ಬೆಂಗಳೂರು, ಆ.5 www.bengaluruwire.com : ನಿರೀಕ್ಷೆಯಂತೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ವಾರ್ಡ್ ಮೀಸಲಾತಿ ಪಟ್ಟಿಯ ಬಗ್ಗೆ ಬಿಜೆಪಿ ನಾಯಕರಲ್ಲೇ ಅಸಮಾಧಾನ ಸ್ಪೋಟಗೊಂಡ ನಡುವೆಯೇ ಸಹಜವಾಗಿ ವಿರೋಧ ಪಕ್ಷವಾದ ಕಾಂಗ್ರೆಸ್ ಕೂಡ ತನ್ನ ಪ್ರಬಲ ವಿರೋಧ ವ್ಯಕ್ತಪಡಿಸಿದೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಬೆಂಗಳೂರಿನ ಕಾಂಗ್ರೆಸ್ ಶಾಸಕರು, ಸಂಸದರು, ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯರು ಸರ್ಕಾರದ ಕ್ರಮವನ್ನು ಉಗ್ರ ಶಬ್ದಗಳಲ್ಲಿ ಖಂಡಿಸಿದ್ದಾರೆ.
ಅಲ್ಲದೆ ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಅನ್ಯಾಯದ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿರುವಂತೆಯೇ, ಯಾವುದೇ ಮಾನದಂಡ ಅನುಸರಿಸದೆ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಿಸಿದ್ದಾರೆ. ಇದನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಹೇಳಿದ್ದಾರೆ.
ಮೀಸಲಾತಿ ಮಾನದಂಡದ ಪ್ರಕಾರ ಬಿಬಿಎಂಪಿ ವಾರ್ಡ್ ಮೀಸಲಾತಿ ಮಾಡಲಿಲ್ಲ. ಸರ್ಕಾರದ ಅನುಮತಿ ಪಡೆಯದೆ ಮೀಸಲಾತಿ ಪ್ರಕಟ ಮಾಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಇರುವ ಕಡೆ, ಸ್ಥಳೀಯ ಬಿಜೆಪಿ ಮುಖಂಡರು, ಸಂಸದರು, ಶಾಸಕರಿಗೆ ಅನುಕೂಲವಾಗುವಂತೆ ವಾರ್ಡ್ ಪುನರ್ವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ (12 MLA ಕ್ಷೇತ್ರ) – ಜೆಡಿಎಸ್ (1 MLA ಕ್ಷೇತ್ರ) ಶಾಸಕರಿರುವ ವಿಧಾನಸಭಾ ಕ್ಷೇತ್ರದಲ್ಲಿ 99 ವಾರ್ಡ್ ಬರಲಿದ್ದು, 72 ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಇದು ಯಾವ ರೀತಿಯ ಮೀಸಲಾತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.
‘ಪಾಲಿಕೆ ವಾರ್ಡ್ ಪುನರ್ವಿಂಗಡಣೆ ಬಗ್ಗೆ ಒಂದು ಸಭೆ ನಡೆಸಿಲ್ಲ’ :
ಬಿಬಿಎಂಪಿ ಮುಖ್ಯ ಆಯುಕ್ತರು ಪುನರ್ವಿಂಗಡಣೆ ಸಮಿತಿ ಅಧ್ಯಕ್ಷರಾಗಿದ್ದರೂ ಒಂದು ಸಮಿತಿಯ ಸಭೆ ಮಾಡಿಲ್ಲ. ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್ ಅವರಿಗೆ, 11 ಸಮಿತಿ ಸಭೆ ಮಾಡಿದ್ದಾಗಿ ಮುಖ್ಯ ಆಯುಕ್ತರು ಮಾಹಿತಿಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಉತ್ತರ ನೀಡಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಮುಖ್ಯಮಂತ್ರಿ ಕಚೇರಿ ಕಳಿಸಿದ್ದನ್ನು ಯತಾವತ್ ಅನುಷ್ಟಾನ ಮಾಡಿದ್ದಾರೆ. ಯುಡಿ ಇಲಾಖೆ ಬಿಜೆಪಿ ಕಚೇರಿಯಾಗಿದೆ. ಕೇವಲ ರಬ್ಬರ್ ಸ್ಟಾಂಪ್ ಆಗಿದೆ. ಪುನರ್ವಿಂಗಡಣೆಗೆ ಬಂದ ಸಾವಿರಾರು ಆಕ್ಷೇಪಣೆಗಳನ್ನು ಕಡೆಗಣಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮುಖಂಡರು ಇರುವ ಕಡೆ ಚುನಾವಣೆಗೆ ನಿಲ್ಲದಂತೆ ಮೀಸಲಾತಿ ನಿಗಧಿಪಡಿಸಿದ್ದಾರೆ. ಕಾಂಗ್ರೆಸ್ ಪ್ರಭಾವಿ ಮುಖಂಡರು ಇರುವ ಕಡೆ ಮೀಸಲಾತಿ ಮಾಡಿದ್ದಾರೆ.
