ಬೆಂಗಳೂರು, ಆ.22 www.bengaluruwire.com : ನೀವು ನಾವು ದಿನಂಪ್ರತಿ ಬೇರೆ ಬೇರೆ ಕಾರಣಕ್ಕೆ ಹಣದ ವಹಿವಾಟಿಗಾಗಿ ಬಳಸುವ ಯುಪಿಐ (Unified Payment Interface- UPI) ಡಿಜಿಟಲ್ ಪಾವತಿ (#Digital Payment) ಸೇವೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.
ಯುಪಿಐ ಡಿಜಿಟಲ್ ಹಣಪಾವತಿ ವ್ಯವಸ್ಥೆ ಸೇವೆ ಒದಗಿಸುತ್ತಿರುವವರು ಗ್ರಾಹಕರ ಮೇಲೆ ಹಣ ಪಾವತಿ ಸೇವೆಗೆ ಶುಲ್ಕ ವಿಧಿಸುವ ಬದಲು ಬೇರೆ ವಿಧಾನದಿಂದ ಹಣ ಸಂಗ್ರಹಿಸಬೇಕು. ಯುಪಿಐ ಒಂದು ಸಾರ್ವಜನಿಕ ಅನುಕಾಲಕ್ಕಾಗಿ ಕಲ್ಪಿಸಿರುವ ಸೇವೆಯಾಗಿದ್ದು, ಇದರಿಂದ ಆರ್ಥಿಕತೆಯ ಉತ್ಪನ್ನಗಳ ವೃದ್ಧಿಗೆ ಸಹಾಯಕವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಗೆ ಕೇಂದ್ರ ಸರ್ಕಾರ ಕಳೆದ ವರ್ಷ ಹಣಕಾಸು ಬೆಂಬಲ ಒದಗಿಸಿತ್ತು. ಅದೇ ರೀತಿ ಈ ವರ್ಷವೂ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರೊತ್ಸಾಹಿಸಲು ಹಣಕಾಸು ಒದಗಿಸಲಿದೆ. ಈ ಯುಪಿಐ ಡಿಜಿಟಲ್ ಹಣ ಪಾವತಿ ವ್ಯವಸ್ಥೆಯು ಮಿತವ್ಯಯಕಾರಿಯೂ ಹಾಗೂ ಬಳಕೆದಾರರ ಸ್ನೇಹಿ ವ್ಯವಸ್ಥೆಯಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಅಧಿಕೃತ ಟ್ವೀಟ್ ನಲ್ಲಿ ತಿಳಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಯುಪಿಐ ಪಾವತಿ ಹಾಗೂ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರತಿಕ್ರಿಯೆನ್ನು ಆಹ್ವಾನಿಸಿತ್ತು. ಇದಾದ ಬಳಿಕ ಕೇಂದ್ರ ಹಣಕಾಸು ಸಚಿವಾಲಯ ಈ ಸ್ಪಷ್ಟನೆ ನೀಡಿದೆ.
‘ಆರ್ ಬಿಐ ಯುಪಿಐ ವಹಿವಾಟಿಗಾಗಿ ಶುಲ್ಕ ವಿಧಿಸುವ ಕುರಿತಂತೆ ಯಾವುದೇ ಸೂಚನೆಯನ್ನು ನೀಡಿಲ್ಲ. 1 ಜನವರಿ 2020ರಿಂದಲೇ ಕೇಂದ್ರ ಸರ್ಕಾರ ಯುಪಿಐ ವಹಿವಾಟಿನ ಮೇಲೆ ಯಾವುದೇ ಶುಲ್ಕವನ್ನು ಬಳಕೆದಾರರು ಮತ್ತು ವ್ಯಾಪಾರಿಗಳಿಗೆ ವಿಧಿಸದಂತೆ ಆದೇಶ ಹೊರಡಿಸಿತ್ತು. ಆರ್ ಬಿಐ ಯುಪಿಐ ಪಾವತಿ ಹಾಗೂ ಶುಲ್ಕ ವಿಚಾರಕ್ಕೆ ಸಾರ್ವಜನಿಕ ಪ್ರತಿಕ್ರಿಯೆಗಾಗಿ ಚರ್ಚೆಯ ಕಾರಣಕ್ಕೆ ಯುಪಿಐ ಪಾವತಿ ವ್ಯವಸ್ಥೆಗೆ ಶುಲ್ಕ ವಿಚಾರದಲ್ಲಿ ಈ ಪ್ರಶ್ನೆಯನ್ನು ಆರ್ ಬಿಐ ಎತ್ತಿತ್ತೇ ವಿನಃ, ಶುಲ್ಕ ವಿಚಾರದಲ್ಲಿ ಯಾವುದೇ ಸೂಚನೆಯನ್ನು ನೀಡಿಲ್ಲ’ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಜುಲೈ ತಿಂಗಳೊಂದರಲ್ಲೇ 628 ಕೋಟಿ ವಹಿವಾಟು – ನೂತನ ದಾಖಲೆ :
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿರುವ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯು ದೇಶದಲ್ಲಿ ಎಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ ಎಂದರೆ, ಈ ವರ್ಷದ ಜುಲೈ ತಿಂಗಳಲ್ಲಿ ಸರಾಸರಿಯಾಗಿ ಪ್ರತಿದಿನ 20 ಕೋಟಿ ವಹಿವಾಟುಗಳು ನಡೆದಿದೆ. ಒಟ್ಟಾರೆ ಈ ಒಂದು ತಿಂಗಳಲ್ಲೇ 628 ಕೋಟಿ (6.28 ಬಿಲಿಯನ್) ವಹಿವಾಟುಗಳು ನಡೆದಿದೆ. 2016ರಲ್ಲಿ ಯುಪಿಐ ಡಿಜಿಟಲ್ ಪಾವತಿ ಸೇವೆ ಆರಂಭವಾಗಿನಿಂದ ಇದೊಂದು ಹೊಸ ದಾಖಲೆಯಾಗಿದೆ. ದಿನೇ ದಿನೇ ಸಾಮಾನ್ಯ ಜನರು ತಮ್ಮ ದಿನನಿತ್ಯದ ವಸ್ತು, ಸರಕು- ಸೇವೆಗಳ ಹಣಕಾಸು ವಹಿವಾಟಿಗೆ ಯುಪಿಐ ಸೇವೆಯನ್ನು ಬಳಸುವುದು ಹೆಚ್ಚಾಗುತ್ತಿದೆ. ಇದೇ ಹೊತ್ತಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಯುಪಿಐ ಸೇವೆಗೆ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿರುವುದು ಯುಪಿಐ ಸೇವೆ ಬಳಕೆದಾರರು ನಿಟ್ಟುಸಿರು ಬಿಡುವಂತಾಗಿದೆ.