ಬೆಂಗಳೂರು, ಸೆ.23 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2017-19ರಿಂದ 5 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 3,12,203 ಫ್ಲಾಟ್ ಗಳು ನಗರದಲ್ಲಿ ಬಿಕರಿಯಾಗಿದೆ. ಈ ಫ್ಲಾಟ್ ಗಳ ನೋಂದಣಿಯಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 13,158 ಕೋಟಿ ರೂ. ಆದಾಯ ರೂಪದಲ್ಲಿ ಹರಿದು ಬಂದಿದೆ.
ಕರೋನಾ ಸೋಂಕಿನ ಎರಡನೇ ಅಲೆಯ ಬಳಿಕ 2021-22ನೇ ಆರ್ಥಿಕ ವರ್ಷದಲ್ಲಿ ಅಪಾರ್ಟ್ ಮೆಂಟ್ ಖರೀದಿಸುವ ಟ್ರೆಂಡ್ ಹೆಚ್ಚಾಗಿದ್ದು, ಈ ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ 67,456 ಅಪಾರ್ಟ್ ಮೆಂಟ್ ಗಳು ಸೇಲ್ ಆಗಿದೆ. ಇದು ನಗರದಲ್ಲಿ ಕರೋನಾ ಸೋಂಕಿನಿಂದ ತೀವ್ರವಾಗಿ ಬೆಂಗಳೂರು ನಗರ ಬಾಧಿಸಲ್ಪಟ್ಟಿದ್ದರೂ ಅಪಾರ್ಟ್ ಮೆಂಟ್ ಖರೀದಿ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲದಿರುವುದು ವಸತಿ ಸಮುಚ್ಛಯಗಳಲ್ಲಿನ ಫ್ಲಾಟ್ ನೋಂದಣಿ ಪ್ರಕ್ರಿಯೆಯಿಂದಲೇ ತಿಳಿದು ಬರುತ್ತಿದೆ.
ಬೆಂಗಳೂರಿನಲ್ಲಿ ಆಸ್ತಿ ಮಾಡೋದು ಅಂದರೆ ಸುಮ್ಮನೆ ಮಾತಲ್ಲ, ಭೂಮಿ ಬೆಲೆ ರಾಕೇಟ್ ವೇಗದಲ್ಲಿ ಬೆಳೆಯುತ್ತಿರುವಾಗ ಸೈಟ್ ಖರೀದಿಸಿ ಮನೆ ಕಟ್ಟೋದು ಅಷ್ಟು ಸುಲಭವಲ್ಲ. ಪಾಶ್ ಏರಿಯಾದಲ್ಲಿ ಒಂದಡಿ ಅಗಲ, ಒಂದಡಿ ಉದ್ದದ ಸ್ಥಿರಾಸ್ತಿಗಳ ಮೌಲ್ಯ ಐದಾರು ಸಾವಿರದಿಂದ 50-60 ಸಾವಿರದ ತನಕವಿದೆ. ಹೀಗಿರುವಾಗ ತಿಂಗಳ ಸಂಬಳ ನಂಬಿಕೊಂಡವರಿಗೆ, ಹೊರ ರಾಜ್ಯದಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದವರಿಗೆ ರೆಡಿ ಟು ಆಕ್ಯುಪೈ ಅಂದರೆ ರಿಜಿಸ್ಟ್ರೇಷನ್ ಆದ ಕೂಡಲೇ ಫ್ಲಾಟ್ ಸೇರಿಕೊಳ್ಳುವ ಅವಕಾಶ ಇರೋದು ಅಪಾರ್ಟ್ ಮೆಂಟ್ ನಲ್ಲಿ ಮಾತ್ರ.
ನಗರದಲ್ಲಿ ಬ್ರಿಗೇಡ್, ಸೆಂಚುರಿ, ಪ್ರೆಸ್ಟೀಜ್, ಕಾನ್ಫಿಡೆಂಟ್ ಗ್ರೂಪ್, ಭಾರತೀಯ ಸಿಟಿ, ಹೆಬಿಟೇಟ್, ಎಂಬೆಸಿ ಗ್ರೂಪ್, ಗೋದ್ರೇಜ್ ಪ್ರಾಪರ್ಟೀಸ್, ಡಿಎಸ್ ಮ್ಯಾಕ್ಸ್ ಸೇರಿದಂತೆ ಹಲವಾರು ಪ್ರತಿಷ್ಠಿತ ಡೆವಲಪರ್ ಗಳಿದ್ದಾರೆ. ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿಲ್ಲಾ, ಅಪಾರ್ಟ್ ಮೆಂಟ್ ಗಳ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಲೇ ಇದೆ. ಕರೋನಾ ಸೋಂಕು ಕಾಣಿಸಿಕೊಂಡ ಪ್ರಾರಂಭದಲ್ಲಿ ಲಾಕ್ ಡೌನ್, ಅನಿಶ್ಚಿತತೆ ಕಾಣಿಸಿಕೊಂಡ 2021-22ರಲ್ಲಿ ಮಾತ್ರ 54,458 ಫ್ಲಾಟ್ ಗಳು ಮಾತ್ರ ನಗರದಲ್ಲಿ ಮಾರಾಟವಾಗಿತ್ತು. ಅದು ಬಿಟ್ಟರೆ ಕಳೆದ ಐದು ವರ್ಷದಲ್ಲಿ ಬೆಂಗಳೂರಿನಲ್ಲಿ ಆಪಾರ್ಟ್ ಮೆಂಟ್ ಖರೀದಿ ಪ್ರಕ್ರಿಯೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ.
