ಬೆಂಗಳೂರು, ಸೆ.13, www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಹೆಚ್ಚುತ್ತಿರುವುದು ತಲೆನೋವಿನ ಸಂಗತಿ. ಇತ್ತೀಚೆಗಷ್ಟೆ ಬೆಂಗಳೂರು ನಗರ ಪೊಲೀಸರು ಎರಡು ಪ್ರಕರಣಗಳಲ್ಲಿ 5 ಕೋಟಿ ರೂ. ಮೌಲ್ಯ 556 ಕೆಜಿ ಗಾಂಜಾ ಹಾಗೂ 3 ಕೋಟಿ ರೂ. ಮೌಲ್ಯ ಹಶೀಷ್ ಎಣ್ಣೆಯನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ನಗರ ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿನ ಕೆಂಪೇಗೌಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಂಪಾಂಬುದಿ ಕೆರೆಯ ಉತ್ತರ ಗೇಟ್ ಬಳಿ ನಂಜಾಂಬ ಅಗ್ರಹಾರದ ಬಳಿ ನಾಲ್ಕೈದು ಆರೋಪಿಗಳು ಆಟೋ ಮತ್ತು ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಒರಿಸ್ಸಾ ರಾಜ್ಯದ ಮಲ್ಕಾನ್ ಗಿರಿಯಿಂದ 550 ಕೆಜಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ಸುಳಿವು ಪಡೆದುಕೊಂಡ ಕೆ.ಜೆ.ನಗರ ಪೊಲೀಸರು ಕಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿ, ಅವರಿಂದ 2 ಕೋಟಿ ರೂ. ಮೌಲ್ಯದ ಗಾಂಜಾ ಹಾಗೂ ಒಂದು ಆಟೋ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ.30ರಂದು ವ್ಯಕ್ತಿಯೊಬ್ಬ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಆತನ ವಿರುದ್ಧ ಮಾದಕ ವಸ್ತುಗಳ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆ ವ್ಯಕ್ತಿ ನೀಡಿದ ಸುಳಿವಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಯು.ಆರ್.ಮಂಜುನಾಥ್ ಮತ್ತವರ ತಂಡ ಆಂಧ್ರಪ್ರದೇಶದ ಗೊಪ್ಪಲಿಗೆ ತೆರಳಿ ತನಿಖೆ ನಡೆಸಿತ್ತು. ಈ ಸಂದರ್ಭದಲ್ಲಿ ಮಾದಕ ವಸ್ತು ಮಾರುತ್ತಿದ್ದ ಆರೋಪಿಗಳ ಮೇಲೆ ದಾಳಿ ನಡೆಸಲು ಹೋದಾಗ ಆರೋಪಿಗಳು ಪೊಲೀಸರಿದ್ದ ಟೆಂಪೋ ಟ್ರಾವಲರ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಸ್ಥಳದಿಂದ ಪರಾರಿಯಾಗಿದ್ದರು.
ಈ ಸಂದರ್ಭದಲ್ಲಿ ಆರೋಪಿಗಳ ಬಳಿಯಿದ್ದ 3 ಕೋಟಿ ರೂ. ಮೌಲ್ಯದ 6 ಕೆಜಿ ತೂಕದ ಹಶೀಷ್ ಎಣ್ಣೆ ಹಾಗೂ 20 ಲಕ್ಷ ರೂ. ಬೆಲೆ ಬಾಳುವ 50 ಕೆಜಿ ಗಾಂಜಾವನ್ನು ಜಯನಗರ ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರು ನಗರ ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ಮಾರ್ಗದರ್ಶನದಲ್ಲಿ ವಿವಿಪುರ ಉಪವಿಭಾಗದ ಎಸಿಪಿ ಬಿ.ಎಲ್.ಶ್ರೀನಿವಾಸಮೂರ್ತಿ ಹಾಗೂ ಜಯನಗರ ಉಪವಿಭಾಗದ ಎಸಿಪಿ ಕೆ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಆರೋಪಿಗಳನ್ನು ಬಂಧಿಸಿ, ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ತಂಡವನ್ನು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಹಾಗೂ ಬೆಂಗಳೂರು ನಗರ ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅಭಿನಂದಿಸಿದ್ದಾರೆ.