35 ಪೈಸೆ ಕೆಇಆರ್ ಸಿ ಏರಿಕೆ ಮಾಡಿತ್ತು. ಈಗ ಕೆಪಿಸಿಎಲ್ ಕಲ್ಲಿದ್ದಲು ಖರೀದಿ ಟೆಂಡರ್ ನಲ್ಲಿ ಪಾಲ್ಗೊಂಡು ನಿಗಧಿತ ಕಲ್ಲಿದ್ದಲು ದರವನ್ನು ಪಡೆದುಕೊಂಡಿದೆ. ಹೀಗಿರುವಾಗ ಎಸ್ಕಾಂಗಳು ವಿದ್ಯುತ್ ಖರೀದಿಗಾಗಿ ಇಂಧನ ದರ ಹೊಂದಾಣಿಕೆ ಹಿನ್ನಲೆಯಲ್ಲಿ ದರ ಏರಿಕೆಗಾಗಿ ಪ್ರಸ್ತಾವನೆ ಸಲ್ಲಿಸದ್ದನ್ನು ಕೆಇಆರ್ ಸಿ ದರ ಏರಿಕೆ ಮಾಡುವ ಅವಶ್ಯಕತೆ ಇರಲಿಲ್ಲ. ಸಾಮಾನ್ಯ ಜನರಿಗೂ ಇದರಿಂದ ಹೊರೆಯಾಗಿದೆ.”
- ಸುರೇಶ್ ಬಾಬು, ಅಧ್ಯಕ್ಷರು, ಎಫ್ ಕೆಸಿಸಿಐ ಇಂಧನ ಸಮಿತಿ