ಬೆಂಗಳೂರು, ಆ.29 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕರೋನಾ ಸೋಂಕು ಅವಧಿಯಲ್ಲಿ ಸಾರ್ವಜನಿಕರು ಹೆಚ್ಚಾಗಿ ಮನೆ ಹೊರಗೆ ಓಡಾಟ ಕಡಿಮೆಯಿದ್ದ ಕಾರಣ ನಾಯಿ ಕಡಿತ ಪ್ರಕರಣ ಕಡಿಮೆಯಾಗಿತ್ತು. ಆದರೆ 2022-23ರಲ್ಲಿ ಜನವರಿಯಿಂದ ಜುಲೈವರೆಗಿನ ಕೇವಲ 7 ತಿಂಗಳಲ್ಲಿ ನಗರದಲ್ಲಿ 11,291 ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ.
ಐದು ವರ್ಷಗಳಲ್ಲಿ 1.54 ಲಕ್ಷ ಜನರಿಗೆ ನಾಯಿ ಕಡಿತ :
ಬಿಬಿಎಂಪಿ ವ್ಯಾಪ್ತಿಯಲ್ಲಿ 2017-18ನೇ ಅವಧಿಯಿಂದ 2021-22 ರ ಐದು ವರ್ಷಗಳ ಅವಧಿಯಲ್ಲಿ ಒಟ್ಟು 1,54,707 ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ. ಆ ಪೈಕಿ ಕರೋನಾ ಸೋಂಕು ಹೆಚ್ಚಾಗಿದ್ದ 2020-21 ಹಾಗೂ 2021-22ನ ಸಾಲಿನಲ್ಲಿ ಬೀದಿ ನಾಯಿ ಕಡಿತ ಪ್ರಕರಣಗಳು ಕ್ರಮವಾಗಿ 18,629 ಹಾಗೂ 17,610 ನಷ್ಟಿತ್ತು. ಆದರೆ ಯಾವಾಗ ಕರೋನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಸಾರ್ವಜನಿಕ ಜೀವನ ಸಾಮಾನ್ಯವಾಗಿ, ಎಲ್ಲರ ಓಡಾಟ ಹೆಚ್ಚಿದಂತೆ ನಾಯಿ ಕಡಿತ ಪ್ರಕರಣ ಈ ವರ್ಷ ಜನವರಿಯಿಂದ ಜುಲೈವರೆಗಿನ 7 ತಿಂಗಳಲ್ಲಿ 11,291 ನಷ್ಟಾಗಿರುವುದು ಬಿಬಿಎಂಪಿಯಲ್ಲಿ ದಾಖಲಾಗಿದೆ.
ಈ ಮೂರು ಜೋನ್ ಗಳಲ್ಲೇ ಶೇ.92ರಷ್ಟು ಪ್ರಕರಣ :
ಒಂದು ಗಮನಿಸಬೇಕಾದ ಅಂಶವೇನಂದರೆ ಬೆಂಗಳೂರಿನಲ್ಲಿ ಬಿಬಿಎಂಪಿಯ 8 ವಲಯಗಳ ಪೈಕಿ ಕೋರ್ ಜೋನ್ ಹಾಗೂ ಹಳೆ ಬೆಂಗಳೂರಿನ ಪ್ರದೇಶವಾದ ಪೂರ್ವ ವಲಯ, ದಕ್ಷಿಣ ವಲಯ ಹಾಗೂ ಪಶ್ಚಿಮ ವಲಯಗಳಲ್ಲೇ ಡಾಗ್ ಬೈಟ್ ಹೆಚ್ಚಾಗಿ ಕಂಡು ಬಂದಿದೆ. 2017-18ನೇ ಇಸವಿಯಿಂದ 2021-22ನೇ ಇಸವಿ ವರೆಗಿನ ಐದು ವರ್ಷಗಳಲ್ಲಿ ಬಿಬಿಎಂಪಿಯ ಬೀದಿನಾಯಿ ಕಡಿತ ಕೇಸ್ ಅಂಕಿಅಂಶಗಳನ್ನು ವಿಶ್ಲೇಷಿಸಿದರೆ, ಒಟ್ಟಾರೆ 1,54,707 ಪ್ರಕರಣಗಳು 8 ವಲಯಗಳಲ್ಲಿ ಕಂಡು ಬಂದಿದ್ದರೆ, ಆ ಪೈಕಿ ಪೂರ್ವ (55,548 Dog Byte Cases), ದಕ್ಷಿಣ (49,419 Dog Byte Cases), ಹಾಗೂ ಪಶ್ಚಿಮ (38,061 Dog Byte Cases) ವಲಯಗಳಲ್ಲಿ 1,43,028 ಕೇಸ್ ಗಳು ದಾಖಲಾಗಿದೆ. ಅಂದರೆ ಒಟ್ಟಾರೆ ಕಡಿತದ ಶೇ.92.45ರಷ್ಟು ಕೇಸ್ ಗಳು ಈ ಮೂರು ವಲಯದಲ್ಲಿ ಕಂಡು ಬಂದಿದೆ. ಈ ವಲಯಗಳಲ್ಲಿ ವಾಸಿಸುವ ನಾಗರೀಕರು ಬೀದಿ ನಾಯಿ ಕಡಿತದ ಬಗ್ಗೆ ಎಚ್ಚರಿಕೆ ವಹಿಸಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ.
