ಬೆಂಗಳೂರು, ಆ.23 www.bengaluruwire.com : ಗಣೇಶ ಚತುರ್ಥಿ ಅಂಗವಾಗಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗಳನ್ನೊಳಗೊಂಡತೆ ಏಕಾಗವಾಕ್ಷಿ ವ್ಯವಸ್ಥೆಯಲ್ಲಿ ಅನುಮತಿ ನೀಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮಂಗಳವಾರ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮುಂಬರುವ ಗಣೇಶ ಚತುರ್ಥಿ, ಮತದಾರರ ಕರಡು ಪಟ್ಟಿ ಪ್ರಕಟ, ರಸ್ತೆ ಅಭಿವೃದ್ಧಿ, ಕಸ ವಿಲೇವಾರಿ, ಸಹಾಯ್.2 ತಂತ್ರಾಂಶದಲ್ಲಿ ದೂರುಗಳ ಬಗೆಹರಿಸುವಿಕೆ, ಕಟ್ಟಡ ಅಥವಾ ಕಾಮಗಾರಿಗಳ ತ್ಯಾಜ್ಯ, ಬೀದಿ ಬದಿ ವ್ಯಾಪಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪರಿಶೀಲನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಆಯುಕ್ತರು, ಬೆಂಗಳೂರಿನಲ್ಲಿ ಅತಿಹೆಚ್ಚು ಗಣೇಶ ವಿಸರ್ಜನೆಯಾಗುವ ಬೆಂಗಳೂರು ದಕ್ಷಿಣ ವಲಯ ವ್ಯಾಪ್ತಿಯಲ್ಲಿನ ಕಲ್ಯಾಣಿಗಳ ಬಳಿ ಬ್ಯಾರಿಕೇಡಿಂಗ್, ಈಜುಗಾರರು, ಕಾಯುವ ಸ್ಥಳದ ವ್ಯವಸ್ಥೆ ಸೇರಿದಂತೆ ಇನ್ನಿತರೆ ಅಗತ್ಯ ವ್ಯವಸ್ಥೆಯನ್ನು ಸರಿಯಾಗಿ ಮಾಡಿಕೊಳ್ಳಬೇಕು. ಅಲ್ಲದೆ ಪ್ರಮುಖ ಸ್ಥಳಗಳಲ್ಲಿ ಮೊಬೈಲ್ ಟ್ಯಾಂಕರ್ ಗಳ ವ್ಯವಸ್ಥೆ ಮಾಡಿರುವ ಸ್ಥಳಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಪ್ರಚುರ ಪಡಿಸಬೇಕು ಎಂದು ಸೂಚನೆ ನೀಡಿದರು.
ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ನಾಗರಿಕರಲ್ಲಿ ಅರಿವು ಮೂಡಿಸಬೇಕು. ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸದಂತೆ, ಪ್ಲಾಸ್ಟಿಕ್ ಕವರ್ ಬಳಸದಂತೆ ಹಾಗೂ ಫ್ಲೆಕ್ಸ್ ಹಾಕಂದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಮತದಾರರ ಪಟ್ಟಿ ಕರಡು ತ್ವರಿತವಾಗಿ ಪ್ರಕಟಗೊಳಿಸಿ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಗಸ್ಟ್ 25 ರಂದು ಮತದಾರರ ಪಟ್ಟಿಯ ಕರಡು ಪ್ರಕಟಗೊಳಿಸಬೇಕಿದ್ದು, ಈ ಪೈಕಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯಕ್ರಮಗಳನ್ನು ಕೈಗೊಂಡು ನಿಗದಿತ ವೇಳೆಗೆ ಮತದಾರರ ಪಟ್ಟಿಯ ಕರಡು ಪ್ರಕಟಗೊಳಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.