ರಾಜಧಾನಿ ಬೆಂಗಳೂರಲ್ಲಿ ಫ್ಲಾಟ್ ಮಾರಾಟ ಹೆಚ್ಚಾಗಿದೆ :
“ಬೆಂಗಳೂರು ಐಟಿ- ಬಿಟಿ ರಾಜಧಾನಿಯ ನಂತರ ಇದೀಗ ಸ್ಮಾರ್ಟಪ್ ಕ್ಯಾಪಿಟಲ್ ಆಗಿ ಬದಲಾಗಿದೆ. ಈ ನಗರದಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿರುವುದರಿಂದ ಸಹಜವಾಗಿಯೇ ವಸತಿಗಾಗಿ ಬೇಡಿಕೆ ಸದಾ ಇದ್ದೇ ಇದೆ. ಕೋವಿಡ್ ಪೂರ್ವದಲ್ಲಿ 2ಬಿಎಚ್ ಕೆ ಫ್ಲಾಟ್ ಗಳಿಗೆ ಬೇಡಿಕೆಯಿತ್ತು. ಆದರೀಗ ಕೋವಿಡ್ ನಂತರ ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ ಹೆಚ್ಚುವುದರಿಂದ, ಜನರಿಗೆ ಸ್ವಂತ ಸೂರಿನ ಪ್ರಾಮುಖ್ಯತೆ ಹೆಚ್ಚಾಗಿರುವುದರಿಂದ 3ಬಿಎಚ್ ಕೆ ಫ್ಲಾಟ್ ಗಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ದೇಶದ 7 ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಫ್ಲಾಟ್ ಮಾರಾಟ ಹೆಚ್ಚಾಗಿದೆ. ಅಪಾರ್ಟ್ ಮೆಂಟ್ ನಿರ್ಮಾಣ ವೆಚ್ಚ ಹೆಚ್ಚಾದರೂ ಮಧ್ಯಮ ವರ್ಗದವರಿಗಾಗಿ ಸರಾಸರಿ 6 ರಿಂದ 7 ಸಾವಿರ ರೂಪಾಯಿ ಪ್ರತಿ ಚದರಡಿಗೆ ಫ್ಲಾಟ್ ಗಳು ಲಭ್ಯವಾಗುತ್ತಿದೆ.”
– ಟಿ.ಭಾಸ್ಕರ್ ನಾಗೇಂದ್ರಪ್ಪ, ಕ್ರೆಡಾಯ್ ಬೆಂಗಳೂರು ಅಧ್ಯಕ್ಷರು
ಕಳೆದ 5 ವರ್ಷ ಅವಧಿಯಲ್ಲಿ ಬೆಂಗಳೂರಿನಲ್ಲಿ ನೋಂದಣಿಯಾದ ಫ್ಲಾಟ್ ಗಳ ವಿವರ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಬಂದ ಆದಾಯದ ಮಾಹಿತಿ ಹೀಗಿದೆ :
ಅವಧಿ | ಫ್ಲಾಟ್ ಗಳು ರಿಜಿಸ್ಟರ್ ಆಗಿರುವುದು | ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಬಂದ ಆದಾಯ (ಕೋಟಿ ರೂ.ಗಳಲ್ಲಿ) |
2017-18 | 61,600 | 2,329.96 |
2018-19 | 66,649 | 2,578.94 |
2019-20 | 62,040 | 2,682.90 |
2020-21 | 54,458 | 2,470.66 |
2021-22 | 67,456 | 3,096.019 |
ಒಟ್ಟಾರೆ | 3,12,203 | 13,158.479 |
