ಬೆಂಗಳೂರು, ಜು.28 www.bengaluruwire.com : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ಸಂದ ಹಿನ್ನಲೆಯಲ್ಲಿ ತಮ್ಮ ಆಡಳಿತಕ್ಕೆ ನೂರಕ್ಕೆ ನೂರರಷ್ಟು ಅಂಕವನ್ನು ಕೊಟ್ಟಿದ್ದಾರೆ.
ಇಂದು ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಳಿಸಿದ್ದು, ವಿಧಾನಸೌಧ ಹಾಗೂ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನು, ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಹಿನ್ನಲೆಯಲ್ಲಿ ಬುಧವಾರ ತಡರಾತ್ರಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಹಾಗಾಗಿ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸರ್ಕಾರದ ಆಡಳಿತವನ್ನು ಸಮರ್ಥಿಸಿಕೊಂಡರು.
ನಮ್ಮ ಸರ್ಕಾರಕ್ಕೆ ಶೇ.100ಕ್ಕೆ 100 ರಷ್ಟು ಅಂಕವನ್ನು ನೀಡುತ್ತೇವೆ. ಕಾಂಗ್ರೆಸ್ ಆಗ ಸರ್ಕಾರ ನಡೆಸಿದಾಗ ಭ್ರಷ್ಟಾಚಾರದಲ್ಲಿ 100ಕ್ಕೆ ನೂರು ಅಂಕ ಪಡೆದಿತ್ತು ಎಂದು ಕಾಂಗ್ರೆಸ್ ತಮ್ಮ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಪ್ರತಿಯಾಗಿ ಹೀಗೆ ಕುಟುಕಿದರು.
ಜನರಿಗೆ ನಾವು ಒಂದು ವರ್ಷದಲ್ಲಿ ಏನೇನು ಮಾಡಿದ್ವಿ ಅದಕ್ಕೆ ಉತ್ತರದಾಯಿತ್ವ ಆಗಿದ್ದೀವಿ. ಹಾಗಾಗಿ ಇಂದು ಪತ್ರಿಕಾಗೋಷ್ಠಿ ಮಾಡುತ್ತಿದ್ದೇವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ಸರ್ಕಾರ ಒಂದು ವರ್ಷ ನಡೆಯಲು ಸಹಕಾರ ನೀಡಿದೆ. ಅವರಿಗೆ ಧನ್ಯವಾದಗಳು.
ನಮ್ಮ ಸಚಿವ ಸಂಪುಟದಲ್ಲಿ ಒಂದು ತಂಡವಾಗಿ ಕೆಲಸ ಮಾಡಲು ಬದ್ಧತೆಯಿರುವ ಸಚಿವರು ಇರುವ ಸಚಿವ ಸಂಪುಟದಲ್ಲಿ ಇದ್ದಾರೆ. ಇವರೆಲ್ಲರ ಕೊಡುಗೆ ನಮ್ಮ ಸರ್ಕಾರದ ಮೇಲಿದೆ. ಕೋವಿಡ್ ಬಂದಾಗ ಹಿಂದಿನ ಸಿಎಂ ಬಿಎಸ್ ಯಡಿಯೂರಪ್ಪ ಸಮರ್ಥವಾಗಿ ಎರಡು ವರ್ಷ ಕೆಲಸ ಮಾಡಿದ್ದಾರೆ. ಪ್ರಮುಖವಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಡಾ.ಅಶ್ವತ್ಥನಾರಾಯಣ ಉತ್ತಮವಾಗಿ ಕಾರ್ಯ ನಿರ್ವಹಿಸಿದರು ಎಂದು ಸಚಿವರುಗಳಿಗೆ ಶಹಬಾಸ್ ಗಿರಿನೀಡಿದರು.
ಸರ್ವರು ಈ ಸರ್ಕಾರದ ಆಡಳಿತದಲ್ಲಿ ಪಾಲ್ಗೊಂಡಿದ್ದಾರೆ. ರೈತಪರವಾಗಿ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳಿಗಾಗಿ ದೇಶದಲ್ಲಿ ಪ್ರಥಮವಾಗಿ ಜಾರಿಗೆ ತಂದಿದ್ದೆವು. ಈತನಕ 10 ಲಕ್ಷ ವಿದ್ಯಾರ್ಥಿಗಳಿಗೆ ಡಿಬಿಟಿ ಮುಖಾಂತರ ನೆರವಿನ ಹಣ ಹಂಚಿಕೆಯಾಗಿದೆ.