ಮತದಾರರ ಪಟ್ಟಿಯ ಕರಡು ಪ್ರಕಟಿಸುವುದಕ್ಕೂ ಮುನ್ನ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಯಾವುದೇ ಸಮಸ್ಯೆ ಆಗದಂತೆ ಮತದಾರರ ಪಟ್ಟಿಯ ಕರಡನ್ನು ಅಂತಿಮಗೊಳಿಸಬೇಕು. ಜೊತೆಗೆ ಮತದಾರರ ಪಟ್ಟಿ ಕರಡು ಅಂತಿಮವಾದ ಬಳಿಕ ಪ್ರತಿಯನ್ನು ಪಾಲಿಕೆಯ ಅಂತರ್ಜಾಲ ತಾಣದ ಜೊತೆಗೆ ನೋಂದಾಯಿತ ರಾಜಕೀಯ ಪಕ್ಷಗಳು ಹಾಗೂ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳಿಗೆ ನೀಡುವಂತೆ ಸೂಚಿಸಿದರು.
ಸಹಾಯ 2.0 ತಂತ್ರಾಂಶದಲ್ಲಿನ ದೂರುಗಳಿಗೆ ತ್ವರಿತವಾಗಿ ಬಗೆಹರಿಸಿ:
ಪಾಲಿಕೆಯ ಸಹಾಯ .20 ತಂತ್ರಾಂಶದಲ್ಲಿ ಬರುವ ದೂರುಗಳನ್ನು ತ್ವರಿತವಾಗಿ ಬಗೆಹರಿಸಲು ಮುಖ್ಯ ಆಯುಕ್ತರು ಸೂಚನೆ ನೀಡಿದರು. ಈ ತಂತ್ರಾಂಶದಲ್ಲಿ ಪ್ರಮುಖವಾಗಿ ವಿದ್ಯುತ್ ದೀಪಗಳನ್ನು ಸರಿಪಡಿಸುವುದು ಅಥವಾ ಅಳವಡಿಸುವುದು. ಬೀದಿ ನಾಯಿಗಳನ್ನು ನಿಯಂತ್ರಿಸುವ, ರಸ್ತೆ ಬದಿ ಕಸ ಬಿಸಾಡುವ, ರಸ್ತೆ ಗುಂಡಿಗಳನ್ನು ಮುಚ್ಚುವ, ಪಾದಚಾರಿ ಮಾರ್ಗಗಳ ದುರಸ್ತಿಪಡಿಸುವುದು. ಅನಧಿಕೃತವಾಗಿ ಓ.ಎಫ್.ಸಿ ಕೇಬಲ್ ಗಳನ್ನು ಅಳವಡಿಸುತ್ತಿರುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ದೂರುಗಳು ಬರುತ್ತವೆ. ತ್ವರಿತವಾಗಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಪ್ರಮುಖ ರಸ್ತೆಗಳ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವಂತಿಲ್ಲ. ಈ ಸಂಬಂಧ ಪಾದಚಾರಿ ಮಾರ್ಗಗಳಲ್ಲಿ ಶಾಶ್ವತ ಕಟ್ಟಡಗಳನ್ನು ನಿರ್ಮಿಸಿದ್ದರೆ ಕೂಡಲೆ ತೆರವುಗೊಳಿಸಬೇಕು. ಜೊತೆಗೆ ನಗರದ ಹೊರ ವರ್ತುಲ ರಸ್ತೆಗಳಲ್ಲಿ ವಾಹನಗಳು ಪಾರ್ಕಿಂಗ್ ಮಾಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಸಭೆಯಲ್ಲಿ ವಲಯ ಆಯುಕ್ತರಾದ ಜಯರಾಮ ರಾಯಪುರ, ಜಂಟಿ ಆಯುಕ್ತರಾದ ಜಗದೀಶ್ ನಾಯಕ್, ಮುಖ್ಯ ಅಭಿಯಂತರರಾದ ಮೋಹನ್ ಕೃಷ್ಣಾ, ಉಪ ಆಯುಕ್ತರಾದ ಲಕ್ಷ್ಮೀದೇವಿ, ಕಾರ್ಯಪಾಲಕ ಅಭಿಯಂತರರು, ವಲಯ ಆರೋಗ್ಯಾಧಿಕಾರಿ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.