ಬೆಂಗಳೂರು, ಆ.22 www.bengaluruwire.com : ನಾಡಿನ ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾದ ಗುರುಲಿಂಗಸ್ವಾಮಿ ಹೂಳಿಮಠ ಅವರು ಇಂದು ಬೆಳಗ್ಗೆ ಅಕಾಲಿಕವಾಗಿ ನಿಧನರಾಗಿದ್ದಾರೆ. ಕಾರ್ಯನಿರತ ಪತ್ರಕರ್ತರಿಗೆ ಈ ಸುದ್ದಿಯು ಬರಸಿಡಿಲಿನಂತೆ ಬಂದರೆಗಿದಂತಾಗಿದೆ.
ಹಲವು ವರ್ಷಗಳಿಂದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಅನುಭವಗಳಿಸಿದ್ದ ಗುರುಲಿಂಗಸ್ವಾಮಿ ಈ ಹಿಂದೆ ಬಸವರಾಜ ಬೊಮ್ಮಾಯಿಯವರು ಗೃಹ ಸಚಿವರಾಗಿದ್ದಾಗಿನಿಂದ ಅವರ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು. ತದನಂತರ ಬೊಮ್ಮಾಯಿ ಮುಖ್ಯಮಂತ್ರಿಗಳಾದ ಮೇಲೆ ಸಿಎಂ ಅವರ ಅಧಿಕೃತ ಮಾಧ್ಯಮ ಸಂಯೋಜಕ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಮುಖ್ಯಮಂತ್ರಿಗಳ ಪ್ರತಿದಿನ ಕಾರ್ಯಚಟುವಿಟಿಕೆಗಳು, ಭೇಟಿ ನೀಡಿದ ಕಾರ್ಯಕ್ರಮ, ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳನ್ನು ಚಾಚೂ ತಪ್ಪದೆ, ವಸ್ತುಸ್ಥಿತಿಗೆ ಕನ್ನಡಿ ಹಿಡಿದಂತೆ ಸುದ್ದಿಯನ್ನು ಮಾಧ್ಯಮ ಮಿತ್ರರಿಗೆ ತಲುಪುವಲ್ಲಿ ಯಶಸ್ವಿಯಾಗಿದ್ದರು.
ತಮ್ಮ ಕಾರ್ಯವೈಖರಿಯಿಂದಲೇ ಅಪಾರ ಪತ್ರಕರ್ತ ಮಿತ್ರರನ್ನು ಹೊಂದಿದ್ದ ಗುರುಲಿಂಗಸ್ವಾಮಿ ಹೂಳಿಮಠ ಸ್ವಭಾವತಃ ನಗುಮೊಗದ ಹಾಗೂ ಎಲ್ಲರೊಂದಿಗೆ ಬೆರೆಯುವ ಉತ್ತಮ ವ್ಯಕ್ತಿಯಾಗಿದ್ದರು. ಸೋಮವಾರ ಬೆಳಗ್ಗೆ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ತದನಂತರ ಅವರನ್ನು ಹತ್ತಿರ ನಾಗರಬಾವಿಯ ಯುನಿಟಿ ಲೈಫ್ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರು ಎಳೆದಿದ್ದಾರೆ. ಇತ್ತೀಚೆಗೆ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದ ಗುರುಲಿಂಗಸ್ವಾಮಿ ಅವರು, ಇದೇ ಅವರ ಸಾವಿಗೆ ಕಾರಣ ಎನ್ನಲಾಗಿದೆ.
ಮೂಲತಃ ಉತ್ತರ ಕರ್ನಾಟಕದವರಾದ ಗುರುಲಿಂಗಸ್ವಾಮಿ ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆ ಹಾಗೂ ಈಟಿವಿ ಮತ್ತಿತರ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾಗ ರಾಜಕೀಯ ವರದಿಗಾರಿಕೆ, ವಿಶ್ಲೇಷಣೆ ಸೇರಿದಂತೆ ಗಂಭೀರವಾದ ಸುದ್ದಿಗಳನ್ನು ನೀಡಿ ನಾಡಿನೆಲ್ಲೆಡೆ ಮನೆ ಮಾತಾಗಿದ್ದರು. ಅವರ ಅಕಾಲಿಕ ಮರಣವು ಮಾಧ್ಯಮ ಲೋಕಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ.