ಬೆಂಗಳೂರು, ಆ.1 www.bengaluruwire.com : ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ದತ್ತಾಂಶವನ್ನು ಜೋಡಣೆ ಮಾಡುವ ಕಾರ್ಯಕ್ರಮ ಹಾಗೂ ಚುನಾವಣಾ ಸುಧಾರಣೆಗಳು ಆಗಸ್ಟ್ 1ರಿಂದ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಜಾರಿಗೆ ಬಂದಿದೆ.
ಒಬ್ಬ ಮತದಾರ ಮತಕ್ಷೇತ್ರದಲ್ಲಿನ ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ಹೊಂದಿರುವ ಅಥವಾ ಒಂದಕ್ಕಿಂತ ಹೆಚ್ಚು ಮತಕ್ಷೇತ್ರದಲ್ಲಿ ಚುನಾವಣಾ ಗುರುತಿನ ಚೀಟಿ ಅಥವಾ ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಗುರುತಿಸಲು ವೋಟರ್ ಐಡಿ ಕಾರ್ಡ್ ಡಾಟಾ ಜೊತೆ ಆಧಾರ್ ಡಾಟಾವನ್ನು ಜೋಡಿಸುವ ಕಾರ್ಯ ಕೈಗೊಳ್ಳಲು ಚುನಾವಣಾ ಆಯೋಗ ಈ ತಿದ್ದುಪಡಿಯನ್ನು ತಂದಿದೆ.
1950ರ ಜನತಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 14 (ಬಿ) ಮತ್ತು ಸೆಕ್ಷನ್ 23ರಲ್ಲಿನ ಕಾನೂನು ತಿದ್ದುಪಡಿಗಳ ಅನುಸಾರವಾಗಿ ಮತ್ತು ಮತದಾರರ ನೋಂದಣಿ ನಿಯಮಗಳು, 1960ರಲ್ಲಿನ ಮಾರ್ಪಾಡುಗಳ ಅನುಸಾರವಾಗಿ ಕೇಂದ್ರ ಚುನಾವಣಾ ಆಯೋಗ ವಿಧಾನಸಭೆ ಮತ್ತು ಲೋಕಸಭಾ ಮತದಾರರ ಪಟ್ಟಿಯ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆಯನ್ನು ತಂದಿದ್ದು, ಆಗಸ್ಟ್ 1ರ ಸೋಮವಾರದಿಂದ ಜಾರಿಗೆ ಬಂದಿದೆ. ಅಲ್ಲದೆ ಕೇಂದ್ರ ಚುನಾವಣಾ ಆಯೋಗವು 1 ಜನವರಿ 2023ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಕೈಗೊಳ್ಳಲು ಆದೇಶಿಸಿದೆ. ಅದರಂತೆ 9ನೇ ನವೆಂಬರ್ ರಂದು ಕರಡು ಮತದಾರರ ಪಟ್ಟಿ ಪ್ರಕಟ, 5 ಜನವರಿ 2023ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಿದೆ ಎಂದು ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣಾ ಸುಧಾರಣೆಗಳು ಮತ್ತು ಅದರ ಪ್ರಮುಖ ಮುಖ್ಯಾಂಶಗಳು ಈ ಕೆಳಕಂಡಂತಿದೆ :
ಮತದಾರರ ಪಟ್ಟಿಯಲ್ಲಿರುವವರು ಇನ್ನು ಮುಂದೆ ಸ್ವಯಂಪ್ರೇರಿತವಾಗಿ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಚುನಾವಣೆಯಲ್ಲಿ ಹೆಚ್ಚು ಹೆಚ್ಚಾಗಿ ಯುವ ಸಮುದಾಯವನ್ನು ಆಕರ್ಷಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಮತದಾರರ ಪಟ್ಟಿಗೆ ನೋಂದಾಣಿಯಸಲು ವರ್ಷದಲ್ಲಿ ನಾಲ್ಕು ಅವಕಾಶವನ್ನು ಕಲ್ಪಿಸಲಾಗಿದೆ. ಈ ಹಿಂದೆ ಜನವರಿಗೆ 1ಕ್ಕೆ 18 ವರ್ಷ ತುಂಬವ ತನಕ ಕಾಯಬೇಕಿಲ್ಲ. ಪ್ರಸಕ್ತ 2023ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆಯ ಸಂದರ್ಭದಲ್ಲಿ 1ನೇ ಏಪ್ರಿಲ್, 1ನೇ ಜುಲೈ, 1ನೇ ಅಕ್ಟೋಬರ್ 2022ನೇ ಇಸವಿಯಲ್ಲಿ 18 ವರ್ಷ ತುಂಬುವ ಯುವ ಮತದಾರರನ್ನು ವೋಟರ್ ಲಿಸ್ಟ್ ಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.
