ಬೆಂಗಳೂರು, ಜು.28 www.bengaluruwire.com : ಅಗತ್ಯವಾದರೆ ದುಷ್ಟಶಕ್ತಿಗಳನ್ನು ಸದೆಬಡೆಯಲು ರಾಜ್ಯದಲ್ಲಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ರೀತಿ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಲಭೂತವಾದಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ತಮ್ಮ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದರು.
ಉತ್ತರಪ್ರದೇಶದ ಪರಿಸ್ಥಿತಿ ಹಾಗೂ ಇಲ್ಲಿನ ಪರಿಸ್ಥಿತಿ ಬೇರೆ ಬೇರೆ ರೀತಿಯಿದೆ. ಆದರೆ ಯುಪಿ ಯೋಗಿ ಆದಿತ್ಯನಾಥ್ ರೀತಿಯ ಸರ್ಕಾರದ ರೀತಿ ತಮ್ಮಲ್ಲೂ ಕ್ರಮ ಜರುಗಿಸಲು ಹಿಂದುಮುಂದೆ ನೋಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೋಮು ಸೌಹಾರ್ದತೆ ಕದಡುವ ಶಕ್ತಿ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಸಕ್ರಿಯವಾಗಿದೆ. ರಾಜಸ್ತಾನ, ಯುಪಿ, ಕೇರಳ ರೀತಿಯಲ್ಲಿ, ಕರ್ನಾಟಕದಲ್ಲಿಯೂ ಕೋಮು ಸೌಹಾರ್ದತೆ ಕದಡಲು ವ್ಯವಸ್ಥಿತ ಪಿತೂರಿ ಆಗುತ್ತಿದೆ. ನಮ್ಮಲ್ಲಿನ ದಕ್ಷ ಪೊಲೀಸ್ ಅಧಿಕಾರಿಗಳು ಉಗ್ರ ಸಂಘಟನೆಗಳ ಭಯೋತ್ಪಾಕರನ್ನು ಹಿಡಿದು ತಿಹಾರ್ ಜೈಲಿಗೆ ತಳ್ಳುತ್ತಿದ್ದಾರೆ.
ಪ್ರವೀಣ್ ಹತ್ಯೆ ತನಿಖೆಗೆ ಐದು ತಂಡ ರಚನೆ :
ಡಿಜೆಹಳ್ಳಿ, ಕೆಜಿಹಳ್ಳಿ, ಮಂಗಳೂರಿನಲ್ಲಿ ಹಾಗೂ ಮೊನ್ನೆ ಪ್ರವೀಣ್ ಕೊಲೆ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಹರ್ಷ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮ ಇಲ್ಲಿ ಕೈಗೊಳ್ಳುತ್ತೇವೆ. ಪ್ರವೀಣ ಕೊಲೆ ಪ್ರಕರಣ ಬೇಧಿಸಲು ಐದು ತಂಡ ರಚಿಸಿದ್ದೇವೆ. ಕೇರಳಕ್ಕೂ ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಕೆಲವು ಶಕ್ತಿಗಳು ಅಹಿತಕರ ಘಟನೆ ಸೃಷ್ಟಿಸಲು ಕಾಯುತ್ತಿರುತ್ತದೆ. ಉಡುಪಿಯಲ್ಲಿ ಐದು ವಿದ್ಯಾರ್ಥಿನಿಯರಿಂದ ಶುರುವಾರ ಹಿಜಾಬ್ ವಿವಾದವನ್ನು ವ್ಯವಸ್ಥಿತವಾಗಿ ದೊಡ್ಡ ರೀತಿ ಬಿಂಬಿಸಿದರು. ಕೋರ್ಟ್ ಆದೇಶ ಹಾಗೂ ನಾವು ಆ ವಿವಾದವನ್ನು ನಿಯಂತ್ರಣ ಮಾಡಿದ್ದೇವೆ. ಅಜಾನ್ ಬಗ್ಗೆ ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಸೂಕ್ತವಾಗಿ ಅನುಷ್ಠಾನ ಮಾಡಿದ್ದೇವೆ. ಹಲವು ಸವಾಲುಗಳನ್ನು ಮೆಟ್ಟಿನಿಂತು ನಮ್ಮ ಸರ್ಕಾರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ಪಿಎಫ್ ಐ, ಎಸ್ ಡಿಪಿಐ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಬೇಕು. ಆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯದಲ್ಲೇ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಸಿಎಂ ಬೊಮ್ಮಾಯಿ ಉತ್ತರಿಸಿದರು.
