ಬೆಂಗಳೂರು, ಆ.25 www.bengaluruwire.com : ಹಳ್ಳಿಗಳಿಗಿಂತ ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಿದೆ. ಮತದಾನದ ಪ್ರಮಾಣ ಹೆಚ್ಚಲು ಮತದಾರರು ಕೈಜೋಡಿಸಬೇಕು ಎಂದು ರಾಜ್ಯ ಚುನಾವಣಾ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.
ನಗರದ ಪಾಲಿಕೆಯ ಐಪಿಪಿ ಕೇಂದ್ರದಲ್ಲಿ ಬಿಬಿಎಂಪಿ ಹಾಗೂ ರಾಜ್ಯ ಚುನಾವಣಾ ಆಯೋಗದಿಂದ ಗುರುವಾರ ಏರ್ಪಡಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
www.bbmp.gov.in ವೆಬ್ ಸೈಟ್, ಸೇರಿದಂತೆ ಎಲ್ಲಾ ಕಡೆ ಕರಡು ಮತದಾರರ ಪಟ್ಟಿ ಪ್ರಕಟ ಮಾಡಲಾಗುತ್ತಿದೆ.ಯಲ್ಲಿ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಮತದಾರರು ತಮ್ಮ ಹೆಸರು ಸೂಕ್ತ ವಾರ್ಡ್ ನಲ್ಲಿ ಇದೆಯೇ ಎಂದು ಪರಿಶೀಲಿಸಿ, ತಪ್ಪಿದ್ದರೆ, ಸರಿಪಡಿಸಲು ಸೂಕ್ತ ರೀತಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ.
ಬಿಬಿಎಂಪಿಯ ವ್ಯಾಪ್ತಿಯ 243 ವಾರ್ಡ್ ಗಳಲ್ಲಿ 79,08,394 ಮತದಾರರಿದ್ದು ಆ ಪೈಕಿ 41,09,496 ಪುರುಷ ಮತದಾರರು ಹಾಗೂ 37,97,497 ಮಹಿಳಾ ಮತದಾರರು ಹಾಗೂ 1,401 ಇತರೆ ಮತದಾರಿದ್ದಾರೆ ಎಂದು ಚುನಾವಣಾ ಆಯೋಗ ಆಯುಕ್ತ ಬಸವರಾಜ್ ಹೇಳಿದ್ದಾರೆ.
ಬಿಬಿಎಂಪಿ 2022 ರ ಸಾವತ್ರಿಕ ಚುನಾವಣೆ ನಡೆಸುವ ಸಂಬಂದ ಮತದಾರರ ಪಟ್ಟಿ ಕುರಿತಂತೆ ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಈ ಕಾರ್ಯಕ್ಕಾಗಿ ನಾಲ್ಕು ಜಿಲ್ಲಾ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟವಾದಾಗ ಮತದಾರರ ಪಟ್ಟಿಯಲ್ಲಿ ಬದಲಾವಣೆಯಾಗಬಹುದು. ಮತದಾರರ ಪಟ್ಟಿ ಕುರಿತಂತೆ ಯಾವುದಾದರೂ ಆಕ್ಷೇಪಣೆ ERO ಹಾಗೂ ARO ಅವರು ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವರು. 22 ಸೆಪ್ಟೆಂಬರ್ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.
ERO ಹಾಗೂ ARO ನೂರಕ್ಕೆ ನೂರರಷ್ಟು ವಾರ್ಡ್ ವಾರು ಪುನರ್ವಿಂಗಡಣೆ ಬಗ್ಗೆ ಪರಿಶೀಲನೆ ನಡೆಸಬೇಕು ಅದೇ ರೀತಿ ಆಕ್ಷೇಪಣೆಗಳನ್ನು ಪರಿಶೀಲನೆ ನಡೆಸಬೇಕು. ಜಂಟಿ ಆಯುಕ್ತರು ಶೇ.10ರಷ್ಟು ಪರಿಶೀಲನೆ ನಡೆಸಬೇಕು. ಮಾಧ್ಯಮಗಳು, ನಾಗರೀಕ ಸಂಘ ಸಂಸ್ಥೆಗಳು ಮತದಾರರ ಪಟ್ಟಿ ಬಗ್ಗೆ ಗಮನಹರಿಸಿ ತಮ್ಮ ಜವಾಬ್ದಾರಿಯನ್ನು ಮೆರೆಯಬೇಕು. ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ರಾಜ್ಯ ಚುನಾವಣಾ ಆಯುಕ್ತರು ಹೇಳಿದರು.
