ಬೆಂಗಳೂರು, ಸೆ.13, www.bengaluruwire.com : ಇತ್ತೀಚೆಗೆ ಸುರಿದ ಭಾರೀ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡ ಕಂಬದ ಸಂಪರ್ಕ ಮರು ಜೋಡಣೆ ಮಾಡಲು ಹೋಗಿ ಬೆಸ್ಕಾಂನ ಲೈನ್ ಮನ್ ಮಹೇಶ್ ಗೌಡರ (38) ಅವರು ಗುಬ್ಬಿ ತಾಲೂಕಿನ ತಿಪ್ಪೂರು ಕೆರೆಯಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಸೆಪ್ಟೆಂಬರ್ 10 ರಂದು ಸಂಭವಿಸಿದೆ.
ಮೃತಪಟ್ಟ ಸಿಬ್ಬಂದಿ ಮಹೇಶ್ ಗೌಡರ ಕುಟುಂಬಕ್ಕೆ ಜೀವ ರಕ್ಷಣೆ ಯೋಜನೆಯಡಿಯಲ್ಲಿ ರೂ.17,000 ರೂಪಾಯಿಗಳನ್ನು ಪಾವತಿಸಲಾಗಿದ್ದು, ಮರಣ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಯನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
“ಅಪಾಯದ ಅರಿವಿದ್ದರೂ ಕೂಡ ಜೀವವನ್ನು ಲೆಕ್ಕಸಿದೆ, ನಮ್ಮ ಸಿಬ್ಬಂದಿ ವಿದ್ಯುತ್ ಸಂಪರ್ಕ ಮರು ಜೋಡಿಸಲು ಹೋಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದು ದುರ್ದೈವದ ಸಂಗತಿ. ಮಹೇಶ್ ಗೌಡರ ಅವರ ಕುಟುಂಬಕ್ಕೆ ಮರಣ ಪರಿಹಾರ ನಿಧಿ ಚೆಕ್ ಹಸ್ತಾಂತರಿಸಲಾಗುವುದು”, ಎಂದು ಮಹಾಂತೇಶ ಬೀಳಗಿ ಹೇಳಿದ್ದಾರೆ.
ಕಾರ್ಮಿಕ ಪರಿಹಾರ ನಿಧಿಯಿಂದ ಮೃತ ಮಹೇಶ್ ಗೌಡರ ಕುಟುಂಬಕ್ಕೆ ಅವರ ಸೇವಾವಧಿ ಆಧಾರದ ಮೇಲೆ 10 ಲಕ್ಷ ರೂಪಾಯಿ ಪರಿಹಾರವನ್ನು ಬೆಸ್ಕಾಂ ನೀಡಲಿದ್ದು, ಈ ಸಂಬಂಧ ಪೂರಕ ದಾಖಲೆಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಅನುಕಂಪದ ಆಧಾರದ ಅಡಿಯಲ್ಲಿ ಅವರ ಪತ್ನಿಗೆ ಬೆಸ್ಕಾಂನಲ್ಲಿ ʼಡಿʼ ಗ್ರೂಪ್ ನೌಕರಿ ನೀಡಲಾಗುವುದು. ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನಿಂದ ವಯಕ್ತಿಕ ಅಪಘಾತ ಗುಂಪು ವಿಮಾ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ ಎಂದು ಬೆಸ್ಕಾಂ ಎಂಡಿ ವಿವರಿಸಿದ್ದಾರೆ.
ದುರ್ಘಟನೆಯಾಗಿದ್ದು ಹೀಗೆ : ಗುಬ್ಬಿ ಉಪ ವಿಭಾಗದ ಬಿದರೆ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ F6 ಜೇನಿಗರಹಳ್ಳಿ ವಿದ್ಯುತ್ ಮಾರ್ಗದ ದುರಸ್ಥಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಕೆರೆಯ ಮಧ್ಯದಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬದ ವಿದ್ಯುತ್ ಸಂಪರ್ಕ ಮರು ಜೋಡಿಸಲು ಮಹೇಶ್ ಗೌಡರ ಅವರು ಕರೆಯಲ್ಲಿ ಈಜಿಕೊಂಡು ಹೋಗಿದ್ದರು, ಜತೆಯಲ್ಲಿದ್ದ ಸಿಬ್ಬಂದಿ ಎಚ್ಚರಿಸಿದ್ದರೂ ಕೂಡ ಈಜಲು ಮುಂದಾದರು. ವಿದ್ಯುತ್ ಕಂಬದಿಂದ ಸುಮಾರು 15 ಅಡಿ ದೂರದಲ್ಲಿ ಕೆರೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದರು. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಮರುದಿನ ಮೃತ ದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸೋಮವಾರ ಬಾಗಲಕೋಟದಲ್ಲಿ ಮಹೇಶ್ ಗೌಡರ ಅಂತ್ಯ ಸಂಸ್ಕಾರ ನೆರವೇರಿತು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.