ಈಗಾಗಲೇ ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದೇವೆ. ನಮ್ಮ ಆಕ್ಷೇಪಣೆಗಳಿಗೆ ಸರ್ಕಾರ ಬೆಲೆ ಕೊಟ್ಟಿಲ್ಲ. ವಾರ್ಡ್ ಮೀಸಲಾತಿ ವಿಷಯದಲ್ಲೂ ನಾವು ಕೋರ್ಟಿಗೆ ಹೋಗುತ್ತೇವೆ. ಬಿಜೆಪಿಯ 15 ಕ್ಷೇತ್ರದಲ್ಲಿ ಪ್ರಭಾವಿ ಬಿಜೆಪಿ ಸದಸ್ಯರು ತೊಂದರೆಯಾಗದಂತೆ ಮೀಸಲಾತಿ ಹಾಗೂ ಪುನರ್ವಿಂಗಡಣೆ ಮಾಡಿದ್ದಾರೆ.
ಇದು ಬಿಜೆಪಿ ವಾಮಮಾರ್ಗ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದೆ. ಈ ಪಕ್ಷಕ್ಕೆ ನೈತಿಕತೆ ಇಲ್ಲ. ಮೀಸಲಾತಿಯಲ್ಲಿ ಯಾವುದೇ ಮಾರ್ಗಸೂಚಿ, ಮಾನದಂಡವಿಲ್ಲ. ಸರ್ಕಾರ ಈ ಮೀಸಲಾತಿಪಟ್ಟಿಯನ್ನು ಹಿಂಪಡೆಯಬೇಕು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.
ಅಜಾದ್ ನಗರ ವಾರ್ಡ್ ನಲ್ಲಿ 340 ರಿಂದ 347 ವೋಟ್ ಎಸ್ ಟಿ ಸಮುದಾಯದ ಮತಗಳಿರುವುದು. ಅಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನಿಗದಿ ಮಾಡಿದೆ. ಮುಸ್ಲೀಂ ಮುಖಂಡರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಆರೋಪಿಸಿದರು.
ಶಿವಾಜಿನಗರದಲ್ಲಿ ಡೈನೊಸಾರಸ್ ರೀತಿ ವಾರ್ಡ್ ವಿಂಗಡಣೆ :
ಅಧಿಕಾರಿಗಳು ಮೀಸಲಾತಿ ಸಿದ್ದಪಡಿಸಿಲ್ಲ. ಬದಲಿಗೆ ಯಾರೋ ವಿಜ್ಞಾನಿಗಳು ಮೀಸಲಾತಿ ಪ್ರಕಟಿಸಿದಂತಿದೆ. ಕಾನೂನು ರೀತಿ ಮೀಸಲಾತಿ ಹಾಗೂ ವಾರ್ಡ್ ಪುನರ್ವಿಂಗಡಣೆ ಮಾಡಿಲ್ಲ. ನಮ್ಮ ಶಿವಾಜಿನಗರದಲ್ಲಿ ಅಮೀಬಾದಂತಿಲ್ಲ, ಡೈನೊಸಾರಸ್ ರೀತಿ ವಾರ್ಡ್ ಪುನರ್ವಿಂಗಡಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಟೀಕಿಸಿದ್ದಾರೆ.