ಮತದಾರರು ನಮ್ಮ ಜೊತೆ ಕೈಜೋಡಿಸಿ ಮತಗಟ್ಟೆ, ಮತದಾರರ ಪಟ್ಟಿ ಕರಡು ಪಟ್ಟಿಯನ್ನು ಪರಿಶೀಲಿಸಿ ತಪ್ಪುಗಳಿದ್ದಲ್ಲಿ ಸರಿಪಡಿಸಲು ಅವಕಾಶವಿದೆ. ಆಗ ಅಂತಿಮವಾಗಿ ಬಿಬಿಎಂಪಿ ಚುನಾವಣೆ ಸುಗಮವಾಗಿ ನಡೆಸಲು ಅವಕಾಶವಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಆನೆಕಲ್ ವಿಧಾನಸಭಾ ಕ್ಷೇತ್ರದ ಒಂದು ವಾರ್ಡ್ ಬಿಬಿಎಂಪಿಗೆ ಸೇರುತ್ತೆ. ಈ ಹಿಂದೆ ಬಿಬಿಎಂಪಿ ಹೊರಗಿದ್ದರೂ ಹಿಂದೆ 2011 ಜನಗಣತಿ ಪರಿಗಣಿಸಿದರೆ ಆಗ ಜನಸಂಖ್ಯೆ ಕಮ್ಮಿಯಿತ್ತು. ಈಗ 11-12 ವರ್ಷದಲ್ಲಿ ಬದಲಾವಣೆ ಆಗಿದೆ. ಥಣಿಸಂದ್ರದಲ್ಲಿ ಮತದಾರರ ಸಂಖ್ಯೆ 51,653 ಹೆಚ್ಚಿರುವ ಬಗ್ಗೆ ಗಮನ ಸೆಳೆದಿದ್ದೀರ, ಈ ಬಗ್ಗೆ ಪರಿಶೀಲನೆ ನಡೆಸ್ತೀವಿ. ಹೊಸ ವಾರ್ಡ್ ನಲ್ಲಿ ಮತಗಟ್ಟೆ ಗುರ್ತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತುಷಾರ್ ಗಿರಿನಾಥ್ ಅವರು ಹೇಳಿದರು.
ಮತದಾರರ ಕರಡು ಪಟ್ಟಿ ಪರಿಷ್ಕರಣೆಗೆ ಆಕ್ಷಪಣೆ ಸಲ್ಲಿಸಲು ಸೆ.2ರಂದು ಕೊನೆಯ ದಿನವಾಗಿದೆ. ಆಕ್ಷೇಪಣೆ ಸಲ್ಲಿಸಲು ತರಾತುರಿಯಲ್ಲಿ ಕರಡು ಪಟ್ಟಿ ಪರಿಷ್ಕರಣೆ ಮಾಡಿಲ್ಲ ಎಂದು ಚುನಾವಣಾ ಆಯುಕ್ತ ಬಸವರಾಜ್ ಹೇಳಿದರು.
ಮತದಾರರ ಪಟ್ಟಿ ಅಂತಿಮಗೊಂಡ ನಂತರ ಬಿಬಿಎಂಪಿ ಚುನಾವಣೆ ದಿನಾಂಕ ಪ್ರಕಟವಾಗಲಿದೆ. ಚುನಾವಣೆ ಕೂಡಲೇ ಮಾಡುವಂತೆ ಸುಪ್ರೀಂಕೋರ್ಟ್ ನಿರ್ದೇಶನವಿದೆ. ಒಂದೊಮ್ಮೆ ಚುನಾವಣೆ ಮುಂದೂಡಲು ಸೂಚನೆ ಬಂದರೆ ಆ ಬಗ್ಗೆ ಮುಂದೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಚುನಾವಣಾ ಆಯೋಗಕ್ಕೆ ವಾರ್ಡ್ ಪುನರ್ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿ ಸರ್ಕಾರದಿಂದ ಸಲ್ಲಿಕೆಯಾಗಿದೆ ಎಂದರು.