ಸಂಧ್ಯಾ ಸುರಕ್ಷಾ, ವಿಧವಾ ಮಾಸಾಶನ ಹೆಚ್ಚಳಮಾಡಿ ಸಾಮಾಜಿಕ ಭದ್ರತೆಗೆ ಸಹಾಯ ಮಾಡಿದ್ದೇವೆ. ಇತ್ತೀಚೆಗೆ ಎಸ್.ಸಿ ಹಾಗೂ ಎಸ್.ಟಿ ಸಮುದಾಯಕ್ಕೆ ನಿಗಮ ಬಜೆಟ್ ಅಲ್ಲದೆ 800 ಕೋಟಿ ರೂ. ನೀಡಿದ್ದೇವೆ. 25 ಲಕ್ಷ ಹೆಚ್ಚು ಕುಟುಂಬಕ್ಕೆ 75 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದೇವೆ. 5 ನಗರಗಳಲ್ಲಿ ಮೆಗಾ ಹಾಸ್ಟೆಲ್ ನಿರ್ಮಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
7,500 ಸ್ತ್ರೀಶಕ್ತಿ ಸಂಘಗಳಿಗೆ ಮೂಲನಿಧಿ ಕೊಟ್ಟು, ಅವರಿಗೆ ತರಬೇತಿ ನೀಡಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಜೊತೆ ಸಂಪರ್ಕ ಮಾಡುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಇದರಿಂದ 5 ಲಕ್ಷ ಸ್ತ್ರೀಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಆಗಲಿದೆ.
ಹೊಸ ಶಿಕ್ಷಣ ನೀತಿ, ತಲಾ 20 ಲಕ್ಷ ರೂ. ನಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತೆ. ಕಲ್ಯಾಣ ಕರ್ನಾಟಕದಲ್ಲೂ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ದಾವುಸ್ ಹೋಗಿ ಬಂದ ನಂತರ ಈತನಕ 1.15 ಲಕ್ಷ ಕೋಟಿ ರೂ. ಬಂಡವಾಳ ಹೂಡಲು ವಿವಿಧ ಕೈಗಾರಿಕೆಗಳ ಜೊತೆ ಎಂಒಯುಗೆ ಸಹಿ ಹಾಕಿದ್ದೇವೆ.
3 ಸಾವಿರ ಕೋಟಿ ರೂ. ರಾಜ್ಯ ಹೆದ್ದಾರಿಗೆ, ಐದು ಲಕ್ಷ ಬಸವ ವಸತಿ ಮನೆಗಳ ಮಂಜೂರು ಮಾಡಲಾಗಿದೆ.
ನವೆಂಬರ್ ನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಏರ್ಪಡಿಸಲಾಗುತ್ತಿದೆ. ಈ ವರ್ಷದ ಡಿಸೆಂಬರ್ ಒಳಗಾಗಿ 4 ಲಕ್ಷ ಮನೆ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಬಜೆಟ್ ಅನ್ನು ಒಂದೇ ತಿಂಗಳಲ್ಲಿ ಸರ್ಕಾರಿ ಆದೇಶ ಮಾಡಿದ ಪರಿಣಾಮ 4 ತಿಂಗಳಲ್ಲಿ ಬಜೆಟ್ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಗಿದೆ. ಸರ್ಕಾರದ ಆಡಳಿತದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಇಲ್ಲದಿದ್ದಲ್ಲಿ ಆಯಾ ವರ್ಷದ ಡಿಸೆಂಬರ್ ನಲ್ಲಿ ಬಜೆಟ್ ಅನುಷ್ಠಾನಕ್ಕೆ ಬರುತ್ತಿತ್ತು.
ಬೆಂಗಳೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಅಮೃತ ನಗರೋತ್ಥಾನದಡಿ 6 ಸಾವಿರ ಕೋಟಿ ರೂ.ಗಳನ್ನು ನಿಗಧಿ ಮಾಡಲಾಗಿದೆ. ಹೆಬ್ಬಾಳ ಜಂಕ್ಷನ್ ನಲ್ಲಿ ಒಂದು ವಾರದಿಂದ ಹತ್ತು ದಿನದಲ್ಲಿ ಮೇಲ್ಸೇತುವೆ ಕೆಲಸ ಆರಂಭವಾಗಲಿದೆ. ಗುರುಗುಂಟೆಪಾಳ್ಯ ಫ್ಲೈಓವರ್ & ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ಕಟ್ಟುವ ಗುರಿ ಹೊಂದಿದ್ದೇವೆ ಎಂದರು.
ಇಂದಿನಿಂದ ಒಂದು ಒಂದೂವರೆ ತಿಂಗಳಲ್ಲಿ 25 ಲಕ್ಷ ಎಸ್.ಸಿ ಹಾಗೂ ಎಸ್.ಟಿ ಕುಟುಂಬಗಳಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಗೆ ವಾರ್ಷಿಕ 900 ಕೋಟಿ ರೂ. ಅನುದಾನ ನೀಡುತ್ತಿದೆ. ಸರ್ಕಾರ ಹೊಸದಾಗಿ ಇಂದಿನಿಂದ ಯೋಜನೆ ಜಾರಿಗೆ ತರುತ್ತಿದೆ.