ಕನಿಷ್ಟ ವಾರ್ಡ್ ಜನಸಂಖ್ಯೆ 45 ಸಾವಿರ ಇರಬೇಕು. ಜನಸಂಖ್ಯೆಗಿಂತ ಶೇ.30ರಷ್ಟು ಮತದಾರರು ಇರುತ್ತಾರೆ. ಆದರೆ ಇಲ್ಲಿ ಕಾಂಗ್ರೆಸ್ ಮತದಾರರು ಇರುವ ಕಡೆ, ಬಿಜೆಪಿ ಅನುಕೂಲವಾಗುವಂತೆ 30, 37 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ಮಾಡಿದ್ದಾರೆ. ಕಾಂಗ್ರೆಸ್ ಇರುವ ಕಡೆ 40, 45 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ಮಾಡಿದ್ದಾರೆ. ಸಾಕಷ್ಟು ಮೋಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ ಬಿಜೆಪಿ ಶಾಸಕರ ಕೈಗೊಂಬೆ :
ರಾಷ್ಟ್ರದ ಜನತೆಗೆ ಪ್ರಧಾನಂಮತ್ರಿ ಒಳ್ಳೊಳ್ಳೆ ಕೊಡುಗೆ ನೀಡಿದ್ದಾರೆ. ಕೇಶವಕೃಪದಲ್ಲಿ ಸಿದ್ದವಾದ ಪಟ್ಟಿಗೆ ವಿಕಾಸ ಸೌಧದಲ್ಲಿನ ನಗರಾಭಿವೃದ್ಧಿ ಇಲಾಖೆ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ನಗರಾಭಿವೃದ್ಧಿ ಇಲಾಖೆಯ ಕಚೇರಿ ಬಿಜೆಪಿ ಕಚೇರಿ ಅಂತ ಫಲಕ ಹಾಕುವಂತಾಗಿದೆ. ಸಾಮಾಜಿಕ ನ್ಯಾಯದ ವಿರುದ್ಧ, ಚುನಾವಣಾ ಆಯೋಗದ ಮಾನದಂಡ ಕೈಬಿಟ್ಟು ಬಿಬಿಎಂಪಿ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಬೆಂಗಳೂರಿನ ಜವಾಬ್ದಾರಿ ಹೊತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕರ ಕೈಗೊಂಬೆಯಾಗಿ ಮೀಸಲಾತಿ ಪಟ್ಟಿ ಹಾಗೂ ವಾರ್ಡ್ ಪುನರ್ವಿಂಗಡಣೆ ಮಾಡಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ನೇರ ಆರೋಪ ಮಾಡಿದ್ದಾರೆ.
40 ಪರ್ಸೆಂಟ್ ಕಮಿಷನ್ ಪಡೆದು, ನಗರದ ರಸ್ತೆ ಗುಂಡಿ ಬಿದ್ದಿದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಬಿಬಿಎಂಪಿ ಚುನಾವಣೆಗೆ ಹೆದರುತ್ತಿಲ್ಲ. ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಬಿಜೆಪಿ ಕಚೇರಿ ಅಂತ ಇಂದು ಬೋರ್ಡ್ ಹಾಕುತ್ತೇವೆ. ಬಿಜೆಪಿಗೆ ಚುನಾವಣೆ ನಡೆಸಲು ಭಯಬಂದಿದೆ ಎಂದು ಅವರು ಹೇಳಿದ್ದಾರೆ.
