ಬೆಂಗಳೂರು, ಸೆ.23 www.bengaluruwire.com : ರಾಜ್ಯದಲ್ಲಿ ಪಡಿತರ ಆಹಾರ ಧಾನ್ಯಗಳನ್ನು ಪಡೆಯಲು ಪಡಿತರ ಕಾರ್ಡ್ ದಾರರು ಕಳೆದ ಸೆ.10ರಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಸರ್ಕಸ್ ಮಾಡುವಂತಾಗಿದೆ. ರೇಷನ್ ಕಾರ್ಡ್ ಹಿಡಿದು ಹೋದರು “ನಾಳೆ ಬನ್ನಿ ಸರ್ವಸ್ ಸಮಸ್ಯೆಯಿದೆ” ಎಂದು ಅಂಗಡಿಯವರು ಹೇಳೋದು ಈಗ ಸಾಮಾನ್ಯವಾಗಿದೆ.
ಆಹಾರ ಇಲಾಖೆಯ ತಂತ್ರಾಂಶಕ್ಕೆ ಪಡಿತರದಾರರಿಂದ ಎರಡು ಬಾರಿ ಬಯೋಮೆಟ್ರಿಕ್ (Biometrics) ಪಡೆಯುವ ರೀತಿಯಲ್ಲಿ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಅಪಡೇಟ್ ಮಾಡಲಾಗಿದೆ. ಈ ಹೊಸ ವ್ಯವಸ್ಥೆ ಅನುಷ್ಠಾನ ಮಾಡಲು ಪ್ರಾರಂಭಿಸುತ್ತಿದ್ದಂತೆ ರಾಜ್ಯದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿ ಪಡಿತರ ವಿತರಣಾ ವ್ಯವಸ್ಥೆಯಡಿ ಜನರಿಗೆ ಆಹಾರ ಧಾನ್ಯ ಪಡೆದುಕೊಳ್ಳುವಲ್ಲಿ ಸಮಸ್ಯೆ ಎದುರಾಗಿದೆ. ಮಾರುದ್ದ ಕ್ಯೂ ನಿಂತರೂ ಅದೇ ದಿನ ತಮಗೆ ಅಕ್ಕಿ, ಗೋಧಿ, ರಾಗಿ ಸಿಗುತ್ತೆ ಎಂಬ ಖಾತರಿಯಿಲ್ಲದಂತಾಗಿದೆ.
ಇದು ಬಡವರು ಮತ್ತು ಸಾಮಾನ್ಯ ಜನರಿಗೆ ನುಂಗಲಾರದ ತುತ್ತಾಗಿದೆ. ಪ್ರತಿದಿನ 20 ಜನರಿಗೆ ಆಹಾರ ಧಾನ್ಯವನ್ನು ವಿತರಿಸುತ್ತಿದ್ದ ನ್ಯಾಯಬೆಲೆ ಅಂಗಡಿಗಳು ಈಗ ಪ್ರತಿ ಕಾರ್ಡ್ ದಾರರಿಂದ ಎರಡು ಬಾರಿ ಬಯೋಮೆಟ್ರಿಕ್ ಪಡೆದ ಬಳಿಕವಷ್ಟೇ ಪಡಿತರ ನೀಡಬೇಕಾಗಿರುವುದರಿಂದ ಕೇವಲ 10 ಜನರಿಗಷ್ಟೇ ಅಕ್ಕಿ- ಬೇಳೆ ನೀಡುವಂತಾಗಿದೆ.
