ಬೆಂಗಳೂರು, ಸೆ.3 (www.bengaluruwire.com ): ಬೆಳೆ ವಿಸ್ತೀರ್ಣ ಅಂದಾಜು ಅಂಕಿ ಅಂಶಗಳ ಮಾಹಿತಿ ಲಭ್ಯವಾಗಿಸಲು ಜಿಲ್ಲೆಯ ಎಲ್ಲಾ ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕೆ.ಶ್ರೀನಿವಾಸ್ ರವರು ಸೂಚಿಸಿದರು.
ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ 2022 ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಗಾರು ಹಂಗಾಮಿನ ಬೆಳೆ ವಿಸ್ತೀರ್ಣ ಅಂದಾಜು ಅಂಕಿ ಅಂಶಗಳ ಮಾಹಿತಿಯನ್ನು ಸರ್ವೇ ಅಥವಾ ಹಿಸ್ಸಾ ಸಂಖ್ಯಾವಾರು ಸಂಗ್ರಹಿಸಲು 2017 ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಇ-ಆಡಳಿತ) ಅಭಿವೃದ್ಧಿ ಪಡಿಸಿದ್ದ ಮೊಬೈಲ್ ತಂತ್ರಾಂಶವನ್ನು ಬಳಸಿಕೊಂಡು ಕೃಷಿ ಸಂಬಂಧಿತ ಇಲಾಖೆ ಹಾಗೂ ಕಂದಾಯ ಇಲಾಖೆಯು ಬೆಳೆ ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಬೆಳೆಯ ಛಾಯಾಚಿತ್ರದೊಂದಿಗೆ ಬೆಳೆ ಸಮೀಕ್ಷೆಯ ಸಂಪೂರ್ಣ ದಾಖಲೆ ಹಾಗೂ ಮಾಹಿತಿಯನ್ನು ಅಪ್ಲೋಡ್ ಮಾಡಲು ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ರೈತರೇ ಸ್ವತಃ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಬಹುದಾಗಿದೆ. ಒಂದು ವೇಳೆ ರೈತರು ತಮ್ಮ ಬೆಳೆ ಮಾಹಿತಿಯನ್ನು ಅಪ್ಲೋಡ್ ಮಾಡದಿದ್ದಲ್ಲಿ ಪ್ರತಿ ಗ್ರಾಮಕ್ಕೆ ಅದೇ ಗ್ರಾಮದ ಯುವಕರನ್ನು ನೇಮಿಸಿ ಬೆಳೆ ಸಮೀಕ್ಷೆಯನ್ನು ಕೈಗೊಳ್ಳುವಂತೆ ತಿಳಿಸಿದರು .
ಬೆಂಗಳೂರು ನಗರಜಿಲ್ಲೆಯಲ್ಲಿ 2,28,311 ಪ್ಲಾಟ್ ಬೆಳೆ ಸಮೀಕ್ಷೆ ಬಾಕಿ :
ಪ್ರಸ್ತುತ ಸಾಲಿನಲ್ಲಿ ನಗರದ ವ್ಯಾಪ್ತಿಗೆ ಬರುವಂತಹ ಒಟ್ಟು ಐದು ತಾಲ್ಲೂಕುಗಳಲ್ಲಿನ 3,31,337 ಪ್ಲಾಟ್ ಗಳ ಪೈಕಿ 1,03,026 ಪ್ಲಾಟ್ ಗಳು ಕೃಷಿಯೇತರ ಸಮೀಕ್ಷೆಗೊಳಪಟ್ಟಿದ್ದು, ಇನ್ನೂ 2,28,311 ಪ್ಲಾಟ್ ಬೆಳೆ ಸಮೀಕ್ಷೆ ಕೈ ಗೊಳ್ಳಬೇಕಾಗಿದೆ. ಈಗಾಗಲೇ ರೈತರ ಬೆಳೆ ಆಪ್ ಬಿಡುಗಡೆಗೊಳಿಸಲಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಮಾಹಿತಿಯನ್ನು ಸ್ವತಃ ಅಪ್ಲೋಡ್ ಮಾಡಲು ಜಿಲ್ಲಾಧಿಕಾರಿ ಶ್ರೀನಿವಾಸ್ ಮನವಿ ಮಾಡಿದರು.
ಬೆಳೆ ಮಾಹಿತಿ ಅಪಲೋಡ್ ಮಾಡಿದರೆ ರೈತರಿಗೆ ಆಗುವ ಅನುಕೂಲಗಳೇನು?
ರೈತರು ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಬೆಳೆಯ ಫೊಟೊದೊಂದಿಗೆ ಕಾಲ ಕಾಲಕ್ಕೆ ಕೃಷಿ ಇಲಾಖೆಯ ಇ-ಆಡಳಿತ ಮೊಬೈಲ್ ಆಪ್ ಮೂಲಕ ಅಪಲೋಡ್ ಮಾಡಬೇಕು. ರೈತರು ಬ್ಯಾಂಕ್ ನಲ್ಲಿ ಸಾಲ ಪಡೆಯಲು, ನೆರೆ- ಬರ ಬಂದು ಬೆಳೆ ನಷ್ಟವಾದರೆ ಸರ್ಕಾರದಿಂದ ಪರಿಹಾರ ಪಡೆಯಲು ಅನುಕೂಲವಾಗಲಿದೆ. ರೈತರು ಬೆಳೆದ ಬೆಳೆಗೆ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಲು ಬೆಳೆ ಸಮೀಕ್ಷೆ ಹಾಗೂ ರೈತರು ಒದಗಿಸುವ ಮಾಹಿತಿ ಅನುಕೂಲವಾಗುತ್ತದೆ.
ಆಗಸ್ಟ್ 15ರ ಒಳಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮಾಹಿತಿ ನೀಡಬೇಕಿತ್ತು. ಆದರೆ ಎಲ್ಲೆಡೆ ವ್ಯಾಪಕ ಮಳೆಯಾದ್ದರಿಂದ ಕಳೆದ ಒಂದು ವಾರದಿಂದ ಜಿಲ್ಲೆಯ ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ಆರಂಭವಾಗಿದೆ. ಬೆಂಗಳೂರು ನಗರ ಜಿಲ್ಲೆಯ ಐದು ತಾಲೂಕಿನ ಶೇ.85 ಭಾಗದಲ್ಲಿ ರೈತರು ರಾಗಿ ಬೆಳೆಯುತ್ತಾರೆ. ರೈತರು ತಮ್ಮಬೆಳೆ ಮಾಹಿತಿಯನ್ನು 15-20 ದಿನದ ಒಳಗಾಗಿ Kharif Farmer Crop 2022-23 (ರೈತರ ಬೆಳೆ ಸಮೀಕ್ಷೆ 2022-23 ಮುಂಗಾರು ಋತು) ಆಂಡ್ರಾಯ್ಡ್ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು ರೈತರು ತಮ್ಮ E-Kyc ದೃಢಪಡಿಸಿಕೊಂಡು ಆ ಮೂಲಕ ಅಪಲೋಡ್ ಮಾಡಲು ಅವಕಾಶವಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿ. ಎಸ್. ಜಯಸ್ವಾಮಿ ತಿಳಿಸಿದ್ದಾರೆ.
ಸಭೆಯಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕರಾದ ವಿನುತಾ ಮತ್ತು ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.