ಬೆಂಗಳೂರು, ಆ.25 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇಂದ್ರ ಕಚೇರಿ ಅನೆಕ್ಸ್-3 ಕಟ್ಟಡದ ನಾಲ್ಕನೇ ಮಹಡಿ, ಘನತ್ಯಾಜ್ಯ ವಿಲೇವಾರಿ ಚೀಫ್ ಎಂಜಿನಿಯರ್ ಕಚೇರಿಗೆ ಅಲ್ಲಿನ ಸಿಬ್ಬಂದಿ ಹೋಗೋಕೆ ಹೆದರುವಂತಾಗಿದೆ.
ಏಕೆಂದರೆ ಈ ಕಚೇರಿಯಲ್ಲಿ 3.5 ಅಡಿಯ 6 ಸ್ಲೈಡಿಂಗ್ ಕಿಟಕಿಗಳನ್ನು ಅವೈಜ್ಞಾನಿಕವಾಗಿ ನೆಲಕ್ಕಿಂತ ಒಂದೂವರೆ ಅಡಿ ಎತ್ತರದಲ್ಲಿ ಅಳವಡಿಸಿದ್ದು, ಯಾವ ಕಿಟಕಿಗಳಿಗೂ ಸುರಕ್ಷತಾ ಗ್ರಿಲ್ ಗಳನ್ನು ಅಳವಡಿಸಿಲ್ಲ. ಇದು ಈ ಕಚೇರಿಗೆ ಬಂದು ಹೋಗುವವರಿಗೆ ಅಪಾಯಕ್ಕೆ ಆಹ್ವಾನ ನೀಡಿದಂತಿದೆ.
ಅನೆಕ್ಸ್ ಕಟ್ಟಡದಲ್ಲಿ ಬಿಬಿಎಂಪಿ ಎಂಜಿನಿಯರಿಂಗ್, ಅರಣ್ಯ, ಪಶುಪಾಲನೆ, ಶಿಕ್ಷಣ, ನಗರ ಯೋಜನೆ ಸೇರಿದಂತೆ ಪಾಲಿಕೆ ಸಾಕಷ್ಟು ವಿಭಾಗಗಳ ಕಚೇರಿಗಳಿವೆ. ನೆಲ ಮಹಡಿ ಸೇರಿದಂತೆ G+6 ಅಂತಸ್ತುಗಳನ್ನು ಹೊಂದಿರುವ ಈ ಸಾರ್ವಜನಿಕ ಕಟ್ಟಡದಲ್ಲಿ, ನಗರ ಯೋಜನೆ ಕಟ್ಟಡ ಸುರಕ್ಷತಾ ಮಾನದಂಡಗಳ ಪ್ರಕಾರ ಸುರಕ್ಷತೆಗೆ ಹೆಚ್ಚು ಗಮನ ಕೊಡದೆ ನಿರ್ಲಕ್ಷ್ಯವಹಿಸಿರುವುದು ಕಂಡುಬಂದಿದೆ.
ಊರಿಗೆಲ್ಲ ಒಂದು ಕಾನೂನು ; ಬಿಬಿಎಂಪಿಗೇ ಒಂದು ಕಾನೂನು :
ಪಾಲಿಕೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಬಹುಮಹಡಿ ಕಟ್ಟಡದ ತುರ್ತು ನಿರ್ಗಮನ ಸ್ಥಳವಾದ ಮೆಟ್ಟಿಲಿನ ಎದುರಿನ ಖಾಲಿ ಸ್ಥಳದಲ್ಲಿ, ಪ್ರತಿ ಅಂತಸ್ತಿನಲ್ಲೂ ಕಚೇರಿಗಳನ್ನು ತೆರೆಯಲಾಗಿದೆ. ಊರಿಗೆಲ್ಲ ಕಟ್ಟಡ ನಕ್ಷೆಗೆ ಮಂಜೂರಾತಿ ನೀಡುವ ಬಿಬಿಎಂಪಿಯಲ್ಲೇ ಕಟ್ಟಡ ನಕ್ಷೆಗೆ ವಿರುದ್ಧವಾಗಿ ಹೆಚ್ಚುವರಿ ಕಚೇರಿಗಳನ್ನು ಕಟ್ಟಿ ಅಗ್ನಿಶಾಮಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ನಾಗರೀಕರು ಆರೋಪಿಸಿದ್ದಾರೆ.
