ಬೆಂಗಳೂರು, ಆ.18 www.bengaluwire.com : ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಸುರಂಗ ಕೊರೆಯುತ್ತಿರುವ ವಿಂಧ್ಯಾ ಟಿಬಿಎಂ ಯಂತ್ರ ಗುರುವಾರ ಯಶಸ್ವಿಯಾಗಿ 900 ಮೀಟರ್ ಸುರಂಗ ಕೊರೆದು ಪಾಟರಿ ಟೌನ್ ನಿಲ್ದಾಣದಲ್ಲಿ ಹೊರಬಂದಿತು. ಇದು ಸುರುಂಗ ನಿರ್ಮಾಣ ಕಾರ್ಯದಲ್ಲಿ ಕಾರ್ಯನಿರತರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು, ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದೆ.
ಈ ವರ್ಷದ ಫೆಬ್ರವರಿ 15ರಂದು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಪಾಟವರಿ ಟೌನ್ ನಿಲ್ದಾಣದವರೆಗೆ ವಿಂಧ್ಯಾ ಸುರಂಗ ಕೊರೆಯುವ ಯಂತ್ರವು 900 ಮೀಟರ್ ಭೂಮಿಯಡಿಯಲ್ಲಿ ರೈಲು ಮಾರ್ಗ ನಿರ್ಮಾಣಕ್ಕಾಗಿ ಸುರಂಗ ಕೊರೆಯುವುದನ್ನು ಆರಂಭಿಸಿ, ಕೇವಲ 184 ದಿನಗಳಲ್ಲಿ ಯಶಸ್ವಿಯಾಗಿ ಪಾಟರಿ ಟೌನ್ ನಿಲ್ದಾಣದ ವರೆಗೆ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.
ವಿಂಧ್ಯಾ ಟಿಬಿಎಂ ಯಂತ್ರವು ಇಲ್ಲಿಯ ತನಕ ಒಟ್ಟು 1,755 ಮೀಟರ್ (1.75 ಕಿ.ಮೀ) ಸುರಂಗವನ್ನು ಕೊರೆದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ವಿಂಧ್ಯಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡಿದ್ದಕ್ಕೆ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅಧಿಕಾರಿ ಮತ್ತು ಸಿಬ್ಬಂದಿವರ್ಗಕ್ಕೆ ಅಭಿನಂದಿಸಿದ್ದಾರೆ.