ಬೆಂಗಳೂರು, ಆ.25 www.bengaluruwire.com :
ಬಿಬಿಎಂಪಿಯಲ್ಲಿ ಕಮಿಷನ್ ನೀಡಿಕೆ ವಿಚಾರದಲ್ಲಿ ಲಿಖಿತ ದೂರು ನೀಡಿದಲ್ಲಿ ತನಿಖೆ ನಡೆಸಿ ಆರೋಪದಲ್ಲಿ ಸತ್ಯವಿದೆ ಎಂದು ಮನವರಿಕೆ ಆದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.
ಬಿಬಿಎಂಪಿಯಲ್ಲಿ ಕಾಮಗಾರಿ ನಡೆಸಿ ಹಣ ಪಡೆಯಲು 50 ಪರ್ಸೆಂಟ್ ಕಮಿಷನ್ ಪಾಲಿಕೆ ಗುತ್ತಿಗೆದಾರರು ಆರೋಪಿಸದಂತೆ ಇದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಗುರುವಾರ ಉತ್ತರಿಸಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿಯಲ್ಲಿ ಕಾಮಗಾರಿ ವಿಷಯದಲ್ಲಿ ಕಮಿಷನ್ ಪಡೆಯುತ್ತಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ಈ ಬಗ್ಗೆ ಲಿಖಿತ ದೂರು ನೀಡಿದರೆ ಆ ಬಗ್ಗೆ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸೆಪ್ಟೆಂಬರ್ ಮೊದಲ ವಾರದಲ್ಲಿ ಪಾಲಿಕೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಭೆ ಕರೆದು ಕಡತ ವಿಲೇವಾರಿಗೆ ಹೆಚ್ಚುವರಿ ಟೇಬಲ್ ಗಳು ಸೇರ್ಪಡೆ ವಿಚಾರದ ಬಗ್ಗೆ ಚರ್ಚೆ ಮಾಡಿ ಗೊಂದಲಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಅವರು ತಿಳಸಿದರು.
ಪಾಲಿಕೆಯಲ್ಲಿನ ಕಾಮಗಾರಿಗಳಿಗೆ ಕಮಿಷನ್ ನೀಡುವ ಪರ್ಸಂಟೇಜ್ ಜಾಸ್ತಿಯಾಗಿರುವ ಬಗ್ಗೆ ಬಿಬಿಎಂಪಿ ಗುತ್ತಿಗೆದಾರರು ಮುಖ್ಯ ಆಯುಕ್ತರಿಗೆ ಲಿಖಿತವಾಗಿ ದೂರು ನೀಡಿದ್ದನ್ನು ಮೊದಲಿಗೆ ಬೆಂಗಳೂರು ವೈರ್ ದಾಖಲೆ ಸಹಿತವಾಗಿ ಆಗಸ್ಟ್ 23ರಂದು EXCLUSIVE ಸುದ್ದಿ ಪ್ರಕಟಿಸಿತ್ತು. ಈ ವಿಷಯ ನಾಡಿನೆಲ್ಲಡೆ ಪ್ರಮುಖ ವಿಷಯವಾಗಿ ಚರ್ಚೆಗೆ ಗ್ರಾಸವಾಗಿತ್ತು.
ಈ ಸುದ್ದಿಯನ್ನು ಓದಿ : BW EXCLUSIVE | ಬಿಬಿಎಂಪಿ ಗುತ್ತಿಗೆದಾರರಿಂದ ಹೊಸ ಬಾಂಬ್ ಸಿಡಿತ : ಪಾಲಿಕೆಯಲ್ಲಿ ಕಾಮಗಾರಿ ಕಡತ ವಿಲೇವಾರಿಗೆ 50 ಪರ್ಸೆಂಟ್ ಕಮಿಷನ್….! ಪತ್ರದಲ್ಲಿ ಬಯಲಾಯ್ತು ಸಂಗತಿ
ಹೊಸ ಆದೇಶಗಳು ಹಿಂದಿನ ಬಿಲ್ ಪಾವತಿಗಳಿಗೆ ತೊಡಕಾಗದು :
ಆಗಸ್ಟ್ ಮೊದಲ ವಾರದಲ್ಲಿ ಕೇಂದ್ರೀಕೃತ ಪಾವತಿ ವ್ಯವಸ್ಥೆಯಿಂದ ವಿಕೇಂದ್ರಿಕೃತ ವ್ಯವಸ್ಥೆಯಡಿ ವಲಯ ಕಚೇರಿಯಿಂದ ಕಾಮಗಾರಿಗಳ ಬಿಲ್ ಪಾವತಿ ಮಾಡಲು ವಲಯ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ಟಿವಿಸಿಸಿಯಿಂದ ಪ್ರತಿ ಕಾಮಗಾರಿಯಿಂದ ಶೇ.10ರಷ್ಟು ಕಾಮಗಾರಿಗಳ ಪರಿಶೀಲನೆ ಹಾಗೂ ಪಾಲಿಕೆ ಗುಣನಿಯಂತ್ರಣ ವಿಭಾಗದಿಂದ ಕಾಮಗಾರಿ ಗುಣಮಟ್ಟ ವರದಿ ಸಲ್ಲುವಂತೆ ಹೊಸ ಆದೇಶ ಹೊರಡಿಸಲಾಗಿದೆ.
ಆ ಆದೇಶ ಮುಂಬರುವ ಕಾಮಗಾರಿಗಳ ಬಿಲ್ ಪಾವತಿ ವೇಳೆ ಈ ಕ್ರಮವನ್ನು ಅನುಸರಿಸಲಾಗುವುದು. 22 ತಿಂಗಳ ಹಿಂದಿನ ಪಾಲಿಕೆ ಕಾಮಗಾರಿ ಬಿಲ್ ಪಾವತಿಗೂ ಹೊಸ ಆದೇಶಕ್ಕೂ ಸಂಬಂಧವಿಲ್ಲ. ಇದನ್ನು ಗುತ್ತಿಗೆದಾರರು ಮೊದಲು ಅರ್ಥ ಮಾಡಿಕೊಳ್ಳಬೇಕು.
ಹೊಸ ವ್ಯವಸ್ಥೆಯಿಂದ ನಗರದಲ್ಲಿ ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟ ಹಾಗೂ ಬಿಲ್ ಪಾವತಿ ವ್ಯವಸ್ಥೆ ಸುಲಲಿತವಾಗಲಿದೆ ಎಂದು ಮುಖ್ಯ ಆಯುಕ್ತರು ಮಾಧ್ಯಮದವರಿಗೆ ಪ್ರಶ್ನೆಗೆ ಸ್ಪಷ್ಟೀಕರಣ ನೀಡಿದರು.