ಕಾಲುಜಾರಿ ಕಿಟಕಿಯಿಂದ ಬೀಳುವ ಅಪಾಯ :
ಘನತ್ಯಾಜ್ಯ ವಿಲೇವಾರಿ ವಿಭಾಗದ ಚೀಫ್ ಎಂಜಿನಿಯರ್ ವಿಭಾಗಕ್ಕೆ ಪೌರಕಾರ್ಮಿಕರು, ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್, ಸಾರ್ವಜನಿಕರು ದೈನಂದಿನ ಕೆಲಸ ಕಾರ್ಯಗಳಿಗೆ ಬಂದು ಹೋಗುತ್ತಾರೆ. ಹೀಗೆ ಬಂದವರು ಉತ್ತರ ದಿಕ್ಕಿನ ಭಾಗದಲ್ಲಿ ಕಚೇರಿಯ ನೆಲಮಟ್ಟದ ಸ್ಲೈಡಿಂಗ್ ಕಿಟಕಿ ಬಳಿ ಬಂದು ನಿಲ್ಲುವ ಪ್ರಮೇಯವೇ ಹೆಚ್ಚು. ಆಗ ಆಕಸ್ಮಾತಾಗಿ ಕಾಲು ಜಾರಿ ಮೇಲಿಂದ ಬಿದ್ದರೆ, ಬದುಕುಳಿಯುವ ಸಾಧ್ಯತೆಯಿಲ್ಲ, ಆ ಮಟ್ಟಿಗೆ ಈ ಸ್ಥಳವು ಅಪಾಯಕರವಾಗಿದೆ.
ಕಿಟಕಿಗೆ ಸುರಕ್ಷತಾ ಗ್ರಿಲ್ ಅಳವಡಿಸದೆ ನಿರ್ಲಕ್ಷ್ಯ :
ಈ ಕಚೇರಿಯ ಸಿಬ್ಬಂದಿ ಪಾಲಿಕೆ ಕಟ್ಟಡದ ನಿರ್ವಹಣೆ, ನವೀಕರಣ ಮತ್ತಿತರ ಕಾರ್ಯಗಳನ್ನು ನೋಡಿಕೊಳ್ಳುವ ಎಂಪಿಡಿ ವಿಭಾಗಕ್ಕೆ ಕಿಟಕಿಗಳಿಗೆ ಸುರಕ್ಷತಾ ಗ್ರಿಲ್ ಅಳವಡಿಸುವಂತೆ ಮನವಿ ಮಾಡಿ ಹಲವು ತಿಂಗಳೇ ಕಳೆದಿದೆ. ಆದರೂ ಈತನಕ ಸುರಕ್ಷತಾ ಗ್ರಿಲ್ ಅಳವಡಿಸಿಲ್ಲ. ಏನಾದರೂ ಅಪಾಯ ಸಂಭವಿಸಿದರೆ ಯಾರು ಹೊಣೆ? ಎಂದು ಈ ವಿಭಾಗದ ಸಿಬ್ಬಂದಿ ದೂರುತ್ತಾರೆ.
ನೋಡ್ತೀವಿ – ಮಾಡ್ತೀವಿ ಅಂತಿದಾರೆ ಎಂಪಿಇಡಿ ವಿಭಾಗ ಅಧಿಕಾರಿಗಳು :
ದಿನನಿತ್ಯ ಹಲವು ಮಂದಿ ಬಂದು ಹೋಗುವ ಈ ಸಾರ್ವಜನಿಕ ಕಚೇರಿಗೆ ಸುರಕ್ಷತಾ ಗ್ರಿಲ್ ಅಳವಡಿಸಲು ನಿರ್ಲಕ್ಷ್ಯ ತೋರುತ್ತಿರುವುದೇಕೆ? ಎಂದು ಬೆಂಗಳೂರು ವೈರ್, ಎಂಪಿಇಡಿ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, “ಈ ಬಗ್ಗೆ ತಮ್ಮ ಗಮನಕ್ಕೆ ಬಂದಿರಲಿಲ್ಲ. ಸುರಕ್ಷತೆಗಾಗಿ ಸ್ಲೈಡಿಂಗ್ ಕಿಟಕಿ ಜಾಗದಲ್ಲಿ ಗ್ರಿಲ್ ಅಳವಡಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೆವೆ” ಎಂದಷ್ಟೆ ಹೇಳಿದ್ದಾರೆ.
ಅಪಾಯಕ್ಕೆ ನೇರವಾಗಿ ಆಹ್ವಾನ ನೀಡಿದಂತಿರುವ ಈ ಸ್ಥಳದಲ್ಲಿ ಕಿಟಕಿ ಬಳಿ ಕೂರದಂತೆ ಇಲ್ಲಿನ ಸಿಬ್ಬಂದಿ, ಕಚೇರಿಗೆ ಭೇಟಿ ಕೊಡುವವರಿಗೆ ಹೇಳಿ ಹೇಳಿ ಸಾಕಾಗಿ ಕೊನೆಗೆ, Please Do not Sit Here ಎಂಬ ಕಂಪ್ಯೂಟರ್ ಚಿತ್ರವನ್ನು ಕಿಟಕಿಗೆ ಅಂಟಿಸಿ ಕೈ ತೊಳೆದುಕೊಂಡಿದ್ದಾರೆ.