ಇತ್ತೀಚೆಗೆ ಆಗಸ್ಟ್ 25 ರಿಂದ ಸೆಪ್ಟೆಂಬರ್ 5ರ ನಡುವೆ ನಗರದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಬೆಂಗಳೂರು ಪೂರ್ವ ಭಾಗದಲ್ಲಿರುವ ಮಹದೇವಪುರ, ಐಟಿ ಹಬ್ ಇರೋ ಸರ್ಜಾಪುರ, ಬೆಳ್ಳಂದೂರು, ಹೊರವರ್ತುಲ ಸುತ್ತಮುತ್ತಲ ಪ್ರದೇಶಗಳಲ್ಲಿನ ರಸ್ತೆ, ಮನೆ, ಅಪಾರ್ಟ್ ಮೆಂಟ್ ಗಳಿಗೆಲ್ಲಾ ನೀರು ನುಗ್ಗಿ ಜನರು ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಓಡಾಡುವಂತೆ ಮಾಡಿತ್ತು. ಇದು ನಗರದ ಕೆಲವು ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ದುಸ್ಥಿತಿಯ ಕರಾಳ ರೂಪದ ದರ್ಶನವಾಗಿ, ಜನರು ಈ ಕುರಿತು ಯೋಚಿಸುವಂತೆ ಮಾಡಿತ್ತು. ಹೀಗಾಗಿ ಈಗ ಮನೆ, ಅಪಾರ್ಟ್ ಮೆಂಟ್ ನಲ್ಲಿ ಫ್ಲಾಟ್ ತೆಗೆದುಕೊಳ್ಳುವವರು ಕೆರೆ, ರಾಜಕಾಲುವೆಯಿಂದ ಸಮಸ್ಯೆ ಆಗದ ಕಡೆಗಳಲ್ಲಿನ ಸ್ಥಿರಾಸ್ತಿಗಳತ್ತ ಒಲವು ತೋರುವಂತಾಗಿದೆ.
“ಬೆಂಗಳೂರಿನಲ್ಲಿ ಕಳೆದ 51 ವರ್ಷಗಳಲ್ಲೇ ಅತಿಹೆಚ್ಚು ಮಳೆಯಾಗಿದೆ. ಹೀಗಾಗಿ ಬೆಂಗಳೂರು ಪೂರ್ವ ಹಾಗೂ ಕೆಲವು ಕಡೆ ಮಳೆಯಿಂದಾಗಿ ಸಮಸ್ಯೆ ಉಂಟಾಗಿತ್ತು. ಇದೀಗ ನಿಧಾನವಾಗಿ ಇಲ್ಲಿನ ಜನತೆ ಚೇತರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರ ಕರೋನಾ ಸೋಂಕಿನ ಬಳಿಕವಂತೂ ಸಾಕಷ್ಟು ಚೇತರಿಸಿಕೊಂಡಿದೆ. ಟೈರ್-1 ಮತ್ತು ಟೈರ್-2 ಡೆವಲಪರ್ಸ್ ಗಳು ಗುಣಮಟ್ಟ, ಉತ್ತಮ ಸೌಕರ್ಯ ಹಾಗೂ ವಿನ್ಯಾಸ ಹೊಂದಿದ ಅಪಾರ್ಟ್ ಮೆಂಟ್ ಗಳನ್ನು ನಿರ್ಮಿಸಿ ಕೈಗೆಟಕುವ ದರದಲ್ಲಿ ಮಾರುತ್ತಿದ್ದಾರೆ. ಇವುಗಳಿಗೆ ಆಕರ್ಷಕ ಬಡ್ಡಿದರದಲ್ಲಿ ಗೃಹ ಸಾಲ ಲಭ್ಯವಾಗುತ್ತಿದೆ. ಹೀಗಾಗಿ ಅಪಾರ್ಟ್ ಮೆಂಟ್ ಗಳ ಖರೀದಿ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಕೆಲವರು ಹೂಡಿಕೆ ಮತ್ತು ಆದಾಯದ ದೃಷ್ಟಿಯಿಂದಲೂ ಫ್ಲಾಟ್ ಕೊಳ್ಳುತ್ತಿದ್ದಾರೆ.”