ಶೇ.40 ಕಮಿಷನ್ – ಶೇ.60 ಜಿಎಸ್ ಟಿ ಕಟ್ಟುವ ಅನಿವಾರ್ಯತೆ :
ಬೆಂಗಳೂರು ಹಿಂದೆ ಏಷ್ಯಾದ ಐಟಿ ರಾಜಧಾನಿ, ಪ್ರಪಂಚದ ಡೈನಮಿಕ್ ಸಿಟಿ ಹೀಗೆ ಸಾಕಷ್ಟು ಬಿರುದುಗಳು ಕಾಂಗ್ರೆಸ್ ನಾಯಕತ್ವದಲ್ಲಿ ಬಂದುತ್ತು. ಈಗ ಬಿಜೆಪಿ ಮೂರು ವರ್ಷದಲ್ಲಿ ಪ್ರಪಂಚದಲ್ಲೇ ಅತಿಹೆಚ್ಚು ಗುಂಡಿಗಳಿರುವ ನಗರ ಎಂಬ ಕುಖ್ಯಾತಿಗಳಿಸಿದೆ. ರಸ್ತೆಗುಂಡಿ ಮುಚ್ಚುವುದರಲ್ಲೇ ಹಣ ಮಾಡುತ್ತಿದ್ದಾರೆ. ರಸ್ತೆಗುಂಡಿ, ಸಂಚಾರ ಸಮಸ್ಯೆಗೆ ಬೆಂಗಳೂರಿಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಕುಟುಕಿದರು.
ಕಾಂಗ್ರೆಸ್ ಪ್ರಭಾವಿ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಸಿದ್ದಾರೆ. ನೇರ ಫೈಟ್ ಮಾಡಿದರೆ ಕಷ್ಟ ಅಂತ ಕಾನೂನುಬಾಹಿರವಾಗಿ ವಾರ್ಡ್ ಪುನರ್ವಿಂಗಣೆ, ಮೀಸಲಾತಿ ನಿಗದಿ ಮಾಡಿ ಬಿಜೆಪಿ ವಾಮಮಾರ್ಗ ಹಿಡಿದಿದೆ. ಇದು ನಾಚಿಗೆಗೇಡಿನ ವಿಷಯ. ಕಾನೂನು ಮತ್ತು ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಮೀಸಲಾತಿ ಪಟ್ಟಿಯನ್ನು ಹಿಂಪಡೆಯಬೇಕು. ಯಾವುದೇ ಗುತ್ತಿಗೆ ಪಡೆಯಲು ಈ ಸರ್ಕಾರಕ್ಕೆ ಶೇ.40 ಕಮಿಷನ್, ಶೇ.60 ಜಿಎಸ್ ಟಿಯನ್ನು ಕಟ್ಟಬೇಕು. ಬಿಜೆಪಿಗೆ ತಾಕತ್ತಿದ್ದರೆ ಬಿಬಿಎಂಪಿ ಚುನಾವಣೆ ನೇರವಾಗಿ ಎದುರಿಸಿ ಎಂದು ಶಾಸಕ ಕೃಷ್ಣ ಭೈರೇಗೌಡ ಸವಾಲು ಹಾಕಿದ್ದಾರೆ.
ಚುನಾವಣೆ ಮುಂದೂಡಲು ಬಿಬಿಎಂಪಿ ಕಾಯ್ದೆ-2020 ತಂದರು :
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತಾರತಮ್ಯ ಮಾಡುತ್ತಾ ಬಂದಿದೆ. ಬೆಂಗಳೂರಿನಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದ್ದಾರೆ. ಬಿಬಿಎಂಪಿ ಕಾಯ್ದೆ-2020 ಮೂಲಕ ಬಲಿಷ್ಠ ನಗರ ನಿರ್ಮಾಣಕ್ಕೆ ಅಗತ್ಯವಾದ ರೀತ ಕಾಯ್ದೆ ತರದೆ, ಬಿಬಿಎಂಪಿ ಚುನಾವಣೆ ಮುಂದಕ್ಕೆ ಹಾಕಲು ಈ ಕಾಯ್ದೆ ಕಳೆದ ವರ್ಷ ಡಿಸೆಂಬರ್ ನಲ್ಲಿ ತಂದರು ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದರು.
