ಬೆಂಗಳೂರು, ಸೆ.1 www.bengaluruwire.com : ಕರೋನಾ ಸೋಂಕು ಸಂಪೂರ್ಣ ಕಡಿಮೆಯಾದ ಬಳಿಕ ಈ ಬಾರಿ ಗಣೇಶ ಮೂರ್ತಿಗಳನ್ನು ಕೂರಿಸುವವರ ಸಂಖ್ಯೆ ಹೆಚ್ಚಾಗಿರೋದು ಬಿಬಿಎಂಪಿ ನಿಗಧಿಪಡಿಸಿರುವ ತಾತ್ಕಾಲಿಕ ಕಲ್ಯಾಣಿ ಹಾಗೂ ಸಂಚಾರಿ ಮೊಬೈಲ್ ಟ್ಯಾಂಕರ್ ಗಳಲ್ಲಿ ವಿಸರ್ಜನೆಯಾಗಿರುವ ಗಣೇಶನ ವಿಗ್ರಹಗಳೇ ಸಾಕ್ಷಿಯಾಗಿದೆ. ಬುಧವಾರ ಗಣೇಶ ಹಬ್ಬದ ದಿನದಂದೇ ನಗರದಾದ್ಯಂತ ಒಂದೇ ದಿನ 1,59,980 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ರಾಜ್ಯದೆಲ್ಲಡೆ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಂದ ಗಣೇಶ ತಯಾರಿಕೆಯನ್ನು ನಿಷೇಧ ಹೇರಿದ್ದರೂ ನಗರದಲ್ಲಿ ಪಿಒಪಿ ಗಣೇಶನ ಹಾವಳಿ ಮಾತ್ರ ನಿಂತಿಲ್ಲ. ನಿನ್ನೆ ಒಂದೇ ದಿನ ವಿಸರ್ಜನೆಯಾಗಿರುವ ಗಣೇಶನ ಮೂರ್ತಿಗಳ ಪೈಕಿ 1,47,894 ಮಣ್ಣಿನ ಗಣೇಶನಾಗಿದ್ದರೆ, 12,086 ಪಿಒಪಿ ವಿಗ್ರಹಗಳಾಗಿವೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಸರ್ಜನೆ ಮಾಡಿರುವ ಮಣ್ಣಿನ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಓಪಿ) ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಲಯವಾರು ಮಾಹಿತಿ :
ಬಿಬಿಎಂಪಿ ವಲಯದ ಹೆಸರು | ಮಣ್ಣಿನ ಗಣೇಶ ಮೂರ್ತಿಗಳು | ಪಿ.ಓ.ಪಿ ಗಣೇಶ ಮೂರ್ತಿಗಳು |
ಪಶ್ಚಿಮ ವಲಯ | 34,471 | 306 |
ದಕ್ಷಿಣ ವಲಯ | 68,521 | 11,402 |
ದಾಸರಹಳ್ಳಿ ವಲಯ | 1,382 | 22 |
ಪೂರ್ವ ವಲಯ | 12,750 | 0 |
ಆರ್.ಆರ್.ನಗರ ವಲಯ | 14,479 | 152 |
ಬೊಮ್ಮನಹಳ್ಳಿ ವಲಯ | 6,136 | 131 |
ಯಲಹಂಕ ವಲಯ | 6000 | 73 |
ಮಹದೇವಪುರ ವಲಯ | 4155 | 0 |
ಬೆಂಗಳೂರಿನ ಹಳೆಯ ಪ್ರದೇಶವಾದ ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿಹೆಚ್ಚು ಅಂದರೆ 11,402 ಪಿಒಪಿ ಗಣೇಶ ಮೂರ್ತಿಗಳು ಕೇವಲ ಒಂದೇ ದಿನ ವಿಸರ್ಜನೆಯಾಗಿದೆ. ಅದರ ನಂತರದ ಸ್ಥಾನದಲ್ಲಿ ಪಶ್ಚಿಮ ವಲಯದಲ್ಲಿ 306 ಪಿಒಪಿ ಗಣೇಶ ಮೂರ್ತಿಗಳನ್ನು ತಾತ್ಕಾಲಿಕ ಮೊಬೈಲ್ ಟ್ಯಾಂಕರ್ ಅಥವಾ ತಾತ್ಕಾಲಿಕ ಕಲ್ಯಾಣಿಗಳಲ್ಲಿ ವಿಲೇವಾರಿ ಮಾಡಲಾಗಿದೆ. ಇಡೀ ಬೆಂಗಳೂರಿನಲ್ಲಿ ದಕ್ಷಿಣ ವಲಯವೊಂದರಲ್ಲೇ 68,521 ಗಣೇಶ ಮೂರ್ತಿಗಳು ವಿಲೇವಾರಿಯಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಗರದಾದ್ಯಂತ 37 ಕೆರೆಗಳಲ್ಲಿನ ತಾತ್ಕಾಲಿಕ ಕಲ್ಯಾಣಿ ಹಾಗೂ 421 ಸಂಚಾರಿ ಮೊಬೈಲ್ ಟ್ಯಾಂಕರ್ ಗಳನ್ನು ಗಣೇಶ ವಿಸರ್ಜನೆಯಾಗಿ ಏರ್ಪಾಡು ಮಾಡಲಾಗಿದೆ. ಕೆಎಸ್ ಪಿಸಿಬಿ ಮತ್ತು ಬಿಬಿಎಂಪಿ ಸಾಕಷ್ಟು ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶನನ್ನು ಕೂಡಿಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಿದರೂ, ಈತನಕ ಕೆಲವು ಸಂಘ ಸಂಸ್ಥೆಗಳು, ಸಾರ್ವಜನಿಕರಿಗೆ ಇದರ ಬಗ್ಗೆ ತಿಳುವಳಿಕೆ ಮೂಡದಿರುವುದು ದುರಂತವೇ ಸರಿ.