ಬೆಂಗಳೂರು, ಸೆ.19 www.bengaluruwire.com : ಇವರನ್ನು ನೋಡಿದವರು ಯಾವಾಗ ಇವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರೂ ಅಂತ ಕೇಳುವವರೇ ಜಾಸ್ತಿ. ಶುಭ ಸಮಾರಂಭಗಳಿಗೆ ಹೋದರಂತೂ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳುವವರೇ ಜಾಸ್ತಿ. ಸಾರ್ವಜನಿಕ ಸ್ಥಳಗಳಿಗೆ ಹೋದರೆ ಸದಾ ಜನರು ಇವರ ಸುತ್ತಮುತ್ತ ಸುತ್ತಿಕೊಳ್ಳುವುದೇ ಹೆಚ್ಚು.
ಅಂದ ಹಾಗೆ ಇವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಂತ ತಿಳಿದು ಎಷ್ಟೋ ಜನರು ಬೇಸ್ತು ಬಿದ್ದಿದ್ದಾರೆ. ಅಷ್ಟರ ಮಟ್ಟಿಗೆ ರಾಜಾಜಿನಗರ 5ನೇ ಬ್ಲಾಕ್ ನಿವಾಸಿ ಮಂಜುನಾಥ್, ಎಚ್.ಡಿ. ಕುಮಾರಸ್ವಾಮಿ ಹೋಲಿಕೆ ಹೊಂದಿದ್ದಾರೆ. ಹಾಗಾಗಿ ಇವರನ್ನು ತಿಳಿದ ಜನರು ಜೂನಿಯರ್ ಕುಮಾರಸ್ವಾಮಿ ಅಂತಲೇ ಇವರನ್ನು ಕರೆಯುತ್ತಾರೆ. ಇವರನ್ನು ಕುಮಾರಣ್ಣ ಅಂತ ತಿಳಿದು ಹಳ್ಳಿಯ ಜನ ಅಭಿನಂದಿಸಿದ್ದೂ ಇದೆ. ಆಮೇಲೆ ಒಂದು ಕ್ಷಣದ ಬಳಿಕ ಕ್ಷಮಿಸಿ ಸರ್ ಅಂತ ಹೇಳಿದ್ದು ಇದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರಂತೆ ಹಾವಭಾವ, ಮುಖ ಚಹರೆ ಇರುವ ಮಂಜುನಾಥ್ ರವರನ್ನು ನೋಡಿದರೆ ಕುಮಾರಣ್ಣ ಹೋಲಿಕೆಯಾಗುತ್ತದೆ. ಇವರು ರಾಜಾಜಿನಗರ ಬಿಜೆಪಿ ಒಬಿಸಿ ಮಂಡಲ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಿಕ್ಷಣ ಸಚಿವರ ಎಸ್ ಸುರೇಶ್ ಕುಮಾರ್ ರವರ ಅಪ್ತರಂತೆ.
ಬಿಜೆಪಿ ಮುಖಂಡ ಹಾಗೂ ಸಚಿವರಾದ ಎಸ್.ಸುರೇಶ್ ಕುಮಾರ್ ರವರು ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಮಂಜುನಾಥ್ ಕುಮಾರಸ್ವಾಮಿರವರನ್ನು ಜೊತೆಯಲ್ಲಿ ಹೋಗಿದ್ದರು. ಆಗ ಹೋಟೆಲ್ ಒಂದರಲ್ಲಿ ಕಾಫಿ ಕುಡಿಯಲು ಕುಳಿತಾಗ ಅಂದಿನ ಶಾಸಕರಾದ ಡಿ.ಎನ್.ಜೀವರಾಜ್ ಬಂದವರೇ ಸುರೇಶ್ ಕುಮಾರ್ ಅವರ ಬಳಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಯಲ್ಲಿ ಸುರೇಶ್ ಕುಮಾರ್ ಏನು ರಾಜಕೀಯ ಚರ್ಚೆ ಮಾಡುತ್ತಿದ್ದಾರೆ ಎಂದು ಕೇಳಿದ್ದರಂತೆ. ಅದರೆ ಆನಂತರ ವಿಷಯ ತಿಳಿದು, ಮಂಜುನಾಥ್ ಜೂನಿಯರ್ ಕುಮಾರಸ್ವಾಮಿ ನೋಡಲು ಥೇಟ್ ಎಚ್.ಡಿ.ಕುಮಾರಸ್ವಾಮಿಯರ ಹೋಲಿಕೆ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಒಮ್ಮೆ ರಾಮನಗರ ಮದುವೆ ಸಮಾರಂಭಕ್ಕೆಂದು ಮಂಜುನಾಥ್ ರವರು ಹೋಗಿದ್ದಾಗ ಮದುವೆಗೆ ಬಂದಿದ್ದವರು ಮದುವೆ ಗಂಡು, ಹೆಣ್ಣಿನ ಜೊತೆಯಲ್ಲಿ ಪೋಟೋ ತೆಗೆಸಿಕೊಳ್ಳವ ಬದಲು ಇವರ ಜೊತೆ ಪೋಟೋ, ಸೆಲ್ಪಿ ತೆಗೆಸಿಕೊಳ್ಳಲು ಮುಂದಾಗಿದ್ದರಂತೆ.