– ಪ್ರಶಾಂತ್ ಕುಮಾರ್.ಟಿ, ಪಾಲುದಾರರು, ಎಸ್ ಅಂಡ್ ಪಿ ಕನ್ಸಸ್ಟ್ರಕ್ಷನ್ ಅಂಡ್ ಇಂಟಿರಿಯರ್ ಸರ್ವೀಸಸ್
ಮಳೆಯಿಂದಾಗಿ ಬೆಂಗಳೂರಿನ ಶೇಕಡ 15ರಷ್ಟು ಭಾಗದಲ್ಲಿ ಮಾತ್ರ ಸಮಸ್ಯೆಯಾಗಿದೆ. ಅದರಲ್ಲೂ ಬೆಂಗಳೂರಿನ ಪೂರ್ವ ಭಾಗದಲ್ಲಿ ಸಮಸ್ಯೆ ತಲೆ ದೋರಿತ್ತು. ಈಗಾಗಲೇ ಈ ಪ್ರದೇಶಗಳಲ್ಲಿ ನೆಲೆಸಿರುವವರು ಹಾಗೂ ಅಪಾರ್ಟ್ ಕಾಮಗಾರಿ ಮುಗಿದಿರುವ ಕಡೆಗಳಲ್ಲಿ ನೀರು ನಿಂತು ಸಮಸ್ಯೆ ತಲೆದೋರಿತ್ತು. ಹೀಗಾಗಿ ಅಲ್ಪ ಕಾಲದಲ್ಲಿ ಇಲ್ಲಿ ಆಸ್ತಿಗಳ ಬೆಲೆಗಳಲ್ಲಿ ವ್ಯತ್ಯಾಸವಾಗಿರಬಹುದು. ಆದರೆ ಆಸ್ತಿಗಳಿಗೆ ಬೇಡಿಕೆ ಕುಸಿದಿಲ್ಲ. ಕಳೆದ ವರ್ಷ ಮೆಟ್ರೊ ಸಿಟಿಗಳಾದ ಮುಂಬೈ, ಚೆನ್ನೈಗಳಲ್ಲಿ ಭಾರೀ ಮಳೆಯಾಗಿ ಪ್ರವಾಹ ಸಂಭವಿಸಿದರೂ ಅಲ್ಲಿನ ಆಸ್ತಿಗಳ ಬೇಡಿಕೆ ಮಾತ್ರ ಕಡಿಮೆಯಾಗಿರಲಿಲ್ಲ ಎಂಬುದು ರಿಯಲ್ ಎಸ್ಟೇಟ್ ತಜ್ಞರ ಅಭಿಮತವಾಗಿದೆ.
“ವಸತಿ ಮಾರುಕಟ್ಟೆಯು ಇಂದು ಅಭಿವೃದ್ಧಿ ಹೊಂದುತ್ತಿದೆ. ಖರೀದಿದಾರರ ಮನೋಭಾವವು ತುಂಬಾ ಧನಾತ್ಮಕವಾಗಿದೆ. ವಸತಿ ಮಾರುಕಟ್ಟೆಯಲ್ಲಿ, ಕಳೆದ ಎರಡು ವರ್ಷಗಳಲ್ಲಿ ಐಷಾರಾಮಿ ವಿಭಾಗವು ಬಲವಾದ ಬೇಡಿಕೆಯನ್ನು ಕಂಡಿದೆ. ಹೆಚ್ಚಿನ ಗ್ರಾಹಕರು ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ದೊಡ್ಡ ಮನೆಗಳ ಅಗತ್ಯವನ್ನು ಅರಿತುಕೊಂಡಿದ್ದಾರೆ. ವಾಸ್ತವವಾಗಿ, ನಮ್ಮ ಪ್ರಮುಖ ಐಷಾರಾಮಿ ಯೋಜನೆಯಾದ ಸೆಂಚುರಿ ಎಥೋಸ್, ಕಳೆದ ಹಣಕಾಸು ವರ್ಷದಿಂದ ಮಾರಾಟದಲ್ಲಿ 81% ಮತ್ತು ಸಂಗ್ರಹಣೆಯಲ್ಲಿ 255% ಹೆಚ್ಚಳದೊಂದಿಗೆ ಸತತವಾಗಿ ಹೆಚ್ಚಿನ ಬೇಡಿಕೆಯನ್ನು ಕಂಡಿದೆ. ಆರ್ಥಿಕ ಚೇತರಿಕೆಯಲ್ಲಿ ವಸತಿ ರಿಯಲ್ ಎಸ್ಟೇಟ್ ನಿರ್ಣಾಯಕ ಪಾತ್ರ ವಹಿಸಿದೆ. ಹಸಿರು ಕಟ್ಟಡಗಳು ಮತ್ತು ತಂತ್ರಜ್ಞಾನದ ಏಕೀಕರಣದಂತಹ ನವೀನ ಪರಿಹಾರಗಳು ಈ ಕ್ಷೇತ್ರದ ಭವಿಷ್ಯ ಉತ್ತಮವಾಗಲು ಅಡಿಗಲ್ಲಾಗಿದೆ.”
– ಅಜಯ್ ಕೆ ಸಿಂಗ್, ಉಪಾಧ್ಯಕ್ಷರು (ಸೇಲ್ಸ್ ಮತ್ತು ಸೋರ್ಸಿಂಗ್), ಸೆಂಚುರಿ ರಿಯಲ್ ಎಸ್ಟೇಟ್