ಸಾಮಾನ್ಯವಾಗಿ ನಾಯಿ ಕಡಿತದ ಪ್ರಕರಣದಲ್ಲಿ ಸಾಕು ನಾಯಿಗಳಿಗಿಂತ ಬೀದಿನಾಯಿಗಳಿಂದ ಮಕ್ಕಳು, ವಯಸ್ಸಾದವರು ಹಾಗೂ ವಯಸ್ಸಾದವರ ಮೇಲೆ ನಾಯಿ ದಾಳಿ ನಡೆಸಿ ಕಚ್ಚುವ ಸಂಭವವೇ ಹೆಚ್ಚಾಗಿರುತ್ತದೆ. ಬೀದಿನಾಯಿ ಕಡಿತವಾದರೆ ಅಥವಾ ಅದರಿಂದ ಪ್ರಾಣಹಾನಿ ಸಂಭವಿಸಿದರೆ, ಶ್ವಾನದ ಹಾವಳಿಯನ್ನು ನಿರ್ವಹಿಸುವಲ್ಲಿ ವಿಫಲವಾಗುವ ಬಿಬಿಎಂಪಿಯೇ ಸಾರ್ವಜನಿಕರಿಗೆ ಪರಿಹಾರ ನೀಡುತ್ತೆ. ಆದರೆ ಹೆಚ್ಚಿನವರಿಗೆ ಈ ಕುರಿತ ಮಾಹಿತಿಯಿಲ್ಲ.
31 ತಿಂಗಳಲ್ಲಿ 47 ಸಾವಿರ ನಾಯಿ ಕಡಿತ ಪ್ರಕರಣ – 15 ಕೇಸ್ ನಲ್ಲಿ ಮಾತ್ರ ಪರಿಹಾರ :
2020-21ನೇ ಸಾಲಿನಲ್ಲಿ 7 ನಾಯಿ ಕಚ್ಚಿದ ಪ್ರಕರಣಗಳಲ್ಲಿ 2,22,540 ರೂ. ಪರಿಹಾರವನ್ನು ನಾಗರೀಕರಿಗೆ ವಿತರಿಸಿದರೆ, 2021-22ನೇ ವರ್ಷದಲ್ಲಿ ಕೇವಲ 4 ಪ್ರಕರಣಗಳಲ್ಲಿ 85,431 ರೂ.ಗಳನ್ನು ನೀಡಿ ಕೈತೊಳೆದುಕೊಂಡಿದೆ. ಈ ವರ್ಷದ ಜನವರಿಯಿಂದ ಜುಲೈ ತನಕ ಒಟ್ಟು 11,291 ನಾಯಿ ಕಡಿತ ಪ್ರಕರಣದಲ್ಲಿ ಬಿಬಿಎಂಪಿಯು ಕೇವಲ ನಾಲ್ಕು ಕೇಸ್ ಗಳಲ್ಲಿ 78,983 ರೂ.ಗಳನ್ನು ಸಂತ್ರಸ್ತರಿಗೆ ಪರಿಹಾರ ನೀಡಿದೆ. ಅಂದರೆ 2020-21ನೇ ಸಾಲಿನಿಂದ 2022-23ನೇ ಜುಲೈ ವರೆಗಿನ 31 ತಿಂಗಳಲ್ಲಿ 47,530 ನಾಯಿಗಳು ಕಡಿತ ಪ್ರಕರಣ ದಾಖಲಾಗಿದ್ದರೂ, ಕೇವಲ 15 ಪ್ರಕರಣಗಳಲ್ಲಿ ಮಾತ್ರ ಬಿಬಿಎಂಪಿಯು ನಾಯಿ ದಾಳಿ ನಡೆಸಿ ಕಚ್ಚಿಸಿಕೊಂಡ ಸಂತ್ರಸ್ತರಿಗೆ 3,07,971 ರೂ.ಗಳನ್ನು ನೀಡಿದೆ.