ರಾಜ್ಯಾದ್ಯಂತ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡ್‌ದಾರರು ಎರಡು ಬಾರಿ ಬಯೋಮೆಟ್ರಿಕ್ ನೀಡುವುದನ್ನು ಇದೇ ಸೆಪ್ಟೆಂಬರ್‌ನಿಂದ ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ಪಡಿತರ ಲೆಕ್ಕಾಚಾರ ತಪ್ಪಾಗದಿರಲಿ ಎಂಬ ಕಾರಣಕ್ಕೆ ಒಂದು ಬಾರಿ ನೀಡುವ ಬಯೋಮೆಟ್ರಿಕ್ ದತ್ತಾಂಶ ರಾಜ್ಯ ಸರ್ಕಾರದ ಸರ್ವರ್ ಸೇರಿದರೆ, ಮತ್ತೊಮ್ಮೆ ನೀಡುವ ದತ್ತಾಂಶ ಕೇಂದ್ರ ಸರ್ಕಾರದ ಸರ್ವರ್ ಗೆ ಹೋಗುತ್ತದೆ. ಈಗಾಗಲೇ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಪಡಿತರ ಕಾರ್ಡ್ ಪಡೆಯಲು ಬರುವ ಗ್ರಾಹಕರಿಂದ ಎರಡೆರಡು ಬಾರಿ ಬಯೋಮೆಟ್ರಿಕ್ ಪಡೆದುಕೊಳ್ಳಲಾಗುತ್ತಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಅನ್ನ ಭಾಗ್ಯ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಗಳ ಪಡಿತರ ಆಹಾರಧಾನ್ಯಗಳನ್ನು ವಿತರಿಸುವ ಸಂದರ್ಭದಲ್ಲಿ, ಎರಡೂ ಯೋಜನೆಗಳಿಗೆ ಪ್ರತ್ಯೇಕವಾಗಿಯೇ ಆಧಾರ್ ಬಯೋ ದೃಢೀಕರಣ ಪಡೆಯುವಂತೆ ಸೂಚಿಸಲಾಗಿದೆ. ಈ ಸಂಬಂಧ ಆಹಾರ ಇಲಾಖೆಯ ತಂತ್ರಾಂಶದಲ್ಲೂ ಮಾರ್ಪಾಡು ಮಾಡಲಾಗಿದೆ. ಒಂದು ಬಾರಿ ಬಯೋಮೆಟ್ರಿಕ್ ಪಡೆಯುವುದೇ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಸವಾಲಾಗಿದೆ. ಈಗ ಎರಡು ಬಾರಿ ಬಯೋಮೆಟ್ರಿಕ್ ಪಡೆದುಕೊಳ್ಳುವುದು ಪಡಿತರ ಅಂಗಡಿಯವರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
“ರಾಜ್ಯದ 20,210 ಪಡಿತರ ಅಂಗಡಿಗಳಲ್ಲಿ ಸೆ.10ರಿಂದ ಆಹಾರ ಧಾನ್ಯ ಪಡೆಯಲು ಬರುವ ಕಾರ್ಡ್ ದಾರರಿಂದ ಎರಡು ಬಾರಿ ಬಯೋಮೆಟ್ರಿಕ್ ಪಡೆಯಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಬಯೋಮೆಟ್ರಿಕ್ ಪಡೆದ ಬಳಿಕ ಸರ್ವರ್ ಹಾಗೂ ಕಡಿಮೆ ವೇಗದ ಇಂಟರ್ ನೆಟ್ ನಿಂದಾಗಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಜಾಲದಲ್ಲಿ ಬಯೋಮೆಟ್ರಿಕ್ ಪಡೆದುಕೊಳ್ಳಲು ಸಾಧ್ಯವಾಗದೆ ಹಲವರು ಗ್ರಾಹಕರು ಬರಿಗೈಲಿ ಹಿಂದಿರುಗುವಂತಾಗಿದೆ. ಸರ್ವರ್ ಹಾಗೂ ಇಂಟರ್ ನೆಟ್ ವೇಗವಿದ್ದರಷ್ಟೆ ಕೆಲಸ ಆಗುತ್ತೆ. ಇಲ್ಲದಿದ್ದರೆ ಗ್ರಾಹಕರು ಮತ್ತೊಮ್ಮೆ ನ್ಯಾಯ ಬೆಲೆ ಅಂಗಡಿಗೆ ಹೋಗಿ ಬರಬೇಕು. ಇದು ನ್ಯಾಯಬೆಲೆ ಅಂಗಡಿ ನಡೆಸುವವರಿಗೂ ಹೊರೆಯಾಗಿದೆ. ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಸಮಸ್ಯೆ ಪರಿಹಾರವಾಗಿಲ್ಲ.”