ಎಲ್ಲಾ ಇಲಾಖೆಗಳಲ್ಲಿ ಅಭಿವೃದ್ಧಿ ಕಡತಗಳು ವಿಲೇವಾರಿ ಆಗಿದೆ. ಕಡತಗಳು ವಿಲೇವಾರಿಯಾಗಿಲ್ಲ ಎಂಬ ಆರೋಪಗಳು ಸುಳ್ಳು. ಯಾವುದೇ ಕಡತ ಬಾಕಿ ಉಳಿದಿಲ್ಲ. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಸರ್ಜರಿ ಬಗ್ಗೆ ಮಾತನಾಡಿದ ಬೊಮ್ಮಾಯಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಸದ್ಯದಲ್ಲಿಯೇ ದೆಹಲಿಯಲ್ಲಿ ಭೇಟಿಯಾದಾಗ ಈ ವಿಚಾರವನ್ನು ಮರುಪ್ರಸ್ತಾವನೆ ಮಾಡಲಾಗುತ್ತದೆ ಎಂದರು.
ಸಿಎಂ ಸ್ಪಷ್ಟನೆ :
ರಾಜ್ಯದಲ್ಲಿ ಕಷ್ಟದ ಸಂದರ್ಭದಲ್ಲಿ ರಾಜ್ಯಕ್ಕೆ ಬರಲು ಬಿಜೆಪಿ ವರಿಷ್ಠರ ಹಿಂದೇಟು ಹೊಡೆದಿದ್ದೇಕೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಉತ್ತರಿಸಿದ ಸಿಎಂ ಬೊಮ್ಮಾಯಿ, ದೊಡ್ಡಬಳ್ಳಾಪುರದಲ್ಲಿ ಏರ್ಪಡಿಸಿದ್ದ ಜನೋತ್ಸವ ಸಮಾವೇಶ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ವರಿಷ್ಠರಿಗೆ ತಾವೇ ಬರಬೇಡಿ ಅಂತ ತಿಳಿಸಿದ್ದೆ. ವರಿಷ್ಠರು ರಾಜ್ಯಕ್ಕೆ ಬರಬಾರದು ಅಂತಲ್ಲ. ರಾಜ್ಯಕ್ಕೆ ಬರುವಾಗ ಬಂದೇ ಬರ್ತಾರೆ ಅಂತ ಸ್ಪಷ್ಟಪಡಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಪಣತೊಟ್ಟು ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸಮತೋಲಿತ ಪ್ರಯತ್ನ ಮಾಡಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಮಾಧ್ಯಮಗಳಿಗೆ ಸಾಧನಾ ಪುಸ್ತಕ ಕೊಡದ ಸರ್ಕಾರ :
ಸುದ್ದಿಗೋಷ್ಟಿ ಮೂಲಕ ಮಾತ್ರ ಸಾಧನೆಗಳ ಮಾಹಿತಿ ನೀಡಿದರು. ಸರ್ಕಾರದ ಒಂದು ವರ್ಷದ ಸಾಧನಾ ಪುಸ್ತಕಗಳನ್ನು ಸುದ್ದಿಗೋಷ್ಟಿ ವೇಳೆ ಕೊಡಲು ತರಲಾಗಿತ್ತು. ಆದರೆ ಮಾಧ್ಯಮಗೋಷ್ಠಿ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಸಾಧನಾ ಪುಸ್ತಕ ಕೊಡದೇ ಸಿಬ್ಬಂದಿ ವಾಪಸ್ ತೆಗೆದುಕೊಂಡು ಹೋದರು. ಇದಕ್ಕೆ ಮಾಧ್ಯಮ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದರು.