ನವದೆಹಲಿ/ಬೆಂಗಳೂರು, ಜು.31 www.bengaluruwire.com : ರಾಜ್ಯದಲ್ಲಿ 2021-22 ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 10.79 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದ್ದು, 4.04 ಲಕ್ಷ ಮೆಟ್ರಿಕ್ ಟನ್ ನಷ್ಟು ರಾಗಿಯನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆ ನೀತಿಯಡಿ ಖರೀದಿ ಮಾಡಿದ್ದು, ಪ್ರಸ್ತುತವಾಗಿ ರಾಜ್ಯದಲ್ಲಿ 2.73 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ನೀಡಲಾಗುತ್ತಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಸಾಧ್ವಿ ನಿರಂಜನ್ ಜ್ಯೋತಿ ಲೋಕಸಭೆಯ ಅಧಿವೇಶನದಲ್ಲಿ ರಾಜ್ಯದ ಸಂಸದ ಪ್ರಜ್ವಲ್ ರೇವಣ್ಣ ಅವರ ಚುಕ್ಕೆಗುರಿತಿಲ್ಲದ ಪ್ರಶ್ನೆಗೆ ಉತ್ತರಿಸುತ್ತಾ ಈ ವಿಷಯ ತಿಳಿಸಿದ್ದಾರೆ.
ರಾಜ್ಯದಲ್ಲಿ ರಾಗಿ ಖರೀದಿಸುವ ನೀತಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಕನಿಷ್ಠ ಬೆಂಬಲ ಬೆಲೆಯಡಿ (MSP) ಖರೀದಿ ಪ್ರಕ್ರಿಯೆ ವಿಳಂಬ ಮಾಡುತ್ತಿರುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ಎಂಎಸ್ ಪಿ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆಯಾ? ಕೇಂದ್ರ ಸರ್ಕಾರ ರಾಜ್ಯಕ್ಕೆ 2.10 ಲಕ್ಷ ಮೆಟ್ರಿಕ್ ಟನ್ ನಷ್ಟು ರಾಗಿಯನ್ನು ಖರೀದಿ ಮಾಡಲಷ್ಟೇ ಅನುಮತಿ ನೀಡಿದೆಯಾ? ಹಾಗೆಯೇ ಪ್ರತಿಯೊಬ್ಬ ರೈತರಿಂದ ಗರಿಷ್ಠ 20 ಕ್ವಿಂಟಾಲ್ ನಷ್ಟು ಮಾತ್ರ ರಾಗಿ ಖರೀದಿ ಮಾಡಲು ನಿರ್ದೇಶನ ಕೊಟ್ಟಿದೆಯೇ ? ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನೆ ಕೇಳಿದ್ದರು.
5.25 ಲ.ಮೆಟ್ರಿಕ್ ಟನ್ ರಾಗಿ ಖರೀದಿಗೆ ಕೇಂದ್ರದ ಅನುಮತಿ :
ಇದಕ್ಕೆ ಉತ್ತರಿಸಿರುವ ಸಾಧ್ವಿ ನಿರಂಜನ್ ಜ್ಯೋತಿ, 2021-22ನೇ ಸಾಲಿನಲ್ಲಿ ರಾಗಿ ಖರೀದಿಗೆಂದು ಕರ್ನಾಟಕ ಸರ್ಕಾರ 2.10 ಹಾಗೂ 3.14 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿ ಮಾಡುವ ಎರಡು ಹಂತದ ಯೋಜನೆಯನ್ನು ಹೊಂದಿದ್ದು, ಆ ಕುರಿತಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ರಾಗಿ ಖರೀದಿ, ಹಂಚಿಕೆ ಮತ್ತು ವಿತರಣೆ ನಿಯಮದಡಿ 2021ರ ಡಿಸೆಂಬರ್ 7ನೇ ರಂದೇ ತ್ವರಿತವಾಗಿ ಅನುಮತಿ ನೀಡಿತ್ತು. ಅದರಂತೆ ಒಟ್ಟಾರೆ 5.25 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ರೈತರಿಂದ ಖರೀದಿಸಲು ಅನುಮತಿ ನೀಡಿತ್ತು. ಈ ಸಂದರ್ಭದಲ್ಲಿ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ರಾಗಿ ಖರೀದಿಯ ಮಿತಿಯನ್ನು ಕೇಂದ್ರವು ಹೇರಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ 2017-18ನೇ ಸಾಲಿನಿಂದ 2021-22ನೇ ಸಾಲಿನ ಐದು ವರ್ಷಗಳ ಮುಂಗಾರು ಹಂಗಾಮಿನಲ್ಲಿ ಒಟ್ಟು 55.768 ಲಕ್ಷ ಮೆಟ್ರಿಕ್ ಟನ್ ರಾಗಿ ಉತ್ಪಾದನೆಯಾಗಿದೆ. ಆ ಪೈಕಿ 2017-18ನೇ ಸಾಲಿನಲ್ಲಿ ಕರ್ನಾಟವು ರೈತರಿಂದ ರಾಗಿ ಖರೀದಿಸಿ, ವಿತರಿಸಿದ ಅಂಕಅಂಶವನ್ನು ಹೊರತುಪಡಿಸಿ ಉತ್ಪಾದನೆಯಾದ ರಾಗಿ ಪ್ರಮಾಣವನ್ನು ಮಾತ್ರ ಲೋಕಸಭೆಯಲ್ಲಿ ರಾಜ್ಯ ಸಚಿವರು ನೀಡಿದ್ದಾರೆ.
ಕಳೆದ ಐದು ವರ್ಷಗಳ ಪೈಕಿ 2020-21ನೇ ಮುಂಗಾರು ಹಂಗಾಮಿನ ಅವಧಿಯಲ್ಲಿ ಐದು ವರ್ಷಗಳಲ್ಲೇ ಅತಿಹೆಚ್ಚು ಅಂದರೆ ಬರೋಬ್ಬರಿ 13.69 ಲಕ್ಷ ಮೆಟ್ರಿಕ್ ಟನ್ ನಷ್ಟು ರಾಗಿ ಉತ್ಪಾದನೆಯಾಗಿದ್ದರೆ, 4.75 ಲಕ್ಷ ಮೆ.ಟನ್ ರಾಗಿ ಖರೀದಿಸಿ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ 77,103 ಟನ್ ರಾಗಿಯನ್ನು ಹೊರತುಪಡಿಸಿ ಉಳಿದ ಸಿರಿಧಾನ್ಯವನ್ನು ಹಂಚಿಕೆ ಮಾಡಿದೆ.
ರಾಜ್ಯದಲ್ಲಿ ಈತನಕ 2.66 ಲಕ್ಷ ರೈತರಿಂದ ರಾಗಿ ಖರೀದಿ :
ಒಟ್ಟಾರೆ ರಾಜ್ಯದಲ್ಲಿ 2018-19ನೇ ಸಾಲಿನಿಂದ 2021-22ನೇ ಮುಂಗಾರು ಹಂಗಾಮಿನ ಅವಧಿಯಲ್ಲಿ 42.90 ಲ.ಮೆ.ಟನ್ ರಾಗಿ ಉತ್ಪಾದನೆಯಾಗಿದ್ದು, 11.67 ಲ.ಮೆ.ಟನ್ ರಾಗಿಯನ್ನು ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀತಿಯಡಿ ಖರೀದಿಸಿ, 10.366 ಲ.ಮೆ.ಟನ್ ವಿತರಣೆ ಮಾಡಿದೆ (2021-22ನೇ ಸಾಲಿನ 2.73 ಲ.ಮೆ.ಟನ್ ರಾಗಿ ವಿತರಣೆ ಪ್ರಸ್ತುತ ನಡೆಯುತ್ತಿದೆ) ಎಂದು ಲೋಕಸಭೆಗೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ರಾಜ್ಯ ಸಚಿವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಈತನಕ 2.66 ಲಕ್ಷ ರೈತರಿಂದ 4.04 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಕ್ವಿಂಟಾಲ್ ಗೆ 3,377 ರೂ. ಕನಿಷ್ಟ ಬೆಂಬಲ ಬೆಲೆ ನೀಡಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ (KFCSC) ಖರೀದಿಸಿದೆ. ಏಪ್ರಿಲ್ ನಿಂದ ಪಡಿತರ ವಿತರಣಾ ಕೇಂದ್ರದಲ್ಲಿ ರಾಗಿ ವಿತರಣೆಯಾಗುತ್ತಿದ್ದು, ಸೆಪ್ಟೆಂಬರ್ ತನಕ ರಾಗಿ ಹಂಚಿಕೆಯನ್ನು ನಿಗಧಿ ಮಾಡಲಾಗಿದೆ. ಅಕ್ಟೋಬರ್ ಮತ್ತು ನವೆಂಬರ್ ವರೆಗೆ 70 ಸಾವಿರ ಟನ್ ರಾಗಿ ವೇರ್ ಹೌಸಿಂಗ್ ಕಾರ್ಪೊರೇಷನ್ ಗೋದಾಮು ಹಾಗೂ ಎಂಎಸ್ ಪಿ ಸಂಗ್ರಹ ಕೇಂದ್ರದಲ್ಲಿರಲಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉನ್ನತ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ರಾಗಿ ಖರೀದಿಸಿದ 10 ತಿಂಗಳ ಒಳಗೆ ಬಳಯಾಗುವ ಅವಧಿ ವಿಸ್ತರಣೆ :
ಈ ಮೊದಲು ರಾಗಿ ಖರೀದಿಸಿದ ನಂತರ 6 ತಿಂಗಳ ಒಳಗೆ ಹಂಚಿಕೆ ಮಾಡಿ ಮುಗಿಸಬೇಕಿತ್ತು. ಆದರೆ ಈಗ ರಾಗಿ ಖರೀದಿಸಿದ 10 ತಿಂಗಳ ಒಳಗಾಗಿ ಗ್ರಾಹಕರಿಗೆ ವಿತರಣೆ ಮಾಡಲು ಕೇಂದ್ರ ಸರ್ಕಾರ ಸಮಯಾವಕಾಶ ವಿಸ್ತರಣೆ ಮಾಡಿದೆ. ಒಂದು ಋತುಮಾನದಲ್ಲಿ ರಾಗಿ ಖರೀದಿಗೂ ಹಾಗೂ ಬಳಕೆಗೂ ಕನಿಷ್ಟ 3 ತಿಂಗಳು ಅಂತರವಿರಲಿದೆ. ಯಾಕೆಂದರೆ ಖರೀದಿಯಾದ ರಾಗಿ ವಿತರಣೆ ಮಾಡಿದ ಬಳಿಕ ಮತ್ತೆ ಅದೇ ರಾಗಿ ಮಾರಾಟಕ್ಕಾಗಿ ಕಾಳಸಂತೆ ಹಾಗೂ ಖರೀದಿ ವ್ಯವಸ್ಥೆಗೆ ಬರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಈ ನಿಯಮಾವಳಿ ರೂಪಿಸಿದೆ.
ಪ್ರತಿಯೊಂದು ಕಾರ್ಡ್ ಆಧರಿಸಿ ಒಂದು ಯೂನಿಟ್ ಅಥವಾ ಪ್ರತಿವ್ಯಕ್ತಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಅಥವಾ ಅದರ ಬದಲು 2,3 ಅಥವಾ 4 ಕೆಜಿ ಅಕ್ಕಿ- ರಾಗಿ ಹೊಂದಣಿಕೆಯ ರೀತಿ ರೇಷನ್ ನೀಡಲಾಗುತ್ತಿದೆ. ಈ ವರ್ಷ ನವೆಂಬರ್ ತನಕ ರಾಗಿಯನ್ನು ರೇಷನ್ ಅಂಗಡಿಗಳಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.
ರಾಜ್ಯದಲ್ಲಿ ಏ.25ರಿಂದ 2020-21ನೇ ಮುಂಗಾರು ಹಂಗಾಮಿನ ಅವಧಿಯಲ್ಲಿ ಬೆಳೆದ ರಾಗಿ ಖರೀದಿಯನ್ನು ಮಾಡಲು ಏ.25ರಿಂದ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿತ್ತು. ಕೆಲವು ಕಡೆಗಳಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸುವಲ್ಲಿನ ಗೊಂದಲದಿಂದ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದರು.
ರಾಜ್ಯದಲ್ಲಿ ರಾಗಿ ಖರೀದಿ ಮತ್ತು ಪಡಿತರ ನಿರ್ವಹಣೆ ಸಮರ್ಪಕವಾಗಬೇಕಿದೆ :
“ಸರ್ಕಾರ ರಾಗಿ ಖರೀದಿಗಾಗಿ ರೈತರಿಗೆ ನೀಡಿರುವ ಕನಿಷ್ಟ ಬೆಂಬಲ ಬೆಲೆ ಚೆನ್ನಾಗಿದೆ. ರೈತರು ಆ ಬೆಲೆಯಲ್ಲಿ ತಮ್ಮ ಬೆಳೆಯನ್ನು ಮಾರಾಟ ಮಾಡಲು ಸಿದ್ಧರಿದ್ದಾರೆ. ರಾಗಿಯು ಆಹಾರ ಭದ್ರತಾ ಕಾಯ್ದೆಯಲ್ಲಿ ಬರುವ ಸಿರಿಧಾನ್ಯವಾಗಿದ್ದು, ಇದನ್ನು ಪ್ರತಿ ರೈತರಿಂದ ಖರೀದಿಸಲು ಮಿತಿ ಹೇರಿಕೆಯನ್ನು ತೆಗೆಯಬೇಕಿದೆ. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ರಾಗಿ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಇದರಿಂದ ಉತ್ಪಾದನೆಯೂ ಕಡಿಮೆಯಾಗುತ್ತಿದೆ. ಕೂಲಿ ಖರ್ಚಿನ ಹೆಚ್ಚಳ ಸೇರಿದಂತೆ ಮೊದಲಾದ ಕಾರಣದಿಂದ ರಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ರಾಗಿಗೆ ಬೇಡಿಕೆಯಿದೆ. ಆದರೆ ರಾಜ್ಯ ಸರ್ಕಾರ ರಾಗಿ ಖರೀದಿ ಮತ್ತು ಪಡಿತರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಅದರ ಕಡೆ ಹೆಚ್ಚು ಗಮನವಹಿಸಬೇಕಿದೆ.”
- ಪ್ರೊ.ಟಿ.ಎನ್.ಪ್ರಕಾಶ್ ಕಮ್ಮರಡಿ, ಮಾಜಿ ಅಧ್ಯಕ್ಷರು, ಕರ್ನಾಟಕ ಕೃಷಿ ಬೆಲೆ ಆಯೋಗ