– ಬಿ.ಪಿ.ಮಾದಪ್ಪ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪಡಿತರ ವಿತರಕರ ಹಿತರಕ್ಷಣಾ ಸಂಘ
ರಾಜ್ಯದಲ್ಲಿ ಈ ವ್ಯವಸ್ಥೆಯನ್ನು ಕೊಂಚ ಮುಂದಕ್ಕೆ ಹಾಕಿ ಈಗ ಜಾರಿಗೆ ತರಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯ ಸರ್ಕಾರವು ಪಡೆಯುವ ಆಹಾರ ಧಾನ್ಯಗಳು ಬಳಕೆಯಾಗಿದ್ದನ್ನು ಕ್ಲೈಮ್ ಮಾಡಲು ಎರಡನೇ ಬಾರಿ ಬಯೋಮೆಟ್ರಿಕ್ ಪಡೆದ ಡಾಟಾವನ್ನು ಅಲ್ಲಿಗೆ ಕಳುಹಿಸಲಾಗುತ್ತದೆ. ಹೊಸ ವ್ಯವಸ್ಥೆ ಜಾರಿಗೆ ಬಂದಿದ್ದು ಕೆಲವೇ ದಿನಗಳ ಕಾಲ ಗ್ರಾಹಕರಿಗೆ ಸಮಸ್ಯೆಯಾಗಲಿದೆ. ಆನಂತರ ಎಲ್ಲವೂ ಸರಿಯಾಗಲಿದೆ ಎನ್ನುತ್ತಾರೆ ಆಹಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ರಾಜ್ಯದಲ್ಲಿ ಈಗಾಗಲೇ ಎಪಿಲ್ (APL), ಬಿಪಿಎಲ್ (BPL), ಅಂತ್ಯೋದಯ ಕಾರ್ಡ್ ದಾರರು ಸೇರಿದಂತೆ 1.26 ಕೋಟಿ ರೇಷನ್ ಕಾರ್ಡ್ ದಾರರಿದ್ದಾರೆ. ಆ ಪೈಕಿ ಈಗಾಗಲೇ ಶೇ.52ರಷ್ಟು ಕಾರ್ಡ್ ದಾರರು ಪಡಿತರವನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಾಕೆ ಇಷ್ಟೆಲ್ಲಾ ಸರ್ಕಸ್ ಅಂತಿರಾ?
ಪಡಿತರ ವಿತರಣೆಯಲ್ಲಿ ರಾಜ್ಯಗಳ ಪಾಲು ಮತ್ತು ಕೇಂದ್ರ ಸರಕಾರದ ಪಾಲು ಇದೆ. ಆದರೆ ಕೆಲವೊಂದು ರಾಜ್ಯಗಳು ಅಷ್ಟೂ ಪಡಿತರವನ್ನು ತಾವೇ ನೀಡುತ್ತಿರುವುದಾಗಿ ಹೇಳಿಕೊಂಡು ಕೇಂದ್ರದ ಕೊಡುಗೆಯನ್ನು ಮರೆ ಮಾಚುತ್ತಿವೆ. ಇದನ್ನು ತಪ್ಪಿಸಿ ಕೇಂದ್ರದ ಉಚಿತ ಕೊಡುಗೆಯನ್ನು ಜನರಿಗೆ ಪ್ರತ್ಯೇಕವಾಗಿ ತಿಳಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ.
ಸರ್ವರ್ ಸಮಸ್ಯೆಯಿಂದ ಏನಾಗುತ್ತಿದೆ?
ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ, ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣದಡಿ 5 ಕೆ.ಜಿ. ಅಕ್ಕಿ ಪಡೆಯಲು ಎರಡು ಬಾರಿ ಬಯೋಮೆಟ್ರಿಕ್ ನೀಡಬೇಕು. ರಾಜ್ಯದ ಅಕ್ಕಿಗಾಗಿ ಒಮ್ಮೆ ಬೆರಳಚ್ಚು ನೀಡಿ ಅದನ್ನು ಕಂಪ್ಯೂಟರ್ ಮಾನ್ಯ ಮಾಡಲು ಕನಿಷ್ಟ ಅಂದರೂ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ 5 ನಿಮಿಷ ಬೇಕು. ಈಗ ಸರ್ವರ್ ಸಮಸ್ಯೆಯಿಂದಾಗಿ ಕನಿಷ್ಠ 15 ನಿಮಿಷದಿಂದ 30 ನಿಮಿಷ ಸಮಯ ಹಿಡಿಯುತ್ತಿದೆ.
ಆಹಾರ ಇಲಾಖೆಯ ಸರ್ವರ್ ಸಮಸ್ಯೆ ಹಾಗೂ ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆಯಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆ ಆಹಾರ ಇಲಾಖೆ ಆಯುಕ್ತರಾದ ಕನಗವಲ್ಲಿ ಹಾಗೂ ಇಲಾಖೆಯ ಸರ್ವರ್ ಮತ್ತು ಐಟಿ ವಿಭಾಗದ ಜಂಟಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಲು ಪ್ರಯತ್ನಿಸಿತಾದರೂ ಪ್ರತಿಕ್ರಿಯೆ ನೀಡಲು ಲಭ್ಯರಾಗಲಿಲ್ಲ. ಆದಷ್ಟು ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಸಿಗದೆ ಜನರು ಮತ್ತಷ್ಟು ತೊಂದರೆಗೆ ಒಳಗಾಗುವುದು ತಪ್ಪುವುದಿಲ್ಲ.