ಬೆಂಗಳೂರು, ಆ.11 www.bengaluruwire.com : ನಾಡಿನಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ರಾಜ್ಯದ ಪ್ರಮುಖ ಜಲಾಶಯಗಳು ತಮ್ಮ ಗರಿಷ್ಠ ಸಾಮರ್ಥ್ಯದ ಸಮೀಪ ತುಂಬಿ ಹರಿಯುತ್ತಿದೆ. ಲಿಂಗನಮಕ್ಕಿ ಜಲಾಶಯ ದಿನೇ ದಿನೇ ತುಂಬಿ ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುವುದು. ಹಾಗಾಗಿ ಜಲಾಶಯದ ಕೆಳದಂಡೆ ಪ್ರದೇಶ ಹಾಗೂ ಶರಾವತಿ ನದಿಪಾತ್ರದ ಉದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ಬೇರೆ ಸುರಕ್ಷಿತ ಸ್ಥಳದತ್ತ ಸ್ಥಳಾಂತರಗೊಳ್ಳಬೇಕೆಂದು ಕರ್ನಾಟಕ ವಿದ್ಯುತ್ ನಿಗಮ (KPCL) ಎರಡನೇ ಬಾರಿಗೆ ಮುನ್ನಚ್ಚರಿಕೆ ನೀಡಿದೆ.
ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ದಿನೇ ದಿನೇ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಆ.09ರಂದು ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1807 ಅಡಿಗಳಷ್ಟಿದ್ದು, ನೀರಿನ ಒಳಹರಿವಿನ ಪ್ರಮಾಣ 67,000 ಕ್ಯೂಸೆಕ್ಸ್ ಆಗಿದೆ. ಜಲಾಶಯಕ್ಕೆ ನೀರು ಹರಿದು ಬರುವ ಪ್ರಮಾಣ ಇದೇ ರೀತಿ ಮುಂದುವರೆದಲ್ಲಿ ಅತಿ ಶೀಘ್ರದಲ್ಲೇ ರಿಸರ್ವಾರಿಯರ್ ತನ್ನ ಗರಿಷ್ಠ ಮಟ್ಟ 1,819 ಅಡಿಗಳಷ್ಟು ತಲುಪುವ ಸಾಧ್ಯತೆಯಿದೆ.
ಆದ್ದರಿಂದ ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಲಾಗುತ್ತದೆ. ಹಾಗಾಗಿ ಕೆಳದಂಡೆಯಲ್ಲಿ ಹಾಗೂ ಶರಾವತಿ ನದಿಪಾತ್ರದ ಪ್ರದೇಶದಲ್ಲಿ ನೆಲೆಸಿರುವ ನಾಗರೀಕರು ತಮ್ಮ ಜಾನುವಾರು, ಅಗತ್ಯ ಸಾಮಾನು ಸರಂಜಾಮುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕೆಂದು ಕೆಪಿಸಿಲ್ ಪತ್ರಕಾ ಪ್ರಕಟಣೆಯಲ್ಲಿ ವಿವರಿಸಿದೆ.