ಬೆಂಗಳೂರು, ಸೆ.14 www.bengaluruwire.com : ನಗರದ ಯಲಹಂಕ, ಪಶ್ಚಿಮ ಹಾಗೂ ಮಹದೇವಪುರ ವಲಯದ ವಿವಿಧ ಸ್ಥಳಗಳಲ್ಲಿ ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆ ಮುಂದುವರೆಸಿರುವ ಬಿಬಿಎಂಪಿ (BBMP)ಯ ಬೃಹತ್ ನೀರುಗಾಲುವೆ ವಿಭಾಗ (SWD) ಒಟ್ಟು 11 ಒತ್ತುವರಿಗಳನ್ನು ತೆರವುಗೊಳಿಸಿದೆ.
ಯಲಹಂಕ ವಲಯದಲ್ಲಿ 4 ಒತ್ತುವರಿಗಳನ್ನು ತೆರವುಗೊಳಿಸಿದ್ದು, ಈ ಪೈಕಿ ಕುವೆಂಪು ನಗರ ವಾರ್ಡ್ ಸಿಂಗಾಪುರ ವ್ಯಾಪ್ತಿಯಲ್ಲಿ ಇಂದು ಸರ್ವೆ ಸಂ. 81 ಹಾಗೂ 82ರಲ್ಲಿ ಬರುವ ಬಾಲನ್ ಆಗ್ರೋ ಪ್ರಾಡಕ್ಟ್ ಲಿ. ಸಂಸ್ಥೆಯ ಜ್ಯೂಸ್ ಪ್ಯಾಕ್ಟರಿಯಿಂದ ಸುಮಾರು 21 ಮೀಟರ್ ಅಗಲ, 65 ಮೀಟರ್ ಉದ್ದದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿರುತ್ತದೆ.
ಒತ್ತುವರಿ ಸ್ಥಳದಲ್ಲಿ ಟ್ರಾನ್ಸ್ಫಾರ್ಮರ್ ಸೇರಿದಂತೆ ಕೆಲ ಸಂಗ್ರಹ ವಸ್ತುಗಳನ್ನು ತೆರವುಗೊಳಿಸಬೇಕಿದ್ದು, ಅದನ್ನು ಕೂಡಲೆ ಸ್ಥಳಾಂತರಿಸಲು ಜ್ಯೂಸ್ ಪ್ಯಾಕ್ಟರಿಗೆ ಸೂಚನೆ ನೀಡಲಾಗಿದೆ. ಇದಲ್ಲದೆ ಸಿಂಗಾಪುರ ಕೆರೆಯಿಂದ ಅಬ್ಬಿಗೆರೆ ಕೆರೆಗೆ ಹರಿಯುವ ಮಳೆ ನೀರುಗಾಲುವೆ(ಕಮಾಂಡೊ ಗ್ಲೋರಿ ಅಪಾರ್ಟ್ಮೆಂಟ್ ಹಿಂಭಾಗ) ಸರ್ವೇ ಸಂ. 97 ಹಾಗೂ 100 ರಲ್ಲಿ 2.4 ಮೀಟರ್ ಅಗಲ ಹಾಗೂ 200 ಮೀಟರ್ ಉದ್ದ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿರುತ್ತದೆ.
ಪಶ್ಚಿಮ ವಲಯದಲ್ಲಿ 2 ಒತ್ತುವರಿಗಳ ತೆರವು :
ಪಶ್ಚಿಮ ವಲಯದಲ್ಲಿ 2 ಒತ್ತುವರಿಗಳನ್ನು ತೆರವುಗೊಳಿಸಿದ್ದು, ಈ ಪೈಕಿ ಶುಭಾಷ್‌ನಗರದ ಬರಗಿ ಮುದ್ದೇನಹಳ್ಳಿಯಲ್ಲಿ 120 ಚ.ಮೀ ಖಾಲಿ ಜಾಗ ಹಾಗೂ 120 ಚ.ಮೀ ರೈಲ್ವೆ ಇಲಾಖೆಯ ಜಾಗ ಸೇರಿದಂತೆ ಒಟ್ಟು 240 ಚ.ಮೀ ನಷ್ಟು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಪಾಲಿಕೆಯ ವಶಕ್ಕೆ ಪಡೆಯಲಾಗಿದೆ.
