ಬೆಂಗಳೂರು, ಆ.23 www.bengaluruwire.com : ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ವಿರೋಧ ಪಕ್ಷದವರು, ರಾಜ್ಯ ಸರ್ಕಾರದ ಗುತ್ತಿಗೆದಾರರು ಆರೋಪಿಸ್ತಿದ್ರು. ಆದ್ರೆ ರಾಜ್ಯ ಮಟ್ಟಕ್ಕಿಂತ ಸ್ಥಳೀಯ ಆಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲೂ ಕಮಿಷನ್ ಪರ್ಸಂಟೇಜ್ 40ರಿಂದ 50 ಪರ್ಸೆಂಟೇಜ್ ಗೆ ಏರಿಕೆಯಾಗಿದೆಯಂತೆ.
ಅಲ್ಲಿಗೆ ರಾಜ್ಯ ಸರ್ಕಾರದ ಕಾಮಗಾರಿಗಿಂತ ಸ್ಥಳೀಯಾಡಳಿತ ಬಿಬಿಎಂಪಿಯಲ್ಲೇ ಕಾಮಗಾರಿ ಪಡೆಯಲು ಹಾಗೂ ಅದನ್ನು ಮುಗಿಸಿ ಪುನಃ ಹಣ ಪಡೆಯುವ ತನಕ ಶೇ.40 ರಿಂದ 50ರಷ್ಟು ಪರ್ಸಂಟೇಜ್ ಕಮಿಷನ್ ವೆಚ್ಚವಾಗುತ್ತಿದೆ ಎಂದು ಬಿಬಿಎಂಪಿಯ ಗುತ್ತಿಗೆದಾರರು ಆರೋಪಿಸಿದ್ದಾರೆ. ಒಂದು ಕಡೆ ಪರ್ಸೆಂಟೇಜ್ ಜಾಸ್ತಿ ಮತ್ತೊಂದು ಕಡೆ ಬಿಬಿಎಂಪಿಗೆ ಬರುವ ಹೊಸ ಅಧಿಕಾರಿಗಳು ದಿನಕ್ಕೊಂದು ಕಾನೂನು ಜಾರಿಗೆ ತಂದು ಕಾಮಗಾರಿ ಫೈಲ್ ದಾಟುವ ಹಂತಗಳು ಹಿಂದೆ 17 ರಿಂದ 18 ಹಂತಗಳಿದ್ದಿದ್ದು, ಗುತ್ತಿಗೆದಾರರಿಗೆ ಹಣ ಪಾವತಿಗೆ ಮುನ್ನ ಮುಖ್ಯ ಲೆಕ್ಕಾಧಿಕಾರಿಗಳ ಬಿಲ್ ರಿಜಿಸ್ಟರ್ (CBR) ತನಕ 38 ರಿಂದ 39 ಟೇಬಲ್ ಗಳನ್ನು ಈಗ ದಾಟಬೇಕಾಗಿದೆ ಎಂದು ದೂರಿದ್ದಾರೆ.