‘ನಗರಾಭಿವೃದ್ಧಿಯಲ್ಲ ಬಿಜೆಪಿ ಅಭಿವೃದ್ಧಿ ಇಲಾಖೆಯಾಗಿದೆ’ :
ಸಾರ್ವಜನಿಕರ ಜೊತೆ ಚರ್ಚಿಸದೆ ವಾರ್ಡ್ ಪುನರ್ ವಿಂಗಡಣೆ ತಂದರು, ಮೀಸಲಾತಿ ನಿಗದಿ ಮಾಡಿದ್ದಾರೆ. ಹೆಚ್ಚು ಹಿಂದುಳಿದವರು ಇರುವ ಕಡೆ ಬಿಸಿಎ ಗೆ ಅವಕಾಶ ಕೊಟ್ಟಿಲ್ಲ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಏಳಕ್ಕೆ ಏಳು ವಾರ್ಡ್ ಗಳಲ್ಲಿ ಮಹಿಳಾ ಮೀಸಲಾತಿ ನೀಡಿದ್ದಾರೆ. ಕಾಯ್ದೆ, ಪುನರ್ ವಿಂಗಡಣೆ, ಮೀಸಲಾತಿ, ಅನುದಾನ ಹಂಚಿಕೆ ಎಲ್ಲದರಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ರಾಜ್ಯದಲ್ಲಿ ಎಲ್ಲಾ ಕಡೆ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮಾಡಿಲ್ಲ. ಬಿಜೆಪಿ ಆಡಳಿತ ಜನರಿಗೋಸ್ಕರ ಅಲ್ಲ ಸ್ವಾರ್ಥಕ್ಕಾಗಿ ಆಗುತ್ತಿದೆ. ನಗರಾಭಿವೃದ್ಧಿ ಇಲಾಖೆ ಹೆಸರು ತೆಗೆದು ಬಿಜೆಪಿ, ಆರ್.ಎಸ್.ಎಸ್ ಅಭಿವೃದ್ಧಿ ಇಲಾಖೆ ಅಂತ ಬದಲಿಸುವಂತಾಗಿದೆ. ಈಗ ಬಿಬಿಎಂಪಿ ವಿಚಾರದಲ್ಲಿ ಆಗಿರುವ ಅನ್ಯಾಯ ಸರ್ಕಾರ ಸರಿಪಡಿಸಬೇಕು.
ಬಿಜೆಪಿ ಸ್ಥಳೀಯ ನಾಯಕರಿಗೆ ಮೀಸಲಾತಿ ತೊಂದರೆಯಾಗಿದೆ.ಅವರೇ ಈ ಬಗ್ಗೆ ತಮ್ಮ ಒಳ ಬೇಗುದಿಯನ್ನು ಮಾಧ್ಯಮದ ಮೂಲಕ ಬಿಜೆಪಿ ಸ್ಥಳೀಯ ನಾಯಕರು ಹೊರಹಾಕಿದ್ದಾರೆ. ಎಲ್ಲವೂ ಆರ್.ಎಸ್.ಎಸ್ ಕೇಂದ್ರೀಕೃತದ ಆಡಳಿತವಾಗಿದೆ ಇದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರೇವಣ್ಣ, ಪಿ.ಆರ್.ರಮೇಶ್, ಕಾಂಗ್ರೆಸ್ ಮಾಜಿ ಪಾಲಿಕೆ ಸದಸ್ಯರಾದ ಅಬ್ದುಲ್ ವಾಜಿದ್, ಶಿವರಾಜ್, ಪದ್ಮಾವತಿ, ಸತ್ಯನಾರಾಯಣ ಸೇರಿದಂತೆ ಮೊದಲಾದವರು ಹಾಜರಿದ್ದರು.
ವಿಕಾಸ ಸೌಧದ ನಗರಾಭಿವೃದ್ಧಿ ಇಲಾಖೆಯ ಕಚೇರಿ ಮುಂಭಾಗ ತೆರಳಿ ಆರ್.ಎಸ್.ಎಸ್ ಕಚೇರಿ ಎಂದು ನಾಮಫಲಕ ಅಳವಡಿಸಲು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಯತ್ನಿಸಿದ ಘಟನೆಯು ನಡೆಯಿತು.