ಚುನಾವಣಾ ಆಯೋಗದ ಮಾಹಿತಿ ಅನ್ವಯ ಮತದಾರರ ಪಟ್ಟಿ ಸೇರ್ಪಡೆ, ಅಳಿಸು ಹಾಕುವಿಕೆ ನಿರಂತವಾಗಿ ನಡೆಯುತ್ತಿರುತ್ತೆ. ಅಲ್ಲಿನ ದತ್ತಾಂಶವನ್ನು ಆಧರಿಸಿ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತಿರುತ್ತೆ. 2015 ಇಸವಿಯಲ್ಲಿ ನಗರದಲ್ಲಿ 71,22,165 ಮತದಾರರು ಇದ್ದರು. ಈಗ 79,08,394 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲೆ, ಮೂರು ಲೋಕಸಭಾ ಕ್ಷೇತ್ರಗಳು ಹಾಗೂ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಗುರುತಿನ ಕಾರ್ಡ್ ದತ್ತಾಂಶದ ಜೊತೆಗೆ ಆಧಾರ್ ಕಾರ್ಡ್ ಜೋಡಿಸುವಿಕೆ ಪ್ರಮಾಣ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆಯಿದೆ. ಶೇ.3ರಷ್ಟು ಮಾತ್ರ ಮತದಾರರು ತಮ್ಮ ವೋಟರ್ ಐಡಿ ಕಾರ್ಡ್ ಜೊತೆ ಆಧಾರ್ ಕಾರ್ಡ್ ಅನ್ನು ಜೋಡಿಸಿದ್ದಾರೆ. ಈ ಪ್ರಮಾಣ ಹೆಚ್ಚಿಸಲು ಮತದಾರರಲ್ಲಿ ಅರಿವು ಮೂಡಿಸಲು ಸ್ವೀಪ್ ಚಟುವಟಿಕೆ ಹೆಚ್ಚಿಸುತ್ತೇವೆ ಎಂದು ಜಿಲ್ಲಾ ಚುನಾವಣಾಧಿಕಾರಿ ರಂಗಪ್ಪ ತಿಳಿಸಿದರು.
ಇ-ಜೋಡಣೆ ಹಾಗೂ ಬಿಬಿಎಂಪಿ ಚುನಾವಣೆಯೂ ಜೊತೆಗೆ ಬಂದಿದೆ. ಬ್ಲಾಕ್ ಮಟ್ಟದ ಅಧಿಕಾರಿಗಳನ್ನು ಚುನಾವಣೆ ಮತದಾರರ ಪಟ್ಟಿ ಪರಿಷ್ಕರಣೆ ಜೊತೆಗೆ ಇ-ಜೋಡಣೆ ಪ್ರಮಾಣ ಹೆಚ್ಚಲು ಕ್ರಮ ಕೈಗೊಳ್ಳುತ್ತಾರೆ. ಆಧಾರ್ ಲಿಂಕ್ – ವೋಟರ್ ಐಡಿ ಜೊತೆ ಲಿಂಕ್ ಮಾಡುವುದು ಮುಖ್ಯವಾಗಿದೆ. ನಕಲಿ ಮತದಾರರ ಹಾವಳಿ ಕಡಿಮೆ ಮಾಡಬಹುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಹೊನ್ನಾಂಬ, ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಲ್ಲಾ ಚುನಾವಣಾಧಿಕಾರಿ ಹಾಗೂ ವಿಶೇಷ ಆಯುಕ್ತ ಹರೀಶ್ ಕುಮಾರ್, ಪಾಲಿಕೆ ಚುನಾವಣಾ ಆಯೋಗದ ಸಹಾಯಕ ಆಯುಕ್ತ ಉಮೇಶ್ ಉಪಸ್ಥಿತರಿದ್ದರು.