ಈ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯನಿರತ ಗುತ್ತಿಗೆದಾರರ ಸಂಘ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಪತ್ರವನ್ನು ಮಂಗಳವಾರ ನೀಡಿದ್ದು, ಗುತ್ತಿಗೆದಾರರು ಕಾಮಗಾರಿ ಪಡೆಯಲು ಹಾಗೂ ಬಿಲ್ ಪಡೆದುಕೊಳ್ಳಲು ಹೊಸ ಹೊಸ ನಿಯಮಗಳನ್ನು ಮಾಡಿ ಹೆಚ್ಚುವರಿಯಾಗಿ ಕಚೇರಿಗಳನ್ನು ಸೇರ್ಪಡೆ ಮಾಡುತ್ತಿರುವುದರಿಂದ ಟೇಬಲ್ ಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಗುತ್ತಿಗೆದಾರರ ಆರೋಪದಂತೆ 40 ಪರ್ಸೆಂಟ್ ಕಮಿಷನ್ 50 ಪರ್ಸೆಂಟ್ ಗೆ ಏರಿದೆ. ಹಾಗಾಗಿ ಆ ಕಡತಗಳನ್ನು ಮಂಡಿಸುವ ಕಚೇರಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಪಾಲಿಕೆ ಗುತ್ತಿಗೆದಾರರು ಬೆಂಗಳೂರು ದಕ್ಷಿಣ ವಲಯ ಕಚೇರಿಯಲ್ಲಿ ಪ್ರಗತಿ ಪರಿಶೀಲನೆಯಲ್ಲಿ ತೊಡಗಿದ್ದ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದೆ.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಬಿಬಿಎಂಪಿ ಅನುದಾನದ ಕಾಮಗಾರಿಗಳಿಗೆ ಅಕ್ಟೋಬರ್ 2020ರಿಂದ 3,000 ಕೋಟಿ ರೂ. ಬಿಲ್ ಪಾವತಿ ಬಾಕಿ ಉಳಿದಿದೆ. ಅದೇ ರೀತಿ ಮುಖ್ಯಮಂತ್ರಿಗಳ ನಗರೋತ್ಥಾನ, ನವನಗರೋತ್ಥಾನ ಅನುದಾನ ಕಾಮಗಳ 500 ರಿಂದ 600 ಕೋಟಿ ರೂ. ಬಿಲ್ ಇದೇ ಏಪ್ರಿಲ್ 2022ರಿಂದ ಬಾಕಿಯಿದೆ. ಹೊಸ ಹೊಸ ಕಮಿಷನರ್ ಗಳು ಬಂದಾಗ ಬೇರೆ ಬೇರೆ ನಿಯಮಗಳನ್ನು ಮಾಡಿ, ಹೊಸ ಹೊಸ ಕಚೇರಿಗಳಿಗೆ ಕಡತ ಪರಿಶೀಲಿಸಲು ಆದೇಶ ಹೊರಡಿಸಿದ ಮೇಲಿಂದ ಗುತ್ತಿಗೆದಾರರಿಗೆ ಕಿರುಕುಳ ಹೆಚ್ಚಾಗುತ್ತಿದೆ’ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಬೆಂಗಳೂರು ವೈರ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
‘ಹೊಸ ಹೊಸ ಆದೇಶಗಳಿಂದಾಗಿ ಪ್ರತಿ ಕಚೇರಿಯಲ್ಲೂ ಕಡತಗಳನ್ನು ಸಿದ್ದಪಡಿಸಿ ಮಂಡಿಸುವುದಕ್ಕೆ ಕಮಿಷನ್ ಹೆಚ್ಚುತ್ತಾ ಹೋಗಿ ಮುಖ್ಯಮಂತ್ರಿಗಳ ನಗರೋತ್ಥಾನ, ನವನಗರೋತ್ಥಾನದಂತಹ ಪ್ಯಾಕೇಜ್ ಕಾಮಗಾರಿಗಳ ಕಡತ ವಿಲೇವಾರಿಯಾಗಲು ಒಟ್ಟಾರೆ ಶೇ. 40ರಿಂದ 50ರಷ್ಟು ಪರ್ಸೆಂಟೇಜ್ ನಲ್ಲಿ ಕಮಿಷನ್ ಒಂದೊಂದು ಕಾಮಗಾರಿಗೆ ನೀಡುವಂತಾಗಿದೆ. ಮೊದಲಿಗಿಂತ ಈಗ ಪರ್ಸಂಟೇಜ್ ಜಾಸ್ತಿಯಾಗಿದೆ. ಬಿಬಿಎಂಪಿಯ ಅನುದಾನ ಕಾಮಗಾರಿಗಳ ಪರ್ಸಂಟೇಜ್ 25ರಿಂದ 30ರಷ್ಟು ಕಮಿಷನ್ ನೀಡಬೇಕಿದೆ. ಒಂದು ಕಡತ ವಿಲೇವಾರಿಯಾಗಲು 38 ರಿಂದ 39 ಹಂತಗಳನ್ನು ದಾಟಿ ಬರಬೇಕಿದೆ. ಇದನ್ನು ಕಡಿಮೆ ಮಾಡಬೇಕು ಎಂದು ಮುಖ್ಯ ಆಯುಕ್ತರಿಗೆ ಮಂಗಳವಾರ ಗುತ್ತಿಗೆದಾರರ ಸಂಘ ಮನವಿ ಸಲ್ಲಿಸಿದೆ. ‘ ಎಂದು ಕೆ.ಟಿ.ಮಂಜುನಾಥ್ ವಿವರಿಸಿದ್ದಾರೆ.
