ರಾಯಚೂರು, ಆ.11 www.bengaluruwire.com : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ರಾಯರ ದರ್ಶನ ಮಾಡಿದರು. ತದನಂತರ ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ಆಶೀರ್ವಾದ ಪಡೆದರು.
ಬಿ.ಎಸ್ ಯಡಿಯೂರಪ್ಪನವರೊಂದಿಗೆ ಸಂಸದರಾದ ಶ್ರೀ ಬಿ. ವೈ ರಾಘವೇಂದ್ರ ಅವರು ಹಾಗೂ ಸಹೋದರ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಬಿ. ವೈ ವಿಜಯೇಂದ್ರ ಅವರು ಕುಟುಂಬ ಸಮೇತವಾಗಿ ಶ್ರೀ ರಾಯರ ದರ್ಶನವನ್ನು ಪಡೆದು, ಭಕ್ತಿ ಪೂರ್ವಕವಾಗಿ ಪೂಜೆಯನ್ನು ಸಲ್ಲಿಸಿದರು.
ಗುರುವಾರ ಮಂತ್ರಾಲಯದ ಶ್ರೀಮಠದಲ್ಲಿ ತರಕಾರಿಯಿಟ್ಟು ಪೂಜೆ ಸಲ್ಲಿಸುವ ಶಾಕೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವಕ್ಕೆ ಆ.10ಕ್ಕೆ ಚಾಲನೆ ದೊರೆತಿದೆ. ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಏಳುದಿನಗಳ ಕಾಲ ನಡೆಯುವ ಸಪ್ತ ರಾತ್ರೋತ್ಸವ ಕಾರ್ಯಕ್ರಮಕ್ಕೆ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದರು.
ಶ್ರೀ ಮಂಚಾಲಮ್ಮ ದೇವಿ ಹಾಗೂ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ ಬೃಂದಾವನವಿರುವ ಮಂತ್ರಾಲಯದ ಶ್ರೀಮಠದ ಮುಖ್ಯದ್ವಾರದಲ್ಲಿ ಸಪ್ತ ರಾತ್ರೋತ್ಸವ ಕಾರ್ಯಕ್ರಮ ವಿದ್ಯುಕ್ತವಾಗಿ ಪ್ರಾರಂಭವಾಯಿತು. ಇದೇ ಸಂದರ್ಭದಲ್ಲಿ ಸುಬುಧೇಂದ್ರ ತೀರ್ಥ ಸ್ವಾಮಿಜಿಯವರು ಶ್ರೀ ಮಠದಲ್ಲಿ ನಿರ್ಮಾಣವಾಗಿರುವ ಮಾಧ್ವ ಮಾರ್ಗ ಕಾರಿಡಾರ್ ಗೆ ಇದೇ ಸಂದರ್ಭದಲ್ಲಿ ಉದ್ಘಾಟನೆ ನೆರವೇರಿಸಿದರು. ತದನಂತರ ಶ್ರೀ ಮಠದಲ್ಲಿ ಹಂಸ ವಾಹನೋತ್ಸವ ವೈಭವಯುತವಾಗಿ ನಡೆಯಿತು. ಸಪ್ತರಾತ್ರೋತ್ಸವದ ಮೊದಲ ದಿನ ಸಾವಿರಾರು ಭಕ್ತರು ಭಾಗವಹಿಸಿದ್ದರು.