ಬೆಂಗಳೂರು, ಆ.2 www.bengaluruwire.com : ರಾಜ್ಯದಲ್ಲಿ ಅರಣ್ಯ ಪ್ರದೇಶ ಜಾಗಗಳನ್ನು ಅಕ್ರಮವಾಗಿ ಅತಿಕ್ರಮಣ ಮಾಡುವ, ಅನಧಿಕೃತವಾಗಿ ಮಂಜೂರು ಮಾಡುವ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಇದೀಗ ಆ ಸಾಲಿಗೆ ಹೇಮಾವತಿ, ಯಗಚಿ ಹಾಗೂ ವಾಟೆಹೊಳೆ ಜಲಾಶಯ ಯೋಜನೆಯಲ್ಲಿ ಮುಳುಗಡೆ ಸಂತ್ರಸ್ತರಿಗೆ ಅಕ್ರಮವಾಗಿ ಅರಣ್ಯ ಭೂಮಿ ಮಂಜೂರು ಮಾಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಹೇಮಾವತಿ, ಯಗಚಿ ಮತ್ತು ವಾಟೆಹೊಳೆ ಜಲಾಶಯ ಯೋಜನೆ ಮುಳುಗಡೆ ಸಂತ್ರಸ್ತರಿಗೆ 1077 ಪ್ರಕರಣಗಳಲ್ಲಿ ಅಕ್ರಮವಾಗಿ ಜಮೀನು ಮಂಜೂರಾತಿ ಮಾಡಿರುವುದು ತಿಳಿದು ಬಂದಿರುತ್ತದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, (PCCF) (ಅರಣ್ಯಪಡೆ ಮುಖ್ಯಸ್ಥರು) ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಪತ್ರದ ದಾಖಲೆಗಳು ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರು (MD) ಹಾಗೂ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಸದಸ್ಯ ಕಾರ್ಯದರ್ಶಿಗಳು (Member Secretary) ಅವರ ಅಧ್ಯಕ್ಷತೆಯಲ್ಲಿ 5ನೇ ಜನವರಿ 2022ರಂದು ನಡೆದ ಸಭೆಯಲ್ಲಿ, ಈ ವಿಷಯ ತಿಳಿದು ಬಂದಿದೆ. ಅರಣ್ಯ ಇಲಾಖೆಯು ಈ ಬಗ್ಗೆ ಪ್ರಕರಣಗಳನ್ನು ಮತ್ತಷ್ಟು ಪರಿಶೀಲಿಸಿದಾಗ 596 ಪ್ರಕರಣಗಳಲ್ಲಿ 2343.19 ಎಕರೆ ಪ್ರದೇಶದ ವಿವಿಧ ಪ್ರಕಾರದ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಅರಣ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಸಂಬಂಧಿಸಿದ ಅಧಿಕಾರಿಗಳು ಮುಳುಗಡೆ ಸಂತ್ರಸ್ಥರಿಗೆ ಮಂಜೂರು ಮಾಡಿದ್ದಾರೆ.
ಮೂರು ಬಾರಿ ಪತ್ರ ಬರೆದರೂ ಸೂಕ್ತ ಕ್ರಮವಿಲ್ಲ :
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಭೂಮಂಜೂರಾತಿಯನ್ನು ರದ್ದುಗೊಳಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ಆಯುಕ್ತರು, ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ಹಾಸನದ ಉಪಅರಣ್ಯ ಸಂರಕ್ಷಣಾಧಿಕಾರಿಗಳು 27ನೇ ಜುಲೈ 2021ರಂದು, 18 ನವೆಂಬರ್ 2021ರಂದು ಹಾಗೂ ಈ ವರ್ಷ 7ನೇ ಮಾರ್ಚ್ ರಂದು ಹೀಗೆ ಒಟ್ಟು ಮೂರು ಬಾರಿ ಪತ್ರ ಬರೆದು ಕೋರಿದ್ದರೂ ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗೆಂದು, ಅರಣ್ಯ ಇಲಾಖೆಯ ಪಿಸಿಸಿಎಫ್, ಜು.7ರಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
596 ಪ್ರಕರಣಗಳಲ್ಲಿ ಮುಳುಗಡೆ ಸಂತ್ರಸ್ಥರಿಗೆ ಮಂಜೂರಾದ ಭೂಮಿಯು ಸಂರಕ್ಷಿತ ಅರಣ್ಯ, ಕಾಯ್ದಿಟ್ಟ ಅರಣ್ಯ, ಗ್ರಾಮ ಅರಣ್ಯ, ಪರಿಭಾವಿತ ಅರಣ್ಯ, ಕಂದಾಯ ಇಲಾಖೆ ದಾಖಲಿಸಿದ ಅರಣ್ಯ ಹಾಗೂ ಅರಣ್ಯ ಕಾಯ್ದೆಯ ಸೆಕ್ಷನ್ 4ರಂತೆ ಘೋಷಿತವಾದ ಅರಣ್ಯ ಪ್ರದೇಶಗಳನ್ನು ಒಳಗೊಂಡಿರುತ್ತದೆ.
ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘಿಸಿ ಮಂಜೂರಾತಿ :
2,343.19 ಎಕರೆ ಅರಣ್ಯ ಪ್ರದೇಶದ ಮಂಜೂರಾತಿಗಳು, ಕರ್ನಾಟಕ ಅರಣ್ಯ ಕಾಯ್ದೆ, ಕರ್ನಾಟಕ ಭೂ ಮಂಜೂರಾತಿ ಕಾಯ್ದೆ, ಅರಣ್ಯ (ಸಂರಕ್ಷಣಾ) ಕಾಯ್ದೆ 1980, ಸುಪ್ರೀಂಕೋರ್ಟ್ ಸಿವಿಲ್ ರಿಟ್ ಅರ್ಜಿ ಸಂಖ್ಯೆ : 202/1995ರಲ್ಲಿ ನೀಡಿದ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಿಸಿಸಿಎಫ್ ತಮ್ಮ ಪತ್ರದಲ್ಲಿ ವಿವರವಾಗಿ ತಿಳಿಸಿದ್ದಾರೆ.
ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಈಗಾಗಲೇ ಮಂಜೂರು ಮಾಡಿರುವ 2,343.19 ಎಕರೆ ಭೂ ಮಂಜೂರಾತಿಯನ್ನು ಕೂಡಲೇ ರದ್ದುಗೊಳಿಸಲು ಹಾಗೂ ಅಕ್ರಮ ಭೂಮಂಜೂರಾತಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಸೆಕ್ಷನ್-2ರ ಉಲ್ಲಂಘನೆಯ ಕಾರಣ ಪ್ರಕರಣ ದಾಖಲಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಕೋರುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ ಇನ್ನು ಮುಂದೆ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ, ಯಾವುದೇ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕಾಗಿ ಮಂಜೂರಾತಿ ಮಾಡದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
“ಹೇಮಾವತಿ, ಯಗಚಿ ಮತ್ತು ವಾಟೆಹೊಳೆ ಜಲಾಶಯ ಯೋಜನೆಯಲ್ಲಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ಜಮೀನು ಮಂಜೂರು ಮಾಡಿದ್ದು ಸರಿಯಲ್ಲ. ಕಾನೂನು ಉಲ್ಲಂಘಿಸಿ ಹಂಚಿಕೆ ಮಾಡಿದ ಭೂಮಂಜೂರಾತಿಯನ್ನು ಸರ್ಕಾರ ಮೊದಲು ರದ್ದುಪಡಿಸಬೇಕು. ಹಾಗೂ ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಅರಣ್ಯ ಅಧಿಕಾರಿಗಳು ಹಿರಿಯ ಅಧಿಕಾರಿಗಳು ಪತ್ರ ಬರೆಯುವುದರ ಬದಲು ಮೊದಲು ಸಂಬಂಧಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿ, ಕೋರ್ಟ್ ಮೂಲಕ ನಿರ್ದೇಶನ ತಂದರೆ ಪರಿಣಾಮಕಾರಿಯಾಗಿರುತ್ತದೆ.”
- ಡಾ.ಯಲ್ಲಪ್ಪರೆಡ್ಡಿ, ಹಿರಿಯ ಪರಿಸರವಾದಿ