ಬೇಡಿಕೆ ಈಡೇರದಿದ್ದರೆ ಕಾಮಗಾರಿ ಸ್ಧಗಿತಗೊಳಿಸಿ ಪ್ರತಿಭಟನೆ :
‘ಇದಕ್ಕೆ ಮುಖ್ಯ ಆಯುಕ್ತರು ಎಲ್ಲಾ ವಲಯದ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಒಂದೊಮ್ಮೆ ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ಬೀದಿಗಿಳಿದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಗುತ್ತಿಗೆದಾರರ ಸಂಘ ಮುಖ್ಯ ಆಯುಕ್ತರಿಗೆ ಬರೆದ ಪತ್ರದಲ್ಲೇನಿದೆ ?
“ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಗುತ್ತಿಗೆದಾರರು ಈಗಾಗಲೇ ಬಾಕಿಯಿರುವ 22 ತಿಂಗಳುಗಳ ಬಿಲ್ ಪಾವತಿಯಾಗದೆ ಸಂಗಷ್ಟದಲ್ಲಿ ಸಿಲುಕಿದ್ದಾರೆ. ಆದರೂ ತಾವುಗಳು ಹೊಸ- ಹೊಸ ಆದೇಶಗಳನ್ನು ಹೊರಡಿಸಿರುವುದು ಗುತ್ತಿಗೆದಾರರ ಆರೋಪದಂತೆ 40 ಪರ್ಸೆಂಟೇಜ್ ಕಮಿಷನ್ ನಿಂದ 50 ಪರ್ಸೆಂಟ್ ಕಮಿಷನ್ ಹಂತಕ್ಕೆ ತಲುಪಿರುತ್ತದೆ. ಪ್ರತಿ ಕಚೇರಿಯಲ್ಲೂ ಕಡತಗಳನ್ನು ಸಿದ್ದಪಡಿಸಿ ಮಂಡಿಸುವುದಕ್ಕೆ ಕಮಿಷನ್ ಹೆಚ್ಚುತ್ತಾ ಹೋಗುತ್ತಿದೆ. ಅದಾಗ್ಯೂ ತಾವುಗಳು ಹೊಸ ಹೊಸ ಕಚೇರಿಗಳಿಗೆ ಕಡತಗಳನ್ನು ಪರಿಶೀಲಿಸಲು ಮಂಡಿಸಲು ಆದೇಶಿರುತ್ತೀರಿ.”
“ಪ್ರತಿ ಹಂತದಲ್ಲೂ ಸಹಾಯಕ ಅಭಿಯಂತರರು (AE), ಸಹಾಯಕ ಕಾರ್ಯಪಾಲಕ ಅಭಿಯಂತರರು (AEE), ಕಾರ್ಯಪಾಲಕ ಅಭಿಯಂತರರು (EE), ಮುಖ್ಯ ಅಭಿಯಂತರರು (CE) ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಕಾಮಗಾರಿಗಳನ್ನು ವೀಕ್ಷಿಸಿ ದೃಢೀಕರಿಸುತ್ತಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಗಳನ್ನು ಪರಿವೀಕ್ಷಿಸಿ ಮತ್ತು ಕಡತಗಳನ್ನು ಪರಿಶೀಲಿಸಿ ಅನುಮೋದಿಸಿದ್ದರೂ ಕೂಡ ಹೆಚ್ಚುವರಿಯಾಗಿ ಬೇರೆ – ಬೇರೆ ಕಚೇರಿಯ ಅಧಿಕಾರಿಗಳಿಂದ ಕಾಮಗಾರಿ ಪರಿವೀಕ್ಷಿಸಲು ಮತ್ತು ಕಡತವನ್ನು ಪರಿಶೀಲಿಸಲು ಆದೇಶಿಸುತ್ತಿರುವುದರಿಂದ ಗುತ್ತಿಗೆದಾರರಿಗೆ ಕಿರುಕುಳ ಹೆಚ್ಚಾಗುತ್ತಿದೆ.”