ಮಹದೇವಪುರ ವಲಯದಲ್ಲಿ ಒಂದು ಒತ್ತುವರಿಯನ್ನು ತೆರವುಗೊಳಿಸಿದ್ದು, ಈ ಪೈಕಿ ಮುನ್ನೇಕೊಳಲು ವ್ಯಾಪ್ತಿಯಲ್ಲಿ ಇಂದು ಖಾಲಿ ಜಾಗವನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿರುತ್ತದೆ.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ 4 ಒತ್ತುವರಿ ತೆರವು :
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ 4 ಒತ್ತುವರಿಗಳನ್ನು ತೆರವುಗೊಳಿಸಿದ್ದು, ಈ ಪೈಕಿ ಹೊರಮಾವು ವಾರ್ಡ್ ಪಟೇಲ್ ರಾಮಯ್ಯ ಲೇಔಟ್‌ನ ಕೊತ್ತನೂರು ಹಳ್ಳಿ ಸರ್ವೇ ಸಂ. 6, 7, 30 ಹಾಗೂ 14 ಸೇರಿದಂತೆ ಒಟ್ಟಾರೆ 600 ಮೀ. ಉದ್ದ ಹಾಗೂ 19.5 ಮೀ. ಅಗಲದ ರಾಜಕಾಲುವೆಯ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಅದರ ಭಾಗವಾಗಿ ಇಂದು 25 ಮೀಟರ್ ಉದ್ದ ಮತ್ತು 3 ಮೀಟರ್ ಎತ್ತರದ 2 ಕಾಂಪೌಂಡ್ ಗೋಡೆಗಳನ್ನು ಕೆಡವಲಾಗಿದ್ದು, ಒಂದು 10 * 10 ಅಡಿಯ ತಾತ್ಕಾಲಿಕ ಶೆಡ್ ಹಾಗೂ 20 * 10 ಅಡಿಯ ಮತ್ತೊಂದು ಶೆಡ್ ಸೇರಿ ಇಂದು 4 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಗುರುವಾರ 100 ಮೀಟರ್ ನ ಸ್ಕೇಟಿಂಗ್ ಮೈದಾನ ಸೇರಿದಂತೆ ಉಳಿದ ಒತ್ತುವರಿಯನ್ನು ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದ ಬಿಬಿಎಂಪಿ ಎಂಜಿನಿಯರ್ ಗಳು ತಿಳಿಸಿದ್ದಾರೆ.
ನಲಪಾಡ್ ಅಕಾಡೆಮಿಯ ಒತ್ತುವರಿ ತೆರವು :
ಚೆಲ್ಲಘಟ್ಟದ ಸರ್ವೇ ಸಂ. 70/14 ರಲ್ಲಿರುವ ನಲಪಾಡ್ ಅಕಾಡೆಮಿಯಿಂದ ಒತ್ತುವರಿಯಾಗಿದ್ದ 2.5 ಮೀಟರ್ ಅಗಲ ಹಾಗೂ 150.5 ಮೀಟರ್ ಉದ್ದದ ಕಾಲುವೆ ಜಾಗದಲ್ಲಿ ಅಳವಡಿಸಿದ್ದ ಕಾಂಕ್ರಿಟ್ ಸ್ಲಾö್ಯಬ್ ಅನ್ನು ತೆರವುಗೊಳಿಸಲಾಗಿದೆ. ಈ ಪೈಕಿ ಇಂದಿಗೆ 90 ಮೀಟರ್ ಒತ್ತುವರಿಯನ್ನು ತೆರವುಗೊಳಿಸಿ ತಡೆಗೋಡೆಯ ಮೇಲೆ ಅಳವಡಿಸಿದ್ದ ಫೆನ್ಸಿಂಗ್ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಸರ್ವೇ ಕಾರ್ಯ ಪೂರ್ಣ:
ಉಚ್ಛ ನ್ಯಾಯಲಯ ಹಾಗೂ ಲೋಕಾಯುಕ್ತ ರವರ ಸೆ.12ರ ಅದೇಶದ ಮೇರೆಗೆ ಇಂದು ಗರುಡಾಚಾರಪಾಳ್ಯ ಕೆರೆಯಿಂದ ಮಹದೇವಪುರ ಕೆರೆಗೆ ಸೇರುವ ಮಳೆ ನೀರು ಗಾಲುವೆಯನ್ನು ಪೂರ್ವ ಪಾರ್ಕ್ರಿಡ್ಜ್ ಸ್ವತ್ತು ಹಾಗೂ ಭಾಗಮನೆ ಟೆಕ್ ಪಾರ್ಕ್ ಸ್ವತ್ತಿನ ಮೂಲಕ ಹಾದು ಹೋಗುವ ಕಾಲುವೆಯನ್ನು ಬಿಬಿಎಂಪಿ ಅಧಿಕಾರಿಗಳು, ಸರ್ಕಾರದ ಭೂಮಾಪಕ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳಿಂದ ಸರ್ವೆ ಕಾರ್ಯ ನಡೆಸಲಾಗಿರುತ್ತದೆ. ಅದರ ವಿವರ ಈ ಕೆಳಕಂಡಂತಿದೆ :
• ಭಾಗಮನೆ ಟೆಕ್ ಪಾರ್ಕ್ ನಲ್ಲಿ 2.5 ಮೀಟರ್ ಅಗಲದ ರಾಜಕಾಲುವೆಯ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಹಾಕಿ ಮುಚ್ಚಿರುವುದು.
