ಬೆಂಗಳೂರು, ಆ.12 www.bengaluruwire.com : ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ನಮ್ಮ ಮೆಟ್ರೊ ಆ.13 ರಿಂದ 15ರವರೆಗೆ ಲಾಲ್ ಬಾಗ್ ನಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಹೋಗಿಬರುವ ಸಾರ್ವಜನಿಕರಿಗಾಗಿ ಟಿಕೆಟ್ ದರದಲ್ಲಿ ರಿಯಾಯಿತಿ ಘೋಷಿಸಿದೆ.
ಲಾಲ್ ಬಾಗ್ ಮೆಟ್ರೊ ಸ್ಟೇಷನ್ ನಿಂದ ನಗರದ ಯಾವುದೇ ಮೆಟ್ರೋ ಸ್ಟೇಷನ್ ಗೆ ವಾಪಸ್ ತೆರಳಲು ಈ ಮೂರು ದಿನಗಳಂದು ಬೆಳಗ್ಗೆ 10ರಿಂದ ಸಂಜೆ 8ಗಂಟೆವರೆಗೆ ಪೇಪರ್ ಟಿಕೆಟ್ ವಿತರಿಸಿಲಿದ್ದು, 30 ರೂ. ದರವನ್ನು ನಿಗಧಿಪಡಿಸಿದೆ. ಈ ಟಿಕೆಟ್ ಆ ದಿನ ಖರೀದಿಸಿದ ಒಂದು ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ನಮ್ಮ ಮೆಟ್ರೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೇಲೆ ತಿಳಿಸಿದ ದಿನಗಳಲ್ಲಿ ಎಲ್ಲಾ ಮೆಟ್ರೊ ಸ್ಟೇಷನ್ ಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಲಾಲ್ ಬಾಗ್ ಗೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ಖರೀದಿಸಬಹುದು. ಎಲ್ಲಾ ಮೆಟ್ರೊ ಪ್ರಯಾಣಿಕರು ತ್ವರಿತ ಪ್ರಯಾಣಕ್ಕಾಗಿ ರಿಟರ್ನ್ ಜರ್ನಿ ಪೇಪರ್ ಟಿಕೇಟುಗಳನ್ನು ಖರೀದಿಸಲು ಕೋರಿದ್ದಾರೆ. ಲಾಲ್ ಬಾಗ್ ನಿಲ್ದಾಣ ಪ್ರವೇಶಿಸಲು ಹಾಗೂ ಬೇರೆ ನಿಲ್ದಾಣಗಳಿಂದ ನಿರ್ಗಮಿಸಲು ಪೇಪರ್ ಟಿಕೆಟ್ ಹಾಜರುಪಡಿಸಲು ಅಗತ್ಯವಾಗಿರುತ್ತದೆ.
ಯಾವುದೇ ನಿಲ್ದಾಣದಿಂದ ಲಾಲ್ ಬಾಗ್ ಮೆಟ್ರೊ ನಿಲ್ದಾಣಕ್ಕೆ ಪ್ರವೇಶಿಸಲು ಚಾಲ್ತಿಯಲ್ಲಿ ಇರುವ ದರದಲ್ಲಿ ಟೋಕನ್ ಹಾಗೂ ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣಿಸಬೇಕಾಗಿರುತ್ತದೆ. ಸ್ಮಾರ್ಟ್ ಕಾರ್ಡ್ ಪ್ರಯಾಣಕ್ಕೆ ಚಾಲ್ತಿಯಲ್ಲಿರುವ ರಿಯಾಯಿತಿ ದರವು ಅನ್ವಯವಾಗುತ್ತದೆ.