“ಪಾಲಿಕೆಯ ಮುಖ್ಯ ಆಯುಕ್ತರ ತಾಂತ್ರಿಕ ಜಾಗೃತ ಕೋಶ (TVCC) ವಿಭಾಗದಲ್ಲಿ ಮತ್ತು ಗುಣನಿಯಂತ್ರಣ ವಿಭಾಗದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆಯಿಂದ ಇಡೀ ಬಿಬಿಎಂಪಿಯ ಇಲಾಖೆಗಳ ಕಾಮಗಾರಿಗಳನ್ನು ಪರಿಶೀಲಿಸುವುದು ತಿಂಗಳಾನುಗಟ್ಟಲೆ ಸಮಯ ಬೇಕಾಗುತ್ತದೆ. ಹೀಗಾಗಿ ಗುತ್ತಿಗೆದಾರರಿಗ ಸಕಾಲದಲ್ಲಿ ಬಿ.ಆರ್. (ಬಿಲ್ ರಿಜಿಸ್ಟರ್) ನಮೂದಿಸಲು ತೊಂದರೆಯಾಗುತ್ತದೆ. ಆದ್ದರಿಂದ ತಾವುಗಳು ಈ ಕೂಡಲೇ ಕಡತಗಳನ್ನು ಮಂಡಿಸುವ ಕಚೇರಿಗಳ ಸಂಖ್ಯೆ (TABLES) ಕಡಿಮೆ ಮಾಡಲು ಕೋರಿಕೊಳ್ಳುತ್ತಿದ್ದೇವೆ.”
“ಆದ್ದರಿಂದ ಮೊದಲಿನಂತೆ ಟಿ.ವಿ.ಸಿ.ಸಿ ವಿಭಾಗದವರು ಕಡತವನ್ನು ಪರಿಶೀಲಿಸಿ, ಬಿ.ಆರ್.ನಮೂದಿಸಲು ಎಲ್ಲಾ ಗುತ್ತಿಗೆದಾರರಿಗೆ ಅನುವು ಮಾಡಿಕೊಡಬೇಕು ಎಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ತಾವುಗಳು ನಮ್ಮ ಮನವಿಯನ್ನು ಪರಿಗಣಿಸಿ ಹೆಚ್ಚುತ್ತಿರುವ ಕಚೇರಿಯ ಟೇಬಲ್ ಗಳನ್ನು ಕಡಿತಗೊಳಿಸುತ್ತೀರೆಂದು ನಂಬಿರುತ್ತೇವೆ. ಇಲ್ಲದಿದ್ದ ಪಕ್ಷದಲ್ಲಿ ಎಲ್ಲಾ ಕಾಮಗಾರಿಗಳನ್ನು ಸ್ಧಗಿತಗೊಳಿಸಿ ಬೀದಿಗಿಳಿದು ಪ್ರತಿಭಟಿಸುವುದಾಗಿ ಎಲ್ಲಾ ಗುತ್ತಿಗೆದಾರರು ನಿರ್ಧರಿಸಿರುತ್ತಾರೆ.” ಹೀಗಂತ ಸಂಕ್ಷಿಪ್ತವಾಗಿ ತಮ್ಮ ಮನವಿ ಪತ್ರದಲ್ಲಿ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ತಿಳಿಸಿದೆ.
ಪಾಲಿಕೆ ಕಂಪ್ಯೂಟರ್ ಆಪರೇಟರ್ ಗಳಿಗೂ “ಫೀಸ್” – ಸಂಬಳಕ್ಕಿಂತ ಗಿಂಬಳವೇ ಜಾಸ್ತಿ…!