• ಪೂರ್ವ ಪಾರ್ಕ್ರಿಡ್ಜ್ ನಲ್ಲಿ 2.5 ಮೀಟರ್ ಅಗಲದ ಸ್ಥಳದಲ್ಲಿ ಕಟ್ಟಡ, ಖಾಲಿ ಜಾಗ ಹಾಗೂ ರಸ್ತೆಯನ್ನು ನಿರ್ಮಿಸಿರುವುದು.
• ಗರುಡಾಚಾರ್ ಪಾಳ್ಯ ಕೆರೆಯಿಂದ ಮಹದೇವಪುರ ಕೆರೆಯ ಭಾಗದಲ್ಲಿ ಸುಮಾರು 13 ಮೀಟರ್ ಅಗಲದ ರಾಜಕಾಲುವೆಯ ಮೇಲೆ ಕಾಂಪೌಂಡ್ ವಾಲ್, ಕಟ್ಟಡ ಹಾಗೂ ಶೆಡ್ ನಿರ್ಮಾಣ ಮಾಡಿರುವುದನ್ನು ಸಮೀಕ್ಷೆ ಮಾಡಿ ಗುರುತಿಸಲಾಗಿದೆ.
ಮಹದೇವಪುರ ವಲಯದ ಪ್ರಮುಖ ಅಂಶಗಳು:
• ಶಾಂತಿನಿಕೇತನ ಲೇಔಟ್ ನಲ್ಲಿ ಶೇ. 25 ರಷ್ಟು ಬಾಕಿ ಒತ್ತುವರಿ ತೆರವುಗೊಳಿಸಬೇಕಿದೆ.
• ವಾಗ್ದೇವಿ ಲೇಔಟ್ ನಲ್ಲಿ ಶೇ. 25 ರಷ್ಟು ಬಾಕಿ ಒತ್ತುವರಿ ತೆರವುಗೊಳಿಸಬೇಕಿದೆ.
• ಚಲ್ಲಘಟ್ಟ ವ್ಯಾಪ್ತಿಯಲ್ಲಿ ಶೇ. 50 ರಷ್ಟು ಒತ್ತುವರಿ ತೆರವುಗೊಳಿಸಲಾಗಿದೆ.
• ಪಾಪಯ್ಯ ರೆಡ್ಡಿ ಲೇಔಟ್ ನಲ್ಲಿ ಒತ್ತುವರಿ ಮಾಡಿರುವುದನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
• ಸದರಮಂಗಲ ಕೆರೆಯಿಂದ ಬೆಳ್ಳತ್ತೂರಿನವರೆಗೆ ಒತ್ತುವರಿಯನ್ನು ಗುರುತಿಸಬೇಕಿದೆ.
• ದೊಡ್ಡಕನಹಳ್ಳಿ ಕೆರೆಗಯಿಂದ ಸೋಲ್ ಕೆರೆವರೆಗೆ ಒತ್ತುವರಿಯನ್ನು ಗುರುತಿಸಬೇಕಿದೆ
• TZED ಅಪಾರ್ಟ್ಮೆಂಟ್ ನಿಂದ ಶೀಲವಂತ ಕೆರೆವರೆಗೆ ಒತ್ತುವರಿಯನ್ನು ಗುರುತಿಸಬೇಕಿದೆ.
• ಪಟ್ಟಂದೂರು ಅಗ್ರಹಾರ ಕೆರೆಯಿಂದ ನಲ್ಲೂರಹಳ್ಳಿವರೆಗೆ ಒತ್ತುವರಿಯನ್ನು ಗುರುತಿಸಬೇಕಿದೆ.
• ಇದುವರೆಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಸ್ಥಳದಲ್ಲಿ ಸಂಗ್ರಹವಾಗಿರುವಂತಹ ಕಟ್ಟಡದ ಭಗ್ನಾವಶೇಷಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.