ಬೀದಿ ನಾಯಿ ಕಡಿತ ಪರಿಹಾರಕ್ಕೆ ದೂರು ನೀಡುವವ ಸಂಖ್ಯೆ ಕಡಿಮೆ :
“ಬೀದಿ ನಾಯಿ ಕಡಿತ ಪರಿಹಾರಕ್ಕಾಗಿ ದೂರು ಕೊಡುವವರ ಸಂಖ್ಯೆ ಕಡಿಮೆಯಿದೆ. ಕೋವಿಡ್ ಸೋಂಕು ಹೆಚ್ಚಾದಂತಹ 2020-21 ಹಾಗೂ 2021-22ನೇ ಸಾಲಿನಲ್ಲಿ ಹೆಚ್ಚಿನ ನಾಯಿ ಕಡಿತ ಪ್ರಕರಣಗಳು ವರದಿಯಾಗಿರಲಿಲ್ಲ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭಿಸುವ ಸಂದರ್ಭಗಳು ಕಡಿಮೆಯಿತ್ತು. ಈಗ ಕೋವಿಡ್ ಸೋಂಕು ಕಡಿಮೆಯಾಗಿ ಸಾರ್ವಜನಿಕರ ಓಡಾಟ ಎಂದಿನಂತಾಗಿದೆ. ಹೀಗಾಗಿ ನಾಯಿ ಕಡಿತವಾದರೆ ವರದಿಯಾಗುತ್ತಿದೆ. 2021-22ನೇ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 50 ಸಾವಿರ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 1.05 ಲಕ್ಷ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದು ನೀಡಲಾಗಿದೆ. ಹಿಂಡಿನಲ್ಲಿ ಬೀದಿ ನಾಯಿಗಳಿದ್ದಾಗ ಆದಷ್ಟು ಎಚ್ಚರಿಕೆ ವಹಿಸಿ.”
– ಡಾ.ಟಿ.ಚಂದ್ರಯ್ಯ, ಉಪ ನಿರ್ದೇಶಕರು, ಬಿಬಿಎಂಪಿ ಪಶುಪಾಲನಾ ವಿಭಾಗ
ಬೀದಿ ನಾಯಿ ಕಡಿತಕ್ಕೆ ಒಳಗಾದ ನಾಗರೀಕರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳದೆ ಖಾಸಗಿಯಾಗಿ ಚಿಕಿತ್ಸೆ ಪಡೆದುಕೊಂಡರೆ ಈ ಕೆಳಕಂಡ ಪ್ರಕರಣಗಳಲ್ಲಿ ಹಣಕಾಸು ಪರಿಹಾರ ಪಡೆದುಕೊಳ್ಳಬಹುದು :
ಗಾಯವಾದ ರೀತಿ | ಬಿಬಿಎಂಪಿ ಪರಿಹಾರ ನೀಡುವ ಪ್ರಮಾಣ | ಉಚಿತ ಚಿಕಿತ್ಸೆ ಪಡೆಯದ ಪಕ್ಷದಲ್ಲಿ, ವಾಸ್ತವವಾಗಿ ಹಣ ನೀಡಿ ಚಿಕಿತ್ಸೆ ಪಡೆದ ಪ್ರಕರಣದಲ್ಲಿ ಆಗುವ ವೆಚ್ಚ |
ನಾಯಿ ಕಚ್ಚುವಾಗ ವ್ಯಕ್ತಿಯ ಚರ್ಮಕ್ಕೆ ತರಚು ಗಾಯವಾಗಿದೆ ಆದರೆ ತೂತವಾಗುವಷ್ಟು ಗಾಯವಾಗದ ಕೇಸ್ | ಅನ್ವಯವಾಗದು | ಅನ್ವಯವಾಗದು |
ಚರ್ಮವನ್ನು ಕಚ್ಚಿ ತೂತವಾದಾಗ | ಪ್ರತಿ ತೂತಕ್ಕೂ 2,000 ರೂ. | ಪ್ರತಿ ತೂತಿನ ಗಾಯಕ್ಕೆ 1,000 ರೂ. |
ಬೀದಿ ನಾಯಿ ಕಡಿತದೊಂದಿಗೆ ಸಂತ್ರಸ್ತ ವ್ಯಕ್ತಿಗೆ ಕಡಿತ ಸ್ಥಳದಲ್ಲಿ ಕಪ್ಪು ಮೂಗೇಟಾದ ಪ್ರಕರಣದಲ್ಲಿ | ಪ್ರತಿ ತೂತಿಗೂ 3,000 ರೂ. | ಪ್ರತಿ ತೂತಿನ ಗಾಯಕ್ಕೆ 2,000 ರೂ. |
ಬೀದಿನಾಯಿ ಅಥವಾ ನಾಯಿಗಳಿಂದ ಹಲವು ಕಡಿತವಾದ ಪ್ರಕರಣದಲ್ಲಿ | 10,000 ರೂ. | 5,000 ರೂ. |
ಬೀದಿ ನಾಯಿ ಅಥವಾ ನಾಯಿಗಳಿಂದ ಸಂತ್ರಸ್ತ ವ್ಯಕ್ತಿ ಸಾವನ್ನಪ್ಪಿದ್ದರೆ | ಮಕ್ಕಳಾದರೆ 50,000 ರೂದೊಡ್ಡವರಾದರೆ 1 ಲಕ್ಷ ರೂ.. | 5,000 ರೂ. ಹಾಗೂ ಸಂತ್ರಸ್ತ ಸಾವಿಗೂ ಮುನ್ನ ವೈದ್ಯಕೀಯ ಚಿಕಿತ್ಸೆಗಾಗಿ ಮಾಡಿದ ವೆಚ್ಚ |
ಸಾರ್ವಜನಿಕರು ಬೀದಿ ನಾಯಿ ಕಡಿತ ಪರಿಹಾರಕ್ಕೆ ಹೀಗೆ ಮಾಡಿ :
ಬೀದಿ ನಾಯಿ ಕಡಿತವಾದಾಗ ಸಂತ್ರಸ್ತ ವ್ಯಕ್ತಿ ಅಥವಾ ಸಂಬಂಧಿಸಿದವರು ಬಿಬಿಎಂಪಿಯ ವ್ಯಾಪ್ತಿಯ ಸಂಬಂಧಿಸಿದ ವಲಯ ಕಚೇರಿಯಲ್ಲಿನ ಪಶುಪಾಲನಾ ವಿಭಾಗದ ಸಹಾಯಕ ನಿರ್ದೇಶಕರಿಗೆ ಈ ಬಗ್ಗೆ ದೂರು ನೀಡಿ. ಆ ದೂರಿನ ಕುರಿತಂತೆ ಪಶುಪಾಲನಾ ವಿಭಾಗದ ಸಹಾಯಕ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ, ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗೆ ಪಾಲಿಕೆಯಿಂದ ಪರಿಹಾರ ಮೊತ್ತ ನೀಡುವ ಕುರಿತಂತೆ, ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದಲ್ಲಿ, ಆ ಚಿಕಿತ್ಸಾ ವೆಚ್ಚದ ಬಿಲ್ ಗಳನ್ನು ಪಾಲಿಕೆಗೆ ಸಲ್ಲಿಕೆ ಮಾಡಬೇಕು. ಆನಂತರ ಅವುಗಳ ಆಧಾರದ ಮೇಲೆ ವಲಯ ಕಚೇರಿಯಿಂದ ಕೇಂದ್ರ ಕಚೇರಿಗೆ ಹಣ ಪರಿಹಾರ ಮಂಜೂರಾತಿ ಕುರಿತಂತೆ ಕಡತ ಸಲ್ಲಿಸಿ ಒಪ್ಪಿಗೆ ಪಡೆದು, ಬಳಿಕ ಸಂತ್ರಸ್ತರಿಗೆ ಪರಿಹಾರ ವಿತರಣೆಯಾಗುತ್ತದೆ. ಈ ಕುರಿತಂತೆ ವಲಯ ಕಚೇರಿಗಳ ದೂರವಾಣಿ ಸಂಖ್ಯೆಯನ್ನು ಇಲ್ಲಿ ನೀಡಲಾಗಿದೆ. ಅದೇ ರೀತಿ ಶಂಕಿತ ರೇಬಿಸ್ ಪೀಡಿತ ಶ್ವಾನಗಳು ಕಂಡು ಬಂದರೆ ಸಾರ್ವಜನಿಕರು ರೇಬಿಸ್ ಹೆಲ್ಪ್ ಲೈನ್ 6364893322 ಮೊಬೈಲ್ ನಂಬರ್ ಗೆ ಕರೆ ಮಾಡಿ ತಿಳಿಸಬಹುದು.
ಬೀದಿ ನಾಯಿ ಸಂತಾನ ನಿಯಂತ್ರಣದಲ್ಲಿ ಪಾಲಿಕೆ ಫೇಲ್ :
“ಬೀದಿ ನಾಯಿ ಕಡಿತ ಪ್ರಕರಣಗಳು 2017-18ರಿಂದ 2021-22ರ ತನಕ 1.54 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ ಎಂಬ ಅಂಶವೇ ಗಾಬರಿ ಹುಟ್ಟಿಸುವಂತಿದೆ. ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ (ABC)ಗೆ ಬಿಬಿಎಂಪಿಯು ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡುತ್ತಿದ್ದರೂ, ಬೀಡಾಡಿ ನಾಯಿಗಳ ಸಂತಾನ ನಿಯಂತ್ರಣವಾಗದ ಕಾರಣ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿ, ನಾಯಿ ಕಡಿತ ಪ್ರಕರಣ ಹೆಚ್ಚಾಗುತ್ತಿದೆ. 31 ತಿಂಗಳಲ್ಲಿ 47 ಸಾವಿರ ನಾಯಿ ಕಡಿತಗಳಾಗಿದ್ದರೆ ಕೇವಲ 15 ಪ್ರಕರಣಗಳಿಗೆ ಪಾಲಿಕೆ ಪರಿಹಾರ ನೀಡಿದೆ. ಬೀದಿ ನಾಯಿ ಕಡಿತಕ್ಕೆ ಹೆಚ್ಚಾಗಿ ಒಳಗಾಗುವವರು ಬಡವರೇ ಹೆಚ್ಚು. ಹಾಗಾಗಿ ಬಿಬಿಎಂಪಿ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಈ ಬಗ್ಗೆ ಜನರಲ್ಲಿ ಹೆಚ್ಚು ಹೆಚ್ಚಾಗಿ ಜಾಗೃತಿ ಮೂಡಿಸಬೇಕು.”
– ಅಬ್ದುಲ್ ವಾಜೀದ್, ಬಿಬಿಎಂಪಿ ಆಡಳಿತ ಮತ್ತು ವಿರೋಧ ಪಕ್ಷದ ಮಾಜಿ ನಾಯಕರು
ನಾಯಿಗಳ ಬಗ್ಗೆ ಈ ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸಿ :
ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ನಾಯಿಗಳು ಸಂತಾನ ಪ್ರಕ್ರಿಯೆಯಲ್ಲಿ ತೊಡಗುತ್ತವೆ. ಹಾಗಾಗಿ ಇಂತಹ ಸಂದರ್ಭದಲ್ಲಿ ನಾಯಿಗಳು ಉಗ್ರವಾಗಿ ವರ್ತಿಸುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾಗ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ನಾಯಿಗಳ ಹಿಂಡಿರುವಾಗ ಸ್ವಲ್ಪ ಎಚ್ಚರಿಕೆ ವಹಿಸಿ ಅವುಗಳಿಂದಲೇ ದೂರ ಉಳಿಯಬೇಕು. ಕೆಲವೊಮ್ಮೆ ಮಕ್ಕಳು ನಾಯಿಗಳು ಬೊಗಳಿದಾಗ ಓಡುತ್ತಾರೆ. ಆಗ ಓಡದೇ ಒಂದು ಸ್ಥಳದಲ್ಲಿ ನಿಲ್ಲಬೇಕು. ನಾಯಿಗಳನ್ನು ಯಾವುದಾದರೂ ರೀತಿಯಲ್ಲಿ ಪ್ರಚೋರಿಸಿದಾಗ ಕಚ್ಚಲು ಬರುತ್ತದೆ. ಇದನ್ನು ನಿಯಂತ್ರಿಸಬೇಕು ಎಂದು ಕೆಲವು ಪ್ರಮುಖ ಸಲಹೆಗಳನ್ನು ಬಿಬಿಎಂಪಿ ಪಶುಪಾಲನಾ ಇಲಾಖೆ ವೈದ್ಯರು ನೀಡಿದ್ದಾರೆ.