ವಿವಿಧ ಕಚೇರಿಗಳಲ್ಲಿ ಕಡತ ಸಿದ್ಧಪಡಿಸುವ ಅಧಿಕಾರಿ, ಸಿಬ್ಬಂದಿ ಜೊತೆ ಹೊರ ಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಆಪರೇಪಟರ್ ಗಳು “ಫೀಸ್” ತೆಗೆದುಕೊಳ್ಳದೇ ಫೈಲ್ ಕ್ಲಿಯರ್ ಮಾಡುವುದಿಲ್ಲ. ಅವರಿಗೆ ತಿಂಗಳಿಗೆ 12 ರಿಂದ 15 ಸಾವಿರ ಬರುವ ಸಂಬಂಳಕ್ಕಿಂತ ನಾಲ್ಕೈದು ಪಟ್ಟು ಹಣ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರೊಬ್ಬರು ವಾಸ್ತವ ಬಿಚ್ಚಿಟ್ಟಿದ್ದಾರೆ.
ಸದ್ಯ ಈಗಾಗಲೇ ಪಾಲಿಕೆ ಟೆಂಡರ್ ಪಡೆದುಕೊಂಡ ಖಾಸಗಿ ಯೋಜನೆ ನಿರ್ವಹಣಾ ಸಲಹೆಗಾರರಿಂದ (Project Management Consultant) ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿ ಗುಣಮಟ್ಟ, ಕಾಮಗಾರಿ ಅಳತೆ ಸೇರಿದಂತೆ ಎಲ್ಲಾ ಹಂತಗಳ ಪರಿಶೀಲನೆ ನೆಡೆಸಿ ಪಾಲಿಕೆಗೆ ವರದಿ ಸಿದ್ಧಪಡಿಸಿ ದೃಢೀಕರಿಸುತ್ತದೆ. ಆದರೆ ಮತ್ತೆ ಹೊಸದಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುಣಮಟ್ಟ ನಿಯಂತ್ರಣ ವಿಭಾಗದಿಂದಲೂ ವರದಿ ಪಡೆಯಬೇಕು ಎಂದು ಹೊಸ ಆದೇಶ ಮಾಡಲಾಗಿದೆ.
ಇನ್ನೊಂದೆಡೆ ಕಾಮಗಾರಿ ಬಿಲ್ ಸಲ್ಲಿಕೆಯಾದ ನಂತರ ವಿವಿಧ ಕಾಮಗಾರಿಗಳ ಶೇ.10ರಷ್ಟು ಕಾಮಗಾರಿಗಳನ್ನು ಪುನಃ ಪರಿಶೀಲನೆ ನಡೆಸಲಾಗುತ್ತಿದೆ. ಈ ರೀತಿ ಮಾಡಿದರೆ ಗುತ್ತಿಗೆದಾರರ ಕಥೆ ಏನಾಗಬೇಡ. ಶೇ.40 ರಿಂದ 50ರಷ್ಟು ಕಮಿಷನ್ ಹಣವನ್ನು ಕೊಟ್ಟು ಗುಣಮಟ್ಟ ನಿರೀಕ್ಷೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಮುಖ್ಯ ಆಯುಕ್ತರನ್ನು ಭೇಟಿ ಮಾಡಿದಾಗ ಗುತ್ತಿಗೆದಾರರೊಬ್ಬರು ಹೀಗೆ ಪ್ರಶ್ನೆ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಬಿಬಿಎಂಪಿಗೆ ಮುಖ್ಯ ಆಯುಕ್ತರಾಗಿ ನಿಯೋಜನೆಗೊಂಡ ನಂತರ ಬಿಬಿಎಂಪಿ ಆಡಳಿತ ಸುಗಮಗೊಳಿಸುವ ವಿಚಾರದಲ್ಲಿ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ನಾಗರೀಕ ಸೌಲಭ್ಯ ಕಲ್ಪಿಸುವಲ್ಲಿ ಸಾಕಷ್ಟು ಸುಧಾರಣಾ ಕ್ರಮ ಕೈಗೊಂಡಿರುವ ತುಷಾರ್ ಗಿರಿನಾಥ್ ಅವರು, ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.