8 ಸಾವಿರ ಶಾಲಾ ಕೊಠಡಿ ನಿರ್ಮಣ ಮೊದಲ ಬಾರಿಗೆ ರಾಜ್ಯದಲ್ಲಿ ಮಾಡಲಾಗುತ್ತಿದೆ. ಈ ಯೋಜನೆಗೆ ವಿವೇಕ ಎಂದು ಹೆಸರಿಡಲಾಗಿದೆ. 5 ಲಕ್ಷ ಯುವಕರಿಗಾಗಿ ವಿಶೇಷ ಯೋಜನೆ ನೀಡುತ್ತಿದ್ದೇವೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ತರುತ್ತಿದ್ದೇವೆ
ಪ್ರತಿಯೊಂದು ಗ್ರಾಮಕ್ಕೆ 1 ಸ್ವಾಮಿ ವಿವೇಕಾನಂದ ಸಂಘ ಮಾಡುತ್ತೇವೆ. 28 ಸಾವಿರ ಗ್ರಾಮಗಳಲ್ಲಿ ಸಂಘ ಸ್ಥಾಪನೆ ಮಾಡಿ ಆ ಮೂಲಕ ಐದು ಲಕ್ಷ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ನೆರವು ನೀಡಲಾಗುತ್ತದೆ. ಇದು ಯುವಕರಿಗೆ ವಿಶೇಷವಾಗಿ ತಂದಿರುವ ಯೋಜನೆಯಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಜನರು ಹಸು ದತ್ತು ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ಪುಣ್ಯಕೋಟಿ ಯೋಜನೆ ಇಂದಿನಿಂದ ಜಾರಿಗೆ ಬರುತ್ತಿದೆ. ಎಲ್ಲೆಲ್ಲಿ ನಮ್ಮ ಗೋಶಾಲೆಯಲ್ಲಿ ಜನರ ಪಾಲುದಾರಿಕೆ ಹಿನ್ನಲೆಯಲ್ಲಿ ಈ ಯೋಜನೆ ಜಾರಿ. ವರ್ಷಕ್ಕೆ 11 ಸಾವಿ ರೂ. ನೀಡಿ ಹಸು ದತ್ತು ತೆಗೆದುಕೊಳ್ಳಬಹುದು.
ಇಂದಿನಿಂದ ನೇಕಾರರ ಮಕ್ಕಳಿಗೂ ವಿದ್ಯಾ ನಿಧಿ ಯೋಜನೆ ವಿಸ್ತರಣೆ ಮಾಡಿದ್ದೇವೆ. 11 ಸಾವಿರ ಮಕ್ಕಳಿಗೆ ಸ್ಕಾಲರ್ ಶಿಪ್ ಸಿಗಲಿದ್ದು, ಇದರಿಂದ ಅವರಿಗೆ ಅನುಕೂಲವಾಗಲಿದೆ.
50 ಸಾವಿರ ಟ್ಯಾಕ್ಸಿ ಚಾಲಕರ ಮಕ್ಕಳಿಗೆ, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ಜಾರಿ ತರುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಅನುಕೂಲ ಮಾಡಿದ್ದೇವೆ. ಎಸ್ ಟಿ ಗೂ ಪ್ರತ್ಯೇಕ ನಿರ್ದೇಶನಾಲಯ ಮಾಡಿ ಸಹಾಯ ಮಾಡಿದ್ದೇವೆ. ಸಾಮಾಜಿಕ ಕೆಲಸ ಮಾಡುತ್ತಿರುವ ಮಠಮಾನ್ಯಗಳಿಗೂ ಸಹಾಯಧನ ನೀಡಿದ್ದೇವೆ.
ರಾಜ್ಯದಲ್ಲಿ ಆರ್ಥಿಕತೆ ಹೆಚ್ಚಿಸಿ ಸರ್ವ ಜನಾಂಗದವರಿಗೂ ಅನುಕೂಲ ಕಲ್ಪಿಸಿಲಾಗುತ್ತಿದೆ. 6 ಹೊಸ ನಗರ ನಿರ್ಮಣ, ಐಐಟಿ ದರ್ಜೆಯ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಹೀಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ, ಆರಗ ಙ್ಞನೇಂದ್ರ, ಗೋಪಾಲಯ್ಯ, ವಿ.ಸೋಮಣ್ಣ, ಮುನಿರತ್ನ, ಮಾಧುಸ್ವಾಮಿ, ಎಸ್.ಟಿ.ಸೋಮಶೇಖರ್, ಶಶಿಕಲಾ ಜೊಲ್ಲೆ ಸೇರಿದಂತೆ ಹಲವು ಸಚಿವರು ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.