ಬೆಂಗಳೂರು, ಆ.14 www.bengaluruwire.com : ಮುದ್ರಣ ಮಾಧ್ಯಮ ಅತ್ಯಂತ ಶ್ರೇಷ್ಠವಾದದ್ದು. ಅದರ ಮೌಲ್ಯ ಕುಸಿಯದಂತೆ ನೋಡಿಕೊಳ್ಳುವ ಹೊಣೆ ಇಂದಿನ ಪೀಳಿಗೆಯ ಮೇಲಿದೆ ಎಂದು ಹಿರಿಯ ಪತ್ರಕರ್ತರೂ, ‘ಜನಪ್ರಗತಿ’ಯ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮ ರಾವ್ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸ್ವಾತಂತ್ರ್ಯದ ಅಮೃತೋತ್ಸವದ ಅಂಗವಾಗಿ ಪತ್ರಿಕೋದ್ಯಮದ ಹಿರಿಯರಿಗೆ ಅವರ ಮನೆಯ ಅಂಗಳದಲ್ಲೇ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಸರಣಿಯ ಮೊದಲ ಕಾರ್ಯಕ್ರಮವಾಗಿ ಕಲ್ಲೆ ಶಿವೋತ್ತಮ ರಾವ್ ಅವರನ್ನು ಬೆಂಗಳೂರಿನ ಅವರ ಯಲಹಂಕ ನಿವಾಸದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಭಾನುವಾರ ಸನ್ಮಾನಿಸಲಾಯಿತು.
ಮುದ್ರಿತವಾದದ್ದು ಒಂದು ದಾಖಲೆಯಿದ್ದಂತೆ. ಹಾಗಾಗಿ ಓದುಗರಿಗೆ ಅದರ ಮೇಲೆ ನಂಬಿಕೆ ಹೆಚ್ಚು. ಆ ನಂಬಿಕೆಯನ್ನು ಉಳಿಸಿಕೊಳ್ಳಲು ಇಂದಿನ ಪತ್ರಿಕೋದ್ಯಮ ಶ್ರಮಿಸಬೇಕಾಗಿದೆ. ನಾನು ನನ್ನ ಇಡೀ ಬದುಕಿನಲ್ಲಿ ನುಡಿದಂತೆ ನಡೆದಿದ್ದೇನೆ. ದಲಿತರು, ಹಿಂದುಳಿದವರಿಗೆ, ದುರ್ಬಲರಿಗೆ ದನಿ ನೀಡಲು ಶ್ರಮಿಸಿದ್ದೇನೆ. ಇದು ನನಗೆ ಧನ್ಯತೆಯನ್ನು ನೀಡಿದೆ. ಬದುಕು ಸಿದ್ಧಾಂತ ಎರಡನ್ನೂ ಒಟ್ಟಿಗೆ ಕೊಂಡೊಯ್ದಿದ್ದೇನೆ ಎಂಬ ಹೆಮ್ಮೆ ಇದೆ ಎಂದು ಕಲ್ಲೆ ಶಿವೋತ್ತಮ ರಾವ್ ಅಭಿಪ್ರಾಯಪಟ್ಟರು.
ಲೋಹಿಯಾ, ಗೋಪಾಲಗೌಡ, ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರ ಜೊತೆಗೆ ಒಡನಾಡಿದ ನನಗೆ ಪತ್ರಿಕೋದ್ಯಮ ಎನ್ನುವುದು ಜನ ಸಮುದಾಯಕ್ಕೆ ಸಮಾನತೆಯನ್ನು ತಂದುಕೊಡುವ ಒಂದು ಸೇತುವೆಯಾಗಿತ್ತು. ಹಾಗಾಗಿ ನನ್ನ ಪತ್ರಿಕೆಯ ಮೂಲಕ ಅದನ್ನು ಮಾಡಲು ಶ್ರಮಿಸಿದ್ದೇನೆ ಎಂದರು.
ಇಷ್ಟೆಲ್ಲಾ ಮಾಡಿದ ನನ್ನನ್ನು ಇಂದಿನ ಪೀಳಿಗೆ ನೆನಪಿಟ್ಟುಕೊಂಡಿಲ್ಲವೇನೋ ಎಂದುಕೊಳ್ಳುತ್ತಿರುವಾಗ ಕಾರ್ಯ ನಿರತ ಪತ್ರಕರ್ತರ ಸಂಘ ಮನೆಗೇ ಬಂದು ನನಗೆ ಗೌರವಿಸಿದ್ದು ನನಗೆ ಮನದುಂಬಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟಪತಿ ಹುದ್ದೆಗೆ ಒಬ್ಬ ಹೆಣ್ಣು ಮಗಳು ಶ್ರೀಮತಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿರುವ ಕಾರಣ, ರಾಷ್ಟ್ರಪತಿ ಬದಲಿಗೆ ರಾಷ್ಟ್ರಾಧ್ಯಕ್ಷೆ ಎಂದು ಸಂಬೋದಿಸುವುದು ಸೂಕ್ತ ಎಂದು ಹೇಳಿದರು.
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ್, ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್, ಕಂಕ ಮೂರ್ತಿ, ಪುತ್ರ ಅಜಿತ್ ಅಶುತೋಷ್ ಕಲ್ಲೆ ಈ ಸಂದರ್ಭದಲ್ಲಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ ಸ್ವಾಗತಿಸಿದರು. ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ಕೆ.ವಿ.ಪರಮೇಶ್, ದೇವರಾಜ್ ಹಾಜರಿದ್ದರು.