ಇದರಿಂದಾಗಿ 18 ವರ್ಷ ಪೂರೈಸಿದ ಯುವಜನರು ಮುಂದಿನ ವರ್ಷದ ವಿಶೇಷ ಪರಿಷ್ಕರಣೆ ತನಕ ಕಾಯುವುದನ್ನು ತಪ್ಪಿಸಲಾಗಿದೆ. ಹಾಗೂ ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದೆ.
ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆ ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಲಿದೆ. ಇಂದಿನಿಂದಲೇ (ಆ.1ರಿಂದ) ಮತದಾರರ ನೋಂದಣಿಗಾಗಿ ಹೊಸ ಸರಳೀಕರಿಸಿದ ಅರ್ಜಿ ನಮೂನೆಗಳು ಲಭ್ಯವಾಗಲಿದೆ. ಮತದಾರರ ಪಟ್ಟಿಯ ಹೆಸರು, ಇನ್ನಿತರ ತಿದ್ದುಪಡಿಗಳಿಗಾಗಿ ಹೊಸ ನಮೂನೆ-8 ಈಗ ಲಭ್ಯವಿದೆ. ಒಂದೇ ತರಹದ ಹೆಸರು ಅಥವಾ ಫೊಟೋ ಹೊಂದಿರುವ ಮತದಾರರ ಪರಿಶೀಲನೆಗೆ ಆದ್ಯತೆ ನೀಡಲಾಗುತ್ತದೆ. ಆರೋಗ್ಯಕರ ಮತದಾರರ ಪಟ್ಟಿಯನ್ನು ಖಾತರಿಪಡಿಸುವ ಉದ್ದೇಶದಿಂದ ಪರಿಶೀಲನೆ ಮತ್ತು ಮೇಲ್ವಿಚಾರಣೆ ನಡೆಸಲು ಚುನಾವಣಾ ಆಯೋಗದ ಕಾಯ್ದೆ ಸೂಕ್ತ ತಿದ್ದುಪಡಿಗಳನ್ನು ತರಲಾಗಿದೆ.
ಮತದಾರರ ಪಟ್ಟಿಯಲ್ಲಿನ ಮತದಾರರ ದೃಢೀಕರಣಕ್ಕೆ ನಮೂನೆ-6ಬಿ :
ಮತದಾರರ ಪಟ್ಟಿಯಲ್ಲಿನ ಮತದಾರರ ದೃಢೀಕರಣದ ಉದ್ದೇಶದಿಂದ ಹೊಸದಾಗಿ ನಮೂನೆ-6ಬಿಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಸ್ವಯಂಪ್ರೇರಿತವಾಗಿ ಜೋಡಣೆ ಮಾಡಿ ದೃಢೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಒಂದೊಮ್ಮೆ ಆಧಾರ್ ಮಾಹಿತಿ ಒದಗಿಸಲು ಸಾಧ್ಯವಾಗದಿದ್ದಲ್ಲಿ, ಈ ಮುಂದಿನ 11 ದಾಖಲೆಗಳ ಪೈಕಿ ಒಂದು ದಾಖಲೆ ಒದಗಿಸಿ ಮತದಾರರ ದೃಢೀಕರಣ ಮಾಡಿಕೊಳ್ಳಬಹುದು. 1-08-2022 ರಿಂದ 31-03-2023ರ ಒಳಗಾಗಿ ಮತದಾರರು ದಾಖಲೆ ಒದಗಿಸಿ ಈ ದೃಢೀಕರಣ ಮಾಡಬೇಕಾಗಿದೆ.
ಆ ದಾಖಲೆಗಳು ಯಾವುದೆಂದರೆ : ಮನ್ರೇಗಾ ಉದ್ಯೋಗ ಕಾರ್ಡ್, ಬ್ಯಾಂಕ್ ಅಥವಾ ಅಂಚೆಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್ ಪುಸ್ತಕ, ಕಾರ್ಮಿಕ ಇಲಾಖೆಯ ಯೋಜನೆಯಡಿ ನೀಡಲಾದ ವಿಮೆ, ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್ ಪಿಆರ್ ಅಡಿಯಲ್ಲಿ ಆರ್ ಜಿಐ ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್ ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆ ಅಥವಾ ಸಾರ್ವಜನಿಕ ನಿಯಮಿತ ಕಂಪನಿಗಳಿಂದ ನೀಡಲಾದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸದರು, ವಿಧಾನಸಭಾ ಮತ್ತು ವಿಧಾನಪರಿಷತ್ ಸದಸ್ಯರಿಗೆ ನೀಡಿದ ಅಧಿಕೃತ ಗುರುತಿನ ಚೀಟಿ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ನೀಡಲಾದ ವಿಶಿಷ್ಟ ಗುರುತಿನ ಚೀಟಿ (UDID)ಗಳಾಗಿದೆ. ನಮೂನೆ-6ಬಿಯಲ್ಲಿ ಮಾಹಿತಿ ದೃಢೀಕರಿಸಲು ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಅವಕಾಶವಿದೆ.
ಆನ್ ಲೈನ್ ಮತ್ತು ಆಫ್ ಲೈನ್ ವ್ಯವಸ್ಥೆಯಲ್ಲಿ ಹೇಗೆ ದೃಢೀಕರಣ ಮಾಡಬಹುದು ?
ಆನ್ ಲೈನ್ ವ್ಯವಸ್ಥೆಯಡಿ ಎನ್ ವಿಎಸ್ ಪಿ (NVSP) ಮತ್ತು ವೋಟರ್ ಹೆಲ್ಪ್ ಲೈನ್ ಆಪ್ (VHP) ನಲ್ಲಿಯೂ ಮತದಾರರು ತಮ್ಮ ಮಾಹಿತಿಯನ್ನು ದೃಢೀಕರಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಆಧಾರ್ ಸ್ವಯಂ ದೃಢೀಕರಣಕ್ಕೆ ಆಧಾರ್ ಜೋಡಣೆಯಾಗಿರುವ ಮೊಬೈಲ್ ಗೆ ಸ್ವೀಕೃತಿಯಾಗುವ ಒಟಿಪಿ (OTP) ಸೌಲಭ್ಯವನ್ನು ಒದಗಿಸಿದೆ. ಆಕಸ್ಮಾತ್ ಒಟಿಪಿ ಸಹಿತ ದೃಢೀಕರಣ ಸಾಧ್ಯವಾಗದಿದ್ದಲ್ಲಿ ಮತದಾರರು ಆಧಾರ್ ಅನ್ನು ಮೇಲಿನ ಆಪ್ ಗಳಲ್ಲಿ ಅಪಲೋಡ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
ಆಧಾರ್ ದಾಖಲೆ ಅಪಲೋಡ್ ಮಾಡಲು ಸಾಧ್ಯವಾಗದಿದ್ದಲ್ಲಿ, ಸಂಬಂಧಪಟ್ಟ ಬೂತ್ ಲೆವೆಲ್ ಅಧಿಕಾರಿಗೆ ನಮೂನೆ-6ಬಿ ಯಲ್ಲಿ ಭೌತಿಕವಾಗಿ ಆ ದಾಖಲೆಯನ್ನು ಅರ್ಜಿಯೊಂದಿಗೆ ಸಲ್ಲಿಬಹುದಾಗಿದೆ. ಆ ಅರ್ಜಿಯನ್ನು ಮತದಾರರ ಅನಕೂಲ ಕೇಂದ್ರಗಳು, ಇ-ಸೇವಾ ಕೇಂದ್ರಗಳು ಹಾಗೂ ನಾಗರೀಕ ಸೇವಾ ಕೇಂದ್ರಗಳು ಮತ್ತು ಮತದಾರರ ನೋಂದಣಿ ಅಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಿ ಅಧಿಕಾರಿ ಕಚೇರಿಯಲ್ಲೂ ಸಲ್ಲಿಸಬಹುದಾಗಿದೆ.
ಹೊಸ ಅರ್ಜಿ ನಮೂನೆಗಳು : ಯಾವ ನಮೂನೆ? ಯಾವುದಕ್ಕೆ?
ನಮೂನೆ -6 : ಹೊಸ ಮತದಾರರ ನೋಂದಣಿ
ನಮೂನೆ-8 : ಮತದಾರರ ಪಟ್ಟಿಯಲ್ಲಿನ ಮಾಹಿತಿಗಳ ತಿದ್ದುಪಡಿಗೆ
ನಮೂನೆ-7 : ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆಯಲು
ನಮೂನೆ-6ಬಿ : ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು
ಚುನಾವಣೆ ಸುಧಾರಣೆಗಳ ಕುರಿತು ಕಾರ್ಯಾಗಾರ :
ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ದತ್ತಾಂಶವನ್ನು ಜೋಡಣೆ ಮಾಡುವ ಕಾರ್ಯಕ್ರಮ ಮತ್ತು ಚುನಾವಣಾ ಸುಧಾರಣೆಗಳ ಕುರಿತಾದ ಕಾರ್ಯಾಗಾರವನ್ನು ನಗರದಲ್ಲಿ ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉದ್ಘಾಟಿಸಿದರು.
ಭಾರತ ಚುನಾವಣಾ ಆಯೋಗ ಮತ್ತು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಯಿಂದ ಆಯೋಜಿಸಿದ್ದ ಚುನಾವಣಾ ಸುಧಾರಣೆಗಳು ಕಾರ್ಯಕ್ರಮದಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ ಹಾಗೂ ಮತದಾರರ ನೋಂದಣಿ ನಿಯಮಗಳಲ್ಲಿನ ತಿದ್ದುಪಡಿಗಳಿಗೆ ತಿದ್ದುಪಡಿ ತಂದಿದ್ದು ಆ ಕುರಿತಂತೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಪಾಲಿಕೆ ವಿಶೇಷ ಆಯುಕ್ತ ರಂಗಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.