ಈ ಬಗ್ಗೆ ಜೂನಿಯರ್ ಕುಮಾರಸ್ವಾಮಿಯವರನ್ನು ಬೆಂಗಳೂರು ವೈರ್ ಕೇಳಿದಾಗ ಅವರು ಹೀಗೆ ಹೇಳುತ್ತಾರೆ “ರಾಜಾಜಿನಗರದಲ್ಲಿರುವ ನನ್ನ ಎಷ್ಟೋ ಸ್ನೇಹಿತರು ನನ್ನ ಒರಿಜಿನಲ್ ಹೆಸರು ಬಿಟ್ಟು ಕುಮಾರಣ್ಣ, ಕುಮಾರಸ್ವಾಮಿ ಅಂತಾನೇ ಕರಿಯುತ್ತಾರೆ. ಇದರಿಂದ ಎಷ್ಟೋ ಜನಕ್ಕೆ ನನ್ನ ನಿಜವಾದ ಹೆಸರೇ ಮರೆತು ಹೋಗಿದೆ. ವಿಧಾನಸೌಧ, ವಿಕಾಸಸೌಧ ಮತ್ತಿತರ ಸರ್ಕಾರಿ ಕಚೇರಿಗಳಿಗೆ ತೆರಳಿದಾಗ ಅಲ್ಲಿದ್ದವರು ಕುಮಾರಣ್ಣ ಅಂತಾನೆ ಮಾತನಾಡಿಸಲು ಬರುತ್ತಾರೆ. ಎಷ್ಟೋ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾರಿನಲ್ಲಿ ಹೋದಾಗ ಭದ್ರತಾ ಸಿಬ್ಬಂದಿ ಸೆಲ್ಯೂಟ್ ಹೊಡೆದು ಒಳಗೆ ಬಿಟ್ಟ ಸಾಕಷ್ಟು ಉದಾಹರಣೆಯಿದೆ. ಹೊರಗೆಲ್ಲ ಹೋದಾಗ ಜನರು ಬಂದು ಜೂನಿಯರ್ ಕುಮಾರಸ್ವಾಮಿ ಎಂದು ಮಾತನಾಡಿಸುತ್ತಾರೆ.”
ಜೂನಿಯರ್ ಕುಮಾರಸ್ವಾಮಿಯಾದ ಮಂಜುನಾಥ್ ಅವರಿಗೆ ಇಂತಹ ಹಲವಾರು ಘಟನೆಗಳನ್ನು ನೆನೆಸಿಕೊಳ್ಳುತ್ತಾರೆ. ಆದರೆ ಅದೇ ಸಂದರ್ಭದಲ್ಲಿ ತಾವೊಬ್ಬ ಪಕ್ಕಾ ಬಿಜೆಪಿ ಕಾರ್ಯಕರ್ತ ಎಂದು ಹೇಳುವುದನ್ನು ಮಾತ್ರ ಮರೆಯಲ್ಲ.