ನವದೆಹಲಿ, ಆ.26 www.bengaluruwire.com : ಬಿಬಿಎಂಪಿ ಚುನಾವಣೆಗೆ ಇದ್ದ ಬಹುದೊಡ್ಡ ಕಾನೂನಾತ್ಮಕ ತೊಡಕು ಸ್ವಲ್ಪ ಮಟ್ಟಿಗೆ ನಿವಾರಣೆಯಾದಂತಾಗಿದೆ. ಸುಪ್ರೀಂಕೋರ್ಟ್, ಚುನಾವಣೆ ನಡೆಸುವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ಹೈಕೋರ್ಟ್ ಅಂಗಳಕ್ಕೆ ರವಾನಿಸಿದೆ. ಸೂಕ್ತ ಸಮಯದಲ್ಲಿ ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳಲು ಹೈಕೋರ್ಟ್ ಸರ್ವ ಸ್ವತಂತ್ರವಾಗಿದೆ ಎಂದು ಮಹತ್ವದ ಆದೇಶವನ್ನು ಸುಪ್ರಿಂಕೋರ್ಟ್ ಶುಕ್ರವಾರ ನೀಡಿದೆ.
ಬಿಬಿಎಂಪಿ ಚುನಾವಣೆ ನಡೆಸುವ ವಿಚಾರದಲ್ಲಿ ನಡೆದ ಮಹತ್ವದ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್ ಪೀಠ ಮೇಲ್ಕಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು ಬಿಬಿಎಂಪಿ ಪುನರ್ವಿಂಗಡಣೆ ಕುರಿತು ನಿರ್ಧರಿಸಲು ಮತ್ತು ಅದಕ್ಕೆ ಅನುಗುಣವಾಗಿ ಆದೇಶಗಳನ್ನು ಹೊರಡಿಸಬಹುದು ಎಂದು ನ್ಯಾಯಮೂರ್ತಿ ನಜೀರ್ ಅಹಮದ್ ಮತ್ತು ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ಈಗಾಗಲೇ ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಮತ್ತು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ವಾರ್ಡ್ ಪುನರ್ವಿಂಗಡಣೆ ಕುರಿತಂತೆ ಹೈಕೋರ್ಟ್ ನಲ್ಲಿ ಈಗಾಗಲೇ 9 ರಿಟ್ ಅರ್ಜಿ ಪ್ರಕರಣಗಳಿದ್ದು, ಅವುಗಳನ್ನು ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ. ವಾರ್ಡ್ ಪುನರ್ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿನ ಭಿನ್ನ ನಿಲುವುಗಳಿಂದಾಗಿ ಇವುಗಳ ಬಗ್ಗೆ ಸ್ಪಷ್ಟತೆ ಬಯಸಿದ್ದ ಹೈಕೋರ್ಟ್ ಈ ವಿಚಾರದಲ್ಲಿನ ಜಿಜ್ಞಾಸೆಗಳಿಗೆ ಸುಪ್ರೀಂಕೋರ್ಟ್ ನಿಂದ ಸೂಕ್ತ ಉತ್ತರವೇನೆಂದು ಪಡೆದುಕೊಂಡು ಬನ್ನಿ ಎಂದು ಅರ್ಜಿದಾರರಿಗೆ ಸೂಚಿಸಿತ್ತು. ಆಗಸ್ಟ್ 29ರಂದು ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.
ಇದೀಗ ಸುಪ್ರೀಂಕೋರ್ಟ್ ಶುಕ್ರವಾರ ನೀಡಿರುವ ಈ ಆದೇಶದಿಂದಾಗಿ ಹೈಕೋರ್ಟ್ ಸೂಕ್ತ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲು ಅನುವಾದಂತಾಗಿದೆ. ಈ ಮಧ್ಯೆ ವಾರ್ಡ್ ಮೀಸಲಾತಿ ನಿಗದಿ ಕುರಿತಂತೆಯೂ ಪ್ರಕರಣ ಬಾಕಿಯಿದ್ದು, ಸೆ.1ರಂದು ವಿಚಾರಣೆ ನಡೆಯಲಿದೆ.
ಗುರುವಾರವಷ್ಟೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯ ಚುನಾವಣಾ ಆಯೋಗ ಬಿಬಿಎಂಪಿ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಸೆಪ್ಟೆಂಬರ್ 22ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವುದಾಗಿ ತಿಳಿಸಿದೆ. ಇದಾದ ಬಳಿಕ ಚುನಾವಣೆ ವೇಳಾಪಟ್ಟಿ ಪ್ರಕಟಿಸುವುದಾಗಿ ಹೇಳಿತ್ತು.
ಬಿಬಿಎಂಪಿ ಚುನಾವಣೆ ನಡೆಸುವ ವಿಚಾರದಲ್ಲಿ ವಿಚಾರಣೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೈಕೋರ್ಟ್ ಗಿದೆ ಎಂದು ಅಭಿಪ್ರಾಯಪಟ್ಟಿದೆ. ಸುಪ್ರಿಂ ಕೋರ್ಟ್ ಅಂಗಳದಿಂದ ಚೆಂಡು ಇದೀಗ ಹೈಕೋರ್ಟ್ ಅಂಗಳಕ್ಕೆ ರವಾನೆಯಾಗಿದ್ದು ಹೈಕೋರ್ಟ್ ಯಾವ ರೀತಿಯ ಅಂತಿಮ ತೀರ್ಮಾನಕ